ಪುತ್ತೂರು: ಸುಮಾರು ರೂ.80ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ನೂತನ ಕಚೇರಿ ಕಟ್ಟಡವು ಎ.5ರಂದು ಉದ್ಘಾಟನೆಗೊಂಡಿತ್ತು.
ನೂತನ ಕಟ್ಟಡವನ್ನು ಉದ್ಘಾಟಿಸಿ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಮಕ್ಕಳನ್ನು ಉತ್ತಮ ರೀತಿಯಲ್ಲಿ ಶಿಲ್ಪಿಯಂತೆ ಕೆತ್ತುವವರು ಶಿಕ್ಷಕರು. ಅದಕ್ಕೆ ರೂಪ ನೀಡಿ ಸಾನಿಧ್ಯ ನೀಡುವವರು, ದೇವರಂತೆ ಮಾಡುವವರು ಶಿಕ್ಷಕರು. ಹೀಗಾಗಿ ಮಕ್ಕಳನ್ನು ಕೆತ್ತುವಾಗ ಉತ್ತಮವಾಗಿ ಪ್ರಜ್ವಲಿಸುವಂತೆ ಮಾಡಿ ಉತ್ತಮ ಅಂಕ ಪಡೆಯಲು ಸಹಕಾರಿಯಾಗುವಂತೆ ಮಾಡಬೇಕು. ಮುಂದೆ ಅವರನ್ನು ಸರಕಾರಿ ಹುದ್ದೆಗಳಿಗೆ ಆಯ್ಕೆಯಾಗುವುದಕ್ಕೆ ಸಹಕಾರಿಯಾಬೇಕು. ಉತ್ತರ ಭಾಗದವರು ಬಂದರೆ ಸ್ವಲ್ಪ ಸಮಯ ಕೆಲಸ ಮಾಡಿ ನಂತರ ಅವರ ಹುಟ್ಟೂರಿಗೆ ವರ್ಗಾವಣೆ ತೆಗೆದುಗೊಳ್ಳುತ್ತಾರೆ. ಹೀಗಾಗಿ ಮಕ್ಕಳನ್ನು ಪಾಸ್ ಮಾಡುವುದೇ ಮಾತ್ರವಲ್ಲ. ಡಿಸ್ಟಿಂಕ್ಷನ್ ಬರುವಲ್ಲಿ ಶಿಕ್ಷಕರ ಪ್ರಯತ್ನವಿರಬೇಕು. ಜಿಲ್ಲೆಯವರೇ ಪ್ರಮುಖ ಇಲಾಖೆಗಳಲ್ಲಿ ಕೆಲಸಕ್ಕೆ ಸೇರಬೇಕು. ಅವರು ಇಲ್ಲಿಯೇ ಸೇವೆ ನೀಡಬೇಕು ಎಂದ ಶಾಸಕರು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದ.ಕ ಜಿಲ್ಲೆಯಲ್ಲಿ ಪುತ್ತೂರು ನಂಬರ್ ವನ್ ಪಡೆದಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪರಿಸರದ ಹಿಂದಿನ ನೆನಪು ಮಾಸಿ ಹೋಗಿ ಸುಂದರ ಕಟ್ಟಡ ನಿರ್ಮಾಣಗೊಂಡಿದೆ. ಹೆಚ್ಚು
ಗೌರವಿಸಲ್ಪಡುವ ಇಲಾಖೆಯಾಗಿದೆ. ನೂತನ ಕಟ್ಟಡದ ಮೂಲಕ ಎಲ್ಲಾ ಶೈಕ್ಷಣಿಕ ಸೌಲಭ್ಯಗಳು ದೊರೆಯಲಿ. ವಿದ್ಯಾ ಕ್ಷೇತ್ರ ಬೆಳೆಯಲಿ ಸಹಕಾರಿಯಾಗಲಿ ಎಂದರು.
ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕರ ವೈ ಶಿವರಾಮಯ್ಯ ಮಾತನಾಡಿ, ಎಂಟು ವರ್ಷಗಳ ಕಾಲ ನಾನು ಪುತ್ತೂರಿನಲ್ಲಿ ಕೆಲಸ ಮಾಡಿದ್ದೇನೆ. 1938ರಲ್ಲಿ ನಿರ್ಮಾಣಗೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಟ್ಟಡ, ಹಲವು ಆತಂಕಗಳಿಂದ ಕೂಡಿತ್ತು. ಇದಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಅಂದಿನಿಂದಲೇ ಹೊಸ ಕಟ್ಟಡಕ್ಕೆ ಪ್ರಯತ್ನಿಸಲಾಗಿತ್ತು. ಪ್ರಾರಂಭದಲ್ಲಿ ಒಂದೂವರೆ ಕೋಟಿ ಬೇಡಿಕೆ ಸಲ್ಲಿಸಲಾಗಿದ್ದು, ಇದು ಅಸಾಧ್ಯ ಎಂಬ ಮಾಹಿತಿ ಅರಿತು ಮತ್ತೆ ರೂ.80 ಲಕ್ಷಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದ್ದು ಪೂರ್ಣ ಅನುದಾನ ಮಂಜೂರುಗೊಂಡು ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ ಎಂದರು.
ತಹಶೀಲ್ದಾರ್ ಪುರಂದರ ಮಾತನಾಡಿ, ಶಿಕ್ಷಣ ಇಲಾಖೆಗೆ ಪುರಾತನ ಕಾಲದಿಂದಲೂ ಮಹತ್ವವಿದೆ. ಈಗಲೂ ಬಹಳಷ್ಟು ನೀಡುತ್ತಿದೆ. ಶಿಕ್ಷಕರ ಜೊತೆ ತಾಲೂಕು ಆಡಳಿತವು ಜೊತೆಯಾಗಿ ಕೆಲಸ ಮಾಡಲಿದೆ.
ಸರಕಾರ ಒಂದು ಓಟ್‌ಗೆ ಖರ್ಚು ಮಾಡುವಂತೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ಒಬ್ಬ ವಿದ್ಯಾರ್ಥಿಗಳಿಗೂ ಖರ್ಚು ಮಾಡುತ್ತಿದೆ. ಯಾವುದೇ ವ್ಯಕ್ತಿ ಉನ್ನತ ಹುದ್ದೆಗೆ ಏರಬೇಕಾದರೆ ಒಬ್ಬ ಶಿಕ್ಷಕರ ಪಾತ್ರವಿದ್ದು ಶಿಕ್ಷಕರ ಹುದ್ದೆ ಮಹತ್ವವಾದುದು ಎಂದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಗುಣಮಟ್ಟದ ಶಿಕ್ಷಣ ಹಾಗೂ ಪಾರದರ್ಶಕ ಅಡಳಿತ ನೀಡುವಲ್ಲಿ ಇಂತಹ ಕಟ್ಟಡ ಅವಶ್ಯಕ. ಪುತ್ತೂರಿನ ಗರಿಗೆ ಮುಕುಟದಂತೆ ಶಿಕ್ಷಣಾಧಿಕಾರಿಗಳ ನೂತನ ಕಟ್ಟಡ ನಿರ್ಮಾಣಗೊಂಡಿದ್ದು ಮುಂದಿನ ಶೈಕ್ಷಣಿಕ ಪ್ರಗತಿ, ಫಲಿತಾಂಶದಲ್ಲಿ ಮಾದರಿ ತಾಲೂಕು ಅಗಿ ಮೂಡಿಬರುವಲ್ಲಿ ಸಹಕಾರಿಯಾಗಲಿ ಎಂದರು.
ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಪುತ್ತೂರಿಗೆ ಬಹಳಷ್ಟು ಪ್ರಾಮುಖ್ಯತೆ ಪಡೆದಿದೆ.ಇದರಲ್ಲಿ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳೆಲ್ಲರ ಪಾತ್ರ ಇದೆ. ಸುಸಜ್ಜಿತ ಕಟ್ಟಡ ಉದ್ಘಾಟನೆಗೊಳ್ಳುವ ಮೂಲಕ ಇಲ್ಲಿನ ಕೊರತೆ ನೀಗಿದೆ. ಹೊಸ ಕಟ್ಟಡವು ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಪಡೆಯುವಲ್ಲಿ ಹಾಗೂ ಶೈಕ್ಷಣಿಕ ಬೆಳವಣಿಗೆಗೂ ಸಹಕಾರಿಯಾಗಲಿ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮಾತನಾಡಿ, ಸಾಂಸ್ಕೃತಿಕ, ಐತಿಹಾಸಿಕವಾಗಿ ಹೆದ್ದಾರಿಯಾಗಿರುವ ಪುತ್ತೂರು ಶಿಕ್ಷಣ ಕ್ಷೇತ್ರದಲ್ಲಿಯೂ ನಂಬರ್ ವನ್ ಆಗಿದೆ. ದಕ್ಷ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ರವರ ನೇತೃತ್ವದಲ್ಲಿ ಉತ್ತಮವಾಗಿ ನಡೆಯುತ್ತಿದೆ. ಸುಸಜ್ಜಿತವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನಿರ್ಮಾಣಗೊಂಡಿದ್ದು ದಶಕಗಳ ಬೇಡಿಕೆ ಈಡೇರಿದೆ. ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಶಾಸಕರು ಪುತ್ತೂರಿನಲ್ಲಿದ್ದು ಮುಂದಿನ ಎಲ್ಲಾ ಬೇಡಿಕೆಗಳನ್ನು ಅವರ ಮುಖಾಂತರ ಈಡೇರಲಿ ಎಂದರು.
ರಾಮನಗರ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸುಂದರ ಗೌಡ ಮಾತನಾಡಿ, ಪುತ್ತೂರಿನಲ್ಲಿ ನಾನು 10 ವರ್ಷಗಳ ಕಾಲ ಕರ್ತವು ನಿರ್ವಹಿಸಿದ್ದೇನೆ. ಆಗಲೇ ಹೊಸ ಕಟ್ಟಡಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಅಧಿಕಾರಿಯಾಗಿ ನನ್ನ ಪ್ರಯತ್ನ ಮಾಡಿದ್ದೇನೆ. ಇದೀಗ ಹೊಸ ಕಟ್ಟಡ ಉದ್ಘಾಟನೆಗೊಂಡಿದ್ದು ಮುಂದಿನ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯಲಿ. ಜಿಲ್ಲಾ ಉಪನಿರ್ದೇಶಕರ ಕಚೇರಿಯಾಗಿ ಮೇಲ್ದರ್ಜೆಗೆ ಏರುವಂತಾಗಲಿ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಮಲ್ ಕುಮಾರ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಸಂತ ಮೂಲ್ಯ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ., ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಿಂಗರಾಜು, ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕರುಣಾಕರ ಮಣಿಯಾಣಿ, ಪುತ್ತೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್ ಪಾಟಾಳಿ, ಕಡಬ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಎನ್., ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಜಿ.ಪಂ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆಯ ಇಂಜಿನಿಯರ್ ಸಂದೀಪ್, ಗುತ್ತಿಗೆದಾರ ಕುಂಞಿಕೋಯಿ, ಅಕ್ಷರದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ
ಶಾಸಕ ಅಶೋಕ್ ಕುಮಾರ್ ರೈ, ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ವೈ ಶಿವರಾಮಯ್ಯ, ಕಟ್ಟಡದ ಇಂಜಿನಿಯರ್ ಸಂದೀಪ್, ಗುತ್ತಿಗೆದಾರ ಕುಂಞಿಕೊಯಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ತಹಶೀಲ್ದಾರ್ ಪುರಂದರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ರಾಮನಗರ ಜಿಲ್ಲೆಗೆ ವರ್ಗಾವಣೆಗೊಂಡಿರುವ ಸುಂದರ ಗೌಡ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಲ್ಯಾಪ್‌ಟಾಪ್ ವಿತರಣೆ:
2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಾದ ಕೆಯ್ಯೂರು ಕೆಪಿಎಸ್‌ನ ಸೌಜನ್ಯ ರೈ, ಕೊಂಬೆಟ್ಟು ಪ್ರೌಢಶಾಲೆಯ ಲವಿತಾ, ಉಪ್ಪಿನಂಗಡಿ ಪ್ರೌಢಶಾಲಾ ಅರ್ಪಿತಾ ಎ., ಪಾಪೆಮಜಲು ಶಾಲಾ ಭವ್ಯಶ್ರೀ ಹಾಗೂ ಕೊಂಬೆಟ್ಟು ಪ್ರೌಢಶಾಲಾ ಪವಿತ್ರರವರಿಗೆ ಲ್ಯಾಪ್‌ಟಾಪ್‌ನ್ನು ಶಾಸಕ ಅಶೋಕ್ ಕುಮಾರ್ ರೈಯವರು ವಿತರಿಸಿದರು.
ಶಾಸಕರಿಗೆ ಮನವಿ:
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ರೆಕಾರ್ಡ್ ರೂಮ್, ಸಭಾಂಗಣ, ನೂತನ ಗುರುಭವನ ಕಟ್ಟಡ ನಿರ್ಮಾಣ ಹಾಗೂ ನೆಲ್ಲಿಕಟ್ಟೆಯಿಂದ ಬಿಆರ್‌ಸಿ ಕಟ್ಟಡ ಸ್ಥಳಾಂತರಿಸುವಂತೆ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್ ಪಾಟಾಳಿ ಹಾಗೂ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎರವರು ಮನವಿ ಸಲ್ಲಿಸಿದರು.
ಗಡಿಯಾರ ಕೊಡುಗೆ:
ಸರ್ವೆ ಎಸ್‌ಜಿಎಂ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸರವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಗಡಿಯಾರ ಕೊಡುಗೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಹರಿಪ್ರಸಾದ್ ಶರ್ಮ ಲ್ಯಾಪ್‌ಟಾಪ್ ಪಡೆದವರ ಪಟ್ಟಿ ವಾಚಿಸಿದರು. ಕಡಬ, ನೂಜಿಬಾಳ್ತಿಲ ಸಿಆರ್‌ಪಿ ಗಣೇಶ್ ನಡುವಾಲ್ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ವಂದಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ನಗರ ಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಸದಸ್ಯ ಸುಂದರ ಪೂಜಾರಿ ಬಡಾವು, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಾಂಶುಪಾಲ ಸೀತಾರಾಮ ಕೇವಲ, ದಂತ ವೈದ್ಯ ಡಾ. ರಾಜಾರಾಮ ಕೆ.ಬಿ., ಕೊಳ್ತಿಗೆ ಗ್ರಾ.ಪಂ ಮಾಜಿ ಅಧ್ಯಕ್ಷ ಮಾಜಿ ಅಧ್ಯಕ್ಷ ಶ್ಯಾಮ ಸುಂದರ ರೈ, ನಿವತ್ತ ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ಸಂಚಾಲಕರು, ಮುಖ್ಯಸ್ಥರು, ವಿವಿಧ ಶಾಲೆಗಳ ಎಸ್‌ಡಿಎಂಸಿ ಸದಸ್ಯರು, ಸಂಘ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ನೂತನ ಕಟ್ಟಡ ನಿರ್ಮಾಣಗೊಂಡಿದ್ದು ಅಧ್ಯಾಪಕರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಲವು ವರ್ಷಗಳ ಬೇಡಿಕೆ ಈಡೇರಿದೆ. ಹೊಸ ಕಟ್ಟಡ ಪುತ್ತೂರಿನ ಅಭಿವೃದ್ಧಿಯ ರೆಕ್ಕೆಗೆ ಮತ್ತೊಂದು ಗರಿಯಾಗಿದೆ. ಬೇಡಿಕೆಗಳು ಸಹಜ. ನಿಮ್ಮ ಬೇಡಿಕೆಗಳಿಗೆ ನಿರಾಸೆ ಮಾಡುವುದಿಲ್ಲ. ಕಟ್ಟಡದ ಮೇಲ್ಭಾಗದಲ್ಲಿ ಎಲ್ಲಾ ಸೌಲಭ್ಯ ಒದಗಿಸಲಾಗುವುದು. ಗುರುಭವನ, ಸಭಾಭವನಕ್ಕೂ ಪ್ರಯತ್ನಿಸಲಾಗುವುದು.
-ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು