





ಉಪ್ಪಿನಂಗಡಿ: ಭಗವಂತನೊಂದಿಗೆ ಭಕ್ತರ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ನಿಷ್ಕಲ್ಮಶ ಭಾವದೊಂದಿಗೆ ಭಗವಂತನೊಂದಿಗೆ ನಂಬಿಕೆ ಇರಿಸಿದಾಗ ದೇವರ ಒಲುಮೆಯನ್ನು ಅನುಭವಿಸಲು ಸಾಧ್ಯ ಎನ್ನುವುದನ್ನು ಸಾದರಪಡಿಸುವ ಭಕ್ತಿರಥ ಯಾತ್ರೆಯು ಸಮಾಜಕ್ಕೆ ಸತ್ಪ್ರೇರಣೆಯನ್ನು ನೀಡಲಿದೆ ಎಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯ್ಕ್ ತಿಳಿಸಿದರು.


ಉಪ್ಪಿನಂಗಡಿಗೆ ಬುಧವಾರ ರಾತ್ರಿ ಆಗಮಿಸಿದ ಭಕ್ತಿ ರಥ ಯಾತ್ರೆಯ ರಥವನ್ನು ಶ್ರೀ ದೇವಾಲಯದ ವಠಾರದಲ್ಲಿ ಸ್ವಾಗತಿಸಿದ ಬಳಿಕ ಅವರು ಮಾತನಾಡಿದರು.





ಯಾತ್ರೆಯ ಸಂಚಾಲನಾ ಸಮಿತಿಯ ಸದಸ್ಯ ವಿ. ಶಶಾಂಕ್ ಭಟ್ ಮಾತನಾಡಿ, ಸಂದೇಹ ತೊರೆದು ಸಂಪ್ರೀತಿಯಿಂದ ಭಗವಂತನನ್ನು ನೆನೆದರೆ ಭಗವಂತನ ಅನುಗ್ರಹ ಪಡೆಯಲು ಸಾಧ್ಯ. ಜಾತಿ ಮತ ಪಂಥಗಳ ಗಡಿ ಮೀರಿ, ಸಮಯ ಸಂಧರ್ಭವನ್ನು ಪರಿಗಣಿಸದೆ ಶ್ರದ್ಧೆ ಮತ್ತು ಭಕ್ತಿಯಿಂದ ಶ್ರೀ ರಾಮತಾರಕ ಮಂತ್ರವನ್ನು ಜಪಿಸಿದರೆ ಸತ್ಪಲವು ನಿಶ್ಚಿತವಾಗಿಯೂ ದೊರೆಯುತ್ತದೆ. ಹಿಂದೂ ಸಮಾಜವನ್ನು ಜಾತಿಯ ನೆಲೆಯಲ್ಲಿ ಒಡೆಯಲು ಹಲವಾರು ಶಕ್ತಿಗಳು ಶ್ರಮಿಸುತ್ತಿರುವಾಗ ನಾವೆಲ್ಲರೂ ಶ್ರೀ ರಾಮತಾರಕ ಮಂತ್ರವನ್ನು ಜಪಿಸಿ ಸಂಘಟಿತರಾಗಿ ರಾಷ್ಟ್ರದ ಪರಂವೈಭವಕ್ಕೆ ಸಾಕ್ಷಿಗಳಾಗೋಣ ಎಂದರು.
ರಥಯಾತ್ರೆಯನ್ನು ಭಜನಾ ಕಾರ್ಯಕ್ರಮದ ಮೂಲಕ ಸ್ವಾಗತಿಸಲಾಯಿತು. ಈ ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಡಾ. ರಮ್ಯ ರಾಜಾರಾಮ್, ದೇವಿದಾಸ್ ರೈ, ವೆಂಕಪ್ಪ ಪೂಜಾರಿ, ಹರೀಶ್ ಉಪಾಧ್ಯಾಯ, ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಕೃಷ್ಣಪ್ರಸಾದ್, ಪ್ರಮುಖರಾದ ನವೀನ್ ನೆರಿಯ, ಮೂಲಚಂದ್ರ ಕಾಂಚನ, ಸುದರ್ಶನ್, ರಾಜಶೇಖರ್ ರೈ, ಹೇರಂಭ ಶಾಸ್ತ್ರಿ, ಗಂಗಾಧರ ಟೈಲರ್, ಕಂಗ್ವೆ ವಿಶ್ವನಾಥ ಶೆಟ್ಟಿ, ವಿನೀತ್ ಶಗ್ರಿತ್ತಾಯ, ಶ್ರೀನಿಧಿ ಉಪಾಧ್ಯಾಯ, ಶ್ರೀವತ್ಸ ಉಪಾಧ್ಯಾಯ, ಶ್ರೀಪತಿ ತಂತ್ರಿ, ಜಯಂತ ಪೊರೋಳಿ, ವರ್ಣೇಶ್ ಗಾಣಿಗ, ಗುಣಕರ ಅಗ್ನಾಡಿ, ಚಂದ್ರಶೇಖರ್ ಮಡಿವಾಳ ಮತ್ತಿತರರು ಉಪಸ್ಥಿತರಿದ್ದರು.










