ಯಾರೂ ಇಲ್ಲದ ಮನೆಗಳೇ ಖದೀಮರ ಟಾರ್ಗೆಟ್
ಉಪ್ಪಿನಂಗಡಿ: ಇಲ್ಲಿನ 34 ನೆಕ್ಕಿಲಾಡಿಯ ನಾಲ್ಕು ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ ಮನೆಗಳನ್ನು ಮಾತ್ರ ಟಾರ್ಗೆಟ್ ಮಾಡಿರುವ ಖದೀಮರು ಲಕ್ಷಾಂತರ ರೂ. ನಗದು ಹಾಗೂ ಚಿನ್ನವನ್ನು ದೋಚಿ ಪರಾರಿಯಾಗಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಇಲ್ಲಿನ ಕೆ.ಇ. ಮುಹಮ್ಮದ್ ಅವರ ಮನೆಯ ಮುಂಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು 2.80 ಲಕ್ಷ ರೂ. ನಗದು ಹಾಗೂ ಒಂದು ಪವನ್ ಚಿನ್ನವನ್ನು ದೋಚಿದ್ದಾರೆ. ಇವರದ್ದೇ ಮನೆಯ ಮೇಲಿನ ಕಟ್ಟಡವನ್ನು ನವಾಝ್ ಅವರಿಗೆ ಬಾಡಿಗೆಗೆ ನೀಡಿದ್ದು, ಆ ಮನೆಗೂ ನುಗ್ಗಿದ ಕಳ್ಳರು ಮನೆಯೊಳಗಡೆಯಿದ್ದ 2 ಲಕ್ಷ ರೂ. ಹಣ ಹಾಗೂ 4 ಗ್ರಾಂ ಚಿನ್ನವನ್ನು ದೋಚಿದ್ದಾರೆ. ಇವುಗಳ ಪಕ್ಕದಲ್ಲೇ ಇರುವ 34 ನೆಕ್ಕಿಲಾಡಿ ಗ್ರಾ.ಪಂ.ನ ಸದಸ್ಯೆ ರತ್ನಾವತಿ ಅವರ ಹಳೆಯ ಮನೆಗೂ ಕೂಡಾ ಕಳ್ಳರು ನುಗ್ಗಿದ್ದಾರೆ. ಅಲ್ಲೇ ಸನಿಹದಲ್ಲಿರುವ ಮುಹಮ್ಮದ್ ಸಿರಾಜ್ ಎಂಬವರ ಮನೆಗೆ ನುಗ್ಗಿರುವ ಕಳ್ಳರು ಅಲ್ಲಿಂದ ಮೂರು ಸಾವಿರ ರೂ. ನಗದು ಹಾಗೂ ಬೆಳ್ಳಿಯ ಎರಡು ಜೊತೆ ಕಾಲು ಚೈನು, ಹಳೆಯ ಮೊಬೈಲ್ ಹಾಗೂ ಕೆಲ ಸಣ್ಣಪುಟ್ಟು ವಸ್ತುಗಳನ್ನು ಕದ್ದೊಯ್ದಿದ್ದಾರೆ.

ಇಲ್ಲಿ ರತ್ನಾವತಿ ಅವರು ಕಳೆದೊಂದು ತಿಂಗಳ ಹಿಂದೆ ಹೊಸ ಮನೆಗೆ ಸ್ಥಳಾಂತರಗೊಂಡಿದ್ದರು. ಹಾಗಾಗಿ ಈ ಮನೆ ಖಾಲಿಯಿತ್ತು. ಇನ್ನುಳಿದ ಮನೆಯವರು ಬುಧವಾರ ದಿನ ಮನೆಯಲ್ಲಿರದೇ ಸಂಬಂಧಿಕರ ಮನೆಗೆ ತೆರಳಿದ್ದರು. ಕಳ್ಳರು ಯಾರೂ ಮನೆಯಲ್ಲಿರದ ಸಂದರ್ಭ ನೋಡಿ ಅಂತಹ ಮನೆಗೆ ಮಾತ್ರ ನುಗ್ಗಿದ್ದಾರೆ. ಮನೆಗಳಲ್ಲಿ ಕಪಾಟುಗಳನ್ನೆಲ್ಲಾ ಜಾಲಾಡಿ, ಅದರೊಳಗಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿದ್ದಾರೆ.
ಸ್ಥಳೀಯರ ಭಾಗೀದಾರಿಕೆಯ ಶಂಕೆ! :
ಮನೆಯವರು ಮನೆಯಲ್ಲಿಲ್ಲದ ಸಂದರ್ಭ ನೋಡಿ ಕಳ್ಳರು ಮನೆಗೆ ನುಗ್ಗಿದ್ದು, ಅದು ಕೂಡಾ ರಾಜಾರೋಷವಾಗಿಯೇ ಮನೆಯ ಎದುರು ಬಾಗಿಲಿನಿಂದಲೇ ನುಗ್ಗಿದ್ದಾರೆ. ಈ ಮನೆಗಳಲ್ಲಿ ಮನೆಯವರಿಲ್ಲ ಎಂಬ ಬಗ್ಗೆ ಸ್ಥಳೀಯರೇ ಕಳ್ಳರಿಗೆ ಮಾಹಿತಿ ನೀಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರೊಬೆಷನರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿ ಮನೀಷಾ, ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್., ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಅವಿನಾಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ರಂಜಾನ್ ಹಬ್ಬದ ಪ್ರಯುಕ್ತ ಮನೆ ಮಂದಿ ತಮ್ಮ ಸಂಬಂಧಿಕರ ಮನೆಗೆ ತೆರಳಿರುವುದು ಮನದಟ್ಟು ಮಾಡಿದ ಕಳ್ಳರು ಈ ಕೃತ್ಯವೆಸಗಿರುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ.
ರೆಫ್ರಿಜರೇಟರ್ ನಲ್ಲಿದ್ದ ಕಸ್ಟರ್ಡ್ ತಿಂದ ಕಳ್ಳರು!
ತಾಲೂಕು ಪಂಚಾಯತ್ ಸಿಬ್ಬಂದಿ ಮಹಮ್ಮದ್ ಸಿರಾಜ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಎಲ್ಲಾ ಕೋಣೆಗಳಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿ ನಗ ನಗದಿಗಾಗಿ ಜಾಲಾಡಿಸಿದ್ದು, ಮಾತ್ರವಲ್ಲದೆ, ಮನೆಯ ಪ್ರಿಡ್ಜ್ ನಲ್ಲಿರಿಸಿದ್ದ ಕಸ್ಟರ್ಡ್ ಮತ್ತಿತರ ತಿಂಡಿ ತಿನಸುಗಳನ್ನು ತಿಂದು ಹೋಗಿದ್ದು, ಸಾವಕಾಶವಾಗಿ ಹಸಿವು ನೀಗಿಸಿಕೊಂಡು ಕಳವು ನಡೆಸಿದಂತಿದೆ.