ನೆಲ್ಯಾಡಿ: ದ.ಕ.ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್, ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಹಾಗೂ ಸಮಾನ ಮನಸ್ಕರ ವೇದಿಕೆ ನೆಲ್ಯಾಡಿ ಇದರ ಆಶ್ರಯದಲ್ಲಿ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ವಾಲಿಬಾಲ್ ಪಂದ್ಯಾಟ ’ ಲೆಜೆಂಡ್ಸ್ ಟ್ರೋಫಿ’ ಎ.5ರಂದು ನೆಲ್ಯಾಡಿ ಬೆಥನಿ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ದ.ಕ.ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎನ್.ಸತೀಶ್‌ಕುಮಾರ್ ತಿಳಿಸಿದ್ದಾರೆ.
ಹೊನಲು ಬೆಳಕಿನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಮಹಿಳೆಯರ 4 ತಂಡಗಳು ಹಾಗೂ ಪುರುಷರ 12 ತಂಡಗಳು ಭಾಗವಹಿಸಲಿದೆ. ಮಹಿಳಾ ವಿಭಾಗದ ಪಂದ್ಯಗಳು ಸಂಜೆ 4 ಗಂಟೆಗೆ ಆರಂಭವಾಗಲಿದ್ದು ಪ್ರಶಸ್ತಿ ಗೆಲ್ಲುವ ತಂಡ ರೂ.7777 ಹಾಗೂ ರನ್ನರ್ ಅಪ್ ತಂಡಕ್ಕೆ ರೂ.5555 ಹಾಗೂ ಟ್ರೋಫಿ ನೀಡಲಾಗುವುದು. ಪುರುಷರ ವಿಭಾಗದ ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು ಪ್ರಶಸ್ತಿ ಗೆದ್ದ ತಂಡಕ್ಕೆ ರೂ.15,555, ರನ್ನರ್ ಅಪ್ ತಂಡಕ್ಕೆ ರೂ.11,111, ತೃತೀಯ ಸ್ಥಾನಗಳಿಸಿದ ತಂಡಕ್ಕೆ ರೂ.7777 ಮತ್ತು ನಾಲ್ಕನೇ ಸ್ಥಾನಗಳಿಸಿದ ತಂಡಕ್ಕೆ ರೂ.5555 ಹಾಗೂ ಟ್ರೋಫಿ ನೀಡಲಾಗುವುದು. ಪಂದ್ಯಾಟವನ್ನು ಉದ್ಯಮಿ ಕಿರಣ್‌ಚಂದ್ರ ಡಿ ಪುಷ್ಪಗಿರಿ ಉರುವಾಲು ಉದ್ಘಾಟಿಸಲಿದ್ದಾರೆ. ಸಮಾನ ಮನಸ್ಕರ ವೇದಿಕೆ ನೆಲ್ಯಾಡಿ ಇದರ ಅಧ್ಯಕ್ಷ ಡಾ.ವರ್ಗೀಸ್ ಕೈಪನಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಂಘಟಕರಾದ ಶಂಕರ್ ಶೆಟ್ಟಿ, ಮೋಹನ್ ಶಿರ್ಲಾಲು, ಸಮಾನ ಮನಸ್ಕರ ವೇದಿಕೆ ನೆಲ್ಯಾಡಿ ಇದರ ಕಾರ್ಯದರ್ಶಿ ಪ್ರಸಾಂತ್ ವರ್ಗೀಸ್, ಕೋಶಾಧಿಕಾರಿ ಜೋಶ್ ಕೆ.ಜೆ., ಮಂಗಳೂರು ತಾಲೂಕು ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಲಿಲ್ಲಿ ಪಾಯಸ್ ಉಪಸ್ಥಿತರಿದ್ದರು.