ವಿದ್ಯಾರ್ಥಿಗಳಿಗೆ ಸಮಯಪ್ರಜ್ಞೆ ಹಾಗೂ ನಾಯಕತ್ವ ಗುಣ ಬೆಳೆಸಲು ಎನ್.ಎಸ್.ಎಸ್. ಅತ್ಯುತ್ತಮ ವೇದಿಕೆ: ವಿಶ್ವನಾಥ್ ಕೊಪ್ಪ
ಪುತ್ತೂರು: ನೆಹರುನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2024-25ರ ವಾರ್ಷಿಕ ವಿಶೇಷ ಶಿಬಿರವು “ಭಾರತಕ್ಕಾಗಿ ಯುವಜನತೆ, ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ” ಎಂಬ ಧ್ಯೆಯವಾಕ್ಯದೊಂದಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿಯ ರಾಷ್ಟ್ರೀಯ ಸೇವಾ ಯೋಜನಾ ಕೋಶದ ನೆರವಿನೊಂದಿಗೆ ಏ.2ರಿಂದ ಏ.8ರವರೆಗೆ ಏಳು ದಿನಗಳ ಕಾಲ ದೋಳ್ಪಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು, ಇದರ ಉದ್ಘಾಟನೆಯು ಬುಧವಾರ ನಡೆಯಿತು. ಕಾಣಿಯೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ವಿಶ್ವನಾಥ್ ಕೊಪ್ಪ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಭಾರತದಲ್ಲಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಯುವಜನತೆಯನ್ನು ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಪ್ರಮುಖ ಪಾತ್ರ ವಹಿಸುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರ ಮೂಲಕ ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮವನ್ನು ಅರಿಯುವುದರ ಜೊತೆಗೆ ಶಿಸ್ತು, ಭಾತೃತ್ವ, ಸಂಯಮ, ಸಮಯಪ್ರಜ್ಞೆ ಹಾಗೂ ನಾಯಕತ್ವ ಗುಣ ಬೆಳೆಸಲು ಎನ್. ಎಸ್. ಎಸ್ ಅತ್ಯುತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದೋಳ್ಪಾಡಿಯ ಸ. ಉ. ಹಿ. ಪ್ರಾ. ಶಾಲೆಯ ಎಸ್. ಡಿ.ಎಂ.ಸಿ. ಅಧ್ಯಕ್ಷರಾದ ದಯಾನಂದ ಕೂರೇಲು ಮಾತನಾಡಿ, ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಲು ಮತ್ತು ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರಗಳು ಉತ್ತಮ ಅವಕಾಶ ಒದಗಿಸಿಕೊಡುತ್ತವೆ. ಇಲ್ಲಿನ ಅನುಭವಗಳನ್ನು ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸರಕಾರದ ಗುರಿ ಸಾರ್ಥಕವಾಗುತ್ತದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ದೇವಿಪ್ರಸಾದ್ ದೋಳ್ಪಾಡಿ, ಕಾಣಿಯೂರು ಗ್ರಾಮ ಪಂಚಾಯತ್ ನ ಸದಸ್ಯರು ಹಾಗೂ ಸ. ಹಿ. ಪ್ರಾ. ಶಾಲೆ ದೋಳ್ಪಾಡಿಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಲೋಕಯ್ಯ ಪರವ, ಕಾಣಿಯೂರು ಕ್ಲಸ್ಟರ್ ನ ಸಿ. ಆರ್. ಪಿ. ಯಶೋಧ, ಪಿ.ಡಬ್ಲ್ಯೂ.ಡಿ. ಗುತ್ತಿಗೆದಾರರಾದ ಮೋಹನದಾಸ್ ರೈ ಬಲ್ಕಾಡಿ, ಸ. ಹಿ. ಪ್ರಾ. ಶಾಲೆ ದೋಳ್ಪಾಡಿಯ ಮುಖ್ಯ ಗುರು ಜಯಣ್ಣ ಎಸ್ ಮಾತನಾಡಿ, ಶುಭಹಾರೈಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸ. ಹಿ. ಪ್ರಾ. ಶಾಲೆ ದೋಳ್ಪಾಡಿಯ ಎಸ್.ಡಿ.ಎಂ.ಸಿ.ಯ ಉಪಾಧ್ಯಕ್ಷರಾದ ನವೀನಾ ವಿ. ರೈ, ಕಾನೂನು ಉಪನ್ಯಾಸಕಿ ಕು. ಶೈನಿ ವಿಜೇತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಏ.8ರಂದು ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ
ಅದೇ ರೀತಿ ಏ.8ರಂದು ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಾರೋಪ ಭಾಷಣವನ್ನು ವಿಧಾನ ಪರಿಷತ್ ನ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕರಾದ ವಿಜಯನಾರಾಯಣ ಕೆ.ಎಂ. ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ, ಕಾಣಿಯೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಗಂಗಮ್ಮ ಗುಜರ್ಮೆ, ಕಾಣಿಯೂರು ಗ್ರಾಮ ಪಂಚಾಯತ್ ನ ಸದಸ್ಯರು ಹಾಗೂ ಸ. ಹಿ. ಪ್ರಾ. ಶಾಲೆ ದೋಳ್ಪಾಡಿ ಇದರ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಲೋಕಯ್ಯ ಪರವ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್., ದೋಳ್ಪಾಡಿಯ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೇವತಿ, ಚಾರ್ವಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಉದುನಡ್ಕ, ಪುತ್ತೂರಿನ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ (ರಿ.)ನ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಣೂರುಗುತ್ತು, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಯಶೋಧರ ಜೈನ್ ಭಾಗವಹಿಸಲಿದ್ದಾರೆ. ಅದೇ ರೀತಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ. ಕೆ. ರವೀಂದ್ರ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ. ಪಿ., ದೋಳ್ಪಾಡಿಯ ಸ. ಉ. ಹಿ. ಪ್ರಾ. ಶಾಲೆಯ ಮುಖ್ಯ ಗುರುಗಳಾದ ಜಯಣ್ಣ ಎಸ್, ಎಸ್. ಡಿ.ಎಂ.ಸಿ. ಅಧ್ಯಕ್ಷರಾದ ದಯಾನಂದ ಕೂರೇಲು, ಉಪಾಧ್ಯಕ್ಷರಾದ ನವೀನ ವಿ. ರೈ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಮೂಡಿಬರಲಿದೆ.