ಪುತ್ತೂರು: ಪ್ರತಿಯೊಬ್ಬರೂ ಕೂಡಾ ಸಮಸ್ಯೆಗಳನ್ನು ಸರಿಯಾಗಿ ಗುರುತಿಸಿ ಅದಕ್ಕೆ ವಿಮರ್ಶಾತ್ಮಕ ಪರಿಹಾರವನ್ನು ಕಂಡುಕೊಳ್ಳುವ ಬಗ್ಗೆ ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಅಲ್ಲದೆ ಜೀವನದಲ್ಲಿ ನಾವು ಮಾಡುವ ಕೆಲಸವನ್ನು ಪ್ರಮಾಣಿಕವಾಗಿ ಪ್ರೀತಿಸಿ ಅದರ ಬಗ್ಗೆ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಹೇಳಿದರು.
ಅವರು ಕಾಲೇಜಿನ ಸಾವರ್ಕರ್ ಸಭಾಭವನದಲ್ಲಿ ನಡೆದ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ 2023-24ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ ಎಂಬಿಎ ಮತ್ತು ಎಂಸಿಎ ವಿಭಾಗಗಳ ಅಂತಿಮ ವರ್ಷದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸ್ನಾತಕೋತ್ತರ ಪದವೀಧರರಾದ ಅರ್ಹ ವಿದ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮ ಸಮಾವರ್ತನ ಸಮಾರಂಭದಲ್ಲಿ ಮಾತಾಡಿದರು. ನಿಮ್ಮ ಜೀವನವನ್ನು ರೂಪಿಸುವಲ್ಲಿ ಅಪಾರ ತ್ಯಾಗವನ್ನು ಮಾಡಿದ ಮಾತಾಪಿತರನ್ನು ಮತ್ತು ಕಲಿತ ವಿದ್ಯಾಸಂಸ್ಥೆಯನ್ನು ಸದಾ ನೆನಪಿನಲ್ಲಿಕೊಳ್ಳಿ ಎಂದರು. ಈ ಮಣ್ಣಿನ, ನೆಲ, ಜಲದ ಬಗ್ಗೆ ಪ್ರೀತಿ ಗೌರವವಿರುವ ಪ್ರಜ್ಞಾವಂತ ಪ್ರಜೆಗಳಾಗಿ ಎಂದು ಅವರು ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಮಾತನಾಡಿ ನೀವು ಗಳಿಸಿರುವ ಪದವಿ ನಿಮ್ಮ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸಿರುತ್ತದೆ. ಈ ಪದವಿ ಅವಕಾಶಗಳ ಬಾಗಿಲನ್ನು ತೆರೆಯುವ ಕೀಲಿಕೈ ಮಾತ್ರ. ದೊರೆತ ಅವಕಾಶಗಳನ್ನು ಉಳಿಸಿ ಜೀವನದಲ್ಲಿ ಹೆಚ್ಚಿನದ್ದನ್ನು ಸಾಧಿಸುವ ಗುರಿ ನಿಮ್ಮದಾಗಬೇಕು ಎಂದರು.
ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಂಸಿಎ ವಿಭಾಗದ ನಿರ್ದೇಶಕಿ ಡಾ.ಜ್ಯೋತಿಮಣಿ.ಕೆ ಸ್ವಾಗತಿಸಿದರು. ಡಾ.ರಾಜೇಶ್ವರಿ.ಎಂ ಪ್ರಮಾಣವಚನ ಬೋಧಿಸಿದರು. ಎಂಬಿಎ ವಿಭಾಗದ ನಿರ್ದೇಶಕ ಡಾ.ರಾಬಿನ್ ಮನೋಹರ್ ಶಿಂಧೆ ವಂದನಾರ್ಪಣೆಗೈದರು. ವಿದ್ಯಾರ್ಥಿನಿಯರಾದ ಸ್ವಸ್ತಿಕಾ ಮತ್ತು ಜೋವಿಟಾ ರೀಮಾ ಡಿ’ಕೋಸ್ಟ ಕಾರ್ಯಕ್ರಮ ನಿರ್ವಹಿಸಿದರು.