ಸಮಯಪ್ರಜ್ಞೆ ಮೆರೆದ ಪುತ್ತೂರು ರೈಲ್ವೇ ಲೈನ್ ಬೀಟ್ ಸಿಬ್ಬಂದಿ
ಪುತ್ತೂರು: ನರಿಮೊಗರು ಸಮೀಪ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಿಂದ ಬಿದ್ದು ಗಾಯಗೊಂಡು ನರಳುತ್ತಿದ್ದ ಪ್ರಯಾಣಿಕರೋರ್ವರನ್ನು ಗಮನಿಸಿದ ಕಬಕ ಪುತ್ತೂರು ರೈಲ್ವೇ ಲೈನ್ ಬೀಟ್ ಸಿಬ್ಬಂದಿ ರಾಜೇಶ್ ಕೆದ್ಕಾರ್ ಎಂಬವರು ರಕ್ಷಣೆ ಮಾಡಿದ ಘಟನೆ ಎ.2ರಂದು ಬೆಳಗ್ಗಿನ ಜಾವ ನಡೆದಿದೆ.
ಸಕಲೇಶಪುರ ನಿವಾಸಿ ಉಮೇಶ್ ಎಂಬವರು ಗಾಯಗೊಂಡವರು. ಅವರು ಮಂಗಳೂರಿನಿಂದ ಬೆಂಗಳೂರಿಗೆ ಹೊಗುತ್ತಿದ್ದ ರೈಲಿನಲ್ಲಿ ಜನರಲ್ ಬೋಗಿಯಲ್ಲಿ ಸಕಲೇಶಪುರಕ್ಕೆ ಪ್ರಯಾಣಿಸುತ್ತಿದ್ದರು. ದಾರಿ ಮಧ್ಯೆ ನರಿಮೊಗರು ಸಮೀಪ ಅವರು ರೈಲಿನಿಂದ ಆಯ ತಪ್ಪಿ ಬಿದಿದ್ದಾರೆ. ಆದರೆ ತೀವ್ರ ಗಾಯಗೊಂಡ ಅವರು ರೈಲ್ವೇ ಹಳಿಯ ಪಕ್ಕದಲ್ಲಿರುವ ಕಲ್ಲಿನ ಕಂಬದ ಪಕ್ಕ ನರಳಾಡುತ್ತಿದ್ದರು. ಬೆಳಗ್ಗೆ ಕರ್ತವ್ಯ ನಿರತ ಕಬಕ ಪುತ್ತೂರು ರೈಲು ನಿಲ್ದಾಣದ ಬೀಟ್ ಸಿಬ್ಬಂದಿ ರಾಜೇಶ್ ಕೆದ್ಕಾರ್ ಅವರು ಹಳಿಯಲ್ಲಿ ತೆರಳುತ್ತಿದ್ದ ವೇಳೆ ಹಳಿಯ ಪಕ್ಕದಲ್ಲಿ ನರಳಾಡುತ್ತಿದ್ದ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ವಿಚಾರಿಸಿ ಬಳಿಕ ಸ್ಥಳೀಯರಿಬ್ಬರ ಸಹಾಯದೊಂದಿಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅವರು ಬೀಳುವ ವಿಚಾರ ಇತರ ಪ್ರಯಾಣಿಕರಿಗೂ ತಿಳಿದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಸಕಲೇಶಪುರಕ್ಕೆ ಪ್ರಯಾಣದ ವೇಳೆ ಆಯ ತಪ್ಪಿ ಬಿದ್ದಿರುವುದಾಗಿ ಗಾಯಳು ಮಹೇಶ್ ತಿಳಿಸಿದ್ದಾರೆ. ಒಟ್ಟಿನಲ್ಲಿ ರೈಲ್ವೇ ಲೈನ್ ಬೀಟ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಪ್ರಯಾಣಿಕರೊಬ್ಬರ ರಕ್ಷಣೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೊಳಪಟ್ಟಿದೆ.