*ಪ್ರಶಸ್ತಿ ಮುಡಿಗೇರಿಸಿಕೊಂಡ ಶ್ರೀ ವಾರಿಯರ್ಸ್ ಕಾನಾವು
*ದ್ವಿತೀಯ ಸ್ಥಾನ ಪಡೆದ ಸ್ಕಂದ ವಾರಿಯರ್ಸ್ ಬಂಬಿಲ
*ಜಗನ್ನಾಥ ಪೂಜಾರಿ ಮುಕ್ಕೂರು, ಪವರ್ ಮೆನ್ ಮಹಾಂತೇಶ್ ಗೆ ಸಮ್ಮಾನ
ಮುಕ್ಕೂರು: ಮುಕ್ಕೂರು ಪರಿಸರದಲ್ಲಿ ಕ್ರೀಡೆಯ ಮೂಲಕ ಸಾಮರಸ್ಯ, ಐಕ್ಯತೆಯನ್ನು ಮೂಡಿಸುವ ಮಾದರಿ ಕಾರ್ಯ ನಡೆದಿದೆ. ಇಂದಿನ ಕ್ರಿಕೆಟ್ ಪಂದ್ಯಾಟವೂ ಸಾಮಾಜಿಕ ಕಾಳಜಿಯುಳ್ಳ ಕೂಟ ಎಂದು ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಹೇಳಿದರು.
ಕುಂಡಡ್ಕ ನ್ಯೂ ಸ್ಟಾರ್ ಕ್ರಿಕೆಟರ್ಸ್ ಆಶ್ರಯದಲ್ಲಿ ಎ.6ರಂದು ಮುಕ್ಕೂರು ಶಾಲಾ ವಠಾರದಲ್ಲಿ ನಡೆದ ದ್ವಿತೀಯ ವರ್ಷದ ಕುಂಡಡ್ಕ ಪ್ರೀಮಿಯರ್ ಲೀಗ್ ಸೀಸನ್-2( ಕೆ.ಪಿ.ಎಲ್ ) ಕಾರ್ಯಕ್ರಮದ ಬಹುಮಾನ ವಿತರಣ ಸಮಾರಂಭದ ಸಭಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒಂದು ಅರ್ಥಪೂರ್ಣ ಕಾರ್ಯಕ್ರಮ ಇದು. ಇದರ ಹಿಂದೆ ಶ್ರಮಿಸಿದ ಸರ್ವರೂ ಅಭಿನಂದನೆಗೆ ಅರ್ಹರು ಎಂದರು.

ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ಮಾತನಾಡಿ, ಜಾತಿ, ಮತ ಧರ್ಮ ಮೀರಿ ಸಮಾಜವನ್ನು ಒಗ್ಗೂಡಿಸುವ ಕಾರ್ಯದಲ್ಲಿ ಕ್ರೀಡೆಯ ಪಾತ್ರ ಮುಖ್ಯವಾದದ್ದು. ಮುಕ್ಕೂರಿನಲ್ಲಿ ನಡೆದ ಕೆಪಿಎಲ್ ಅದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ಸಾಧಕರಾದ ಜಗನ್ನಾಥ ಪೂಜಾರಿ ಮುಕ್ಕೂರು, ಮಹಾಂತೇಶ್ ಅವರನ್ನು ಅಭಿನಂದಿಸಿರುವುದು ಅರ್ಥಪೂರ್ಣ ಎಂದರು.
ದಲಿತ ಸಂಘಟನೆಯ ಮುಂದಾಳು ಆನಂದ ಬೆಳ್ಳಾರೆ ಮಾತನಾಡಿ, ಯುವಕರು ಸಮಾಜಮುಖಿ ಚಿಂತನೆಯನ್ನು ಮೈಗೂಡಿಸಿಕೊಂಡು ಮುನ್ನಡೆದಾಗ ಅದರಿಂದ ಸಮಾಜಕ್ಕೆ ಒಳಿತಾಗುತ್ತದೆ. ಆ ಕಾರ್ಯ ಇಲ್ಲಿ ಆಗಿರುವುದು ಶ್ಲಾಘನೀಯ ಎಂದರು.
ಕ್ರಿಕೆಟ್ ಪಂದ್ಯಾಕೂಟ ಉದ್ಘಾಟಿಸಿದ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಕ್ರೀಡೆಯಿಂದ ಸಾಮಾಜಿಕ ಸಾಮರಸ್ಯ ಸಾಧ್ಯವಿದೆ. ಕ್ರಿಕೆಟ್ ಕೂಟದ ಮೂಲಕ ಆ ಕಾರ್ಯ ಆಗಿದೆ ಎಂದರು.
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಮಾತನಾಡಿ, ಇಂತಹ ಕ್ರೀಡಾಕೂಟಗಳಿಂದ ಹೊಸ ಪ್ರತಿಭೆಗಳಿಗೆ ವೇದಿಕೆ ದೊರೆತು ಅವರು ಸಾಧನೆ ತೋರಲು ಸಾಧ್ಯವಾಗುತ್ತದೆ ಎಂದರು.
ಜಗನ್ನಾಥ ಪೂಜಾರಿ, ಮಹಾಂತೇಶ್ ಗೆ ಸಮ್ಮಾನ
ಇದೇ ಸಂದರ್ಭದಲ್ಲಿ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಪವರ್ ಮೆನ್ ಮಹಾಂತೇಶ್ ಅವರನ್ನು ಸಂಘಟಕರ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಪೆರುವಾಜೆ ಗ್ರಾ.ಪಂ.ಸದಸ್ಯೆ ಗುಲಾಬಿ ಬೊಮ್ಮೆಮಾರು, ಮುಕ್ಕೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಜಯಂತ ಕುಂಡಡ್ಕ, ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು, ಮೊಗೇರ ಗ್ರಾಮ ಸಮಿತಿ ಪೆರುವಾಜೆ ಅಧ್ಯಕ್ಷ ಶೀನ ಅನವುಗುಂಡಿ, ಶ್ರೀ ವಾರಿಯರ್ಸ್ ಕಾನಾವು ತಂಡದ ಮಾಲಕ ದಿನೇಶ್ ಕಂರ್ಬುತ್ತೋಡಿ, ಸ್ಕಂದ ವಾರಿಯರ್ಸ್ ಬಂಬಿಲ ತಂಡದ ಮಾಲಕ ದೀಕ್ಷಿತ್ ಬಂಬಿಲ, ಕುಂಡಡ್ಕ ಶ್ರೀ ಗುರು ವಾರಿಯರ್ಸ್ ತಂಡದ ಮಾಲಕ ಗುರುಪ್ರಸಾದ್, ಕೊಂಬಾನ್ ವಾರಿಯರ್ಸ್ ತಂಡದ ಮಾಲಕ ದಿವ್ಯರಾಜ್ ಬಂಬಿಲ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ನ್ಯಾಯವಾದಿ ಮಹೇಶ್ ಕೆ ಸವಣೂರು, ವೈದ್ಯ ಡಾ.ನರಸಿಂಹ ಶರ್ಮಾ ಕಾನಾವು, ಮಹಮ್ಮದ್ ಕೆ.ಎಚ್., ಮಣಿಕ್ಕಾರ ಶಾಲಾ ಹಿಂದಿ ಶಿಕ್ಷಕಿ ಗೀತಾ ಮೊದಲಾದವರು ಉಪಸ್ಥಿತರಿದ್ದರು. ಸಂಘಟಕರಾದ ಪುರುಷೋತ್ತಮ ಕುಂಡಡ್ಕ, ಝುಬೈರ್ ಕುಂಡಡ್ಕ, ಅಹ್ಮದ್ ಕುಂಞಿ ಕುಂಡಡ್ಕ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನವಜೀತ್ ಜಾಲ್ಪಣೆ ವಂದಿಸಿದರು.
ಕಾನಾವು ಮಡಿಲಿಗೆ ಪ್ರಶಸ್ತಿ
ಆರು ತಂಡಗಳ ನಡುವೆ ನಡೆದ ಲೀಗ್ ಮಾದರಿಯ ಸ್ಪರ್ಧೆಯಲ್ಲಿ ದಿನೇಶ್ ಕಂರ್ಬುತ್ತೋಡಿ ಮಾಲಕತ್ವದ ಶ್ರೀ ವಾರಿಯರ್ಸ್ ಕಾನಾವು ಅಮೋಘ ಪ್ರದರ್ಶನ ತೋರಿ ಪ್ರಥಮ ಸ್ಥಾನ ಪಡೆಯಿತು. ದೀಕ್ಷಿತ್ ಮಾಲಕತ್ವದ ಸ್ಕಂದ ವಾರಿಯರ್ಸ್ ಬಂಬಿಲ ದ್ವಿತೀಯ ಸ್ಥಾನ ಪಡೆಯಿತು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಶ್ರೀ ವಾರಿಯರ್ಸ್ ಕಾನಾವು ತಂಡದ ಸಬೀರ್ ಪಡೆದರು. ಪೈನಲ್ ಪಂದ್ಯಶ್ರೇಷ್ಠ ಹಾಗೂ ಉತ್ತಮ ಬೌಲರ್ ಪ್ರಶಸ್ತಿಯನ್ನು ಶ್ರೀ ವಾರಿಯರ್ಸ್ ಕಾನಾವು ತಂಡದ ದಿನೇಶ್, ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಸ್ಕಂದ ವಾರಿಯರ್ಸ್ ಬಂಬಿಲ ತಂಡದ ಸುಶಾಂತ್, ಉತ್ತಮ ವಿಕೇಟ್ ಕೀಪರ್ ಪ್ರಶಸ್ತಿಯನ್ನು ಸ್ಕಂದ ವಾರಿಯರ್ಸ್ ಬಂಬಿಲ ತಂಡದ ರಘು, ಉತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿಯನ್ನು ಶ್ರೀ ವಾರಿಯರ್ಸ್ ಕಾನಾವು ತಂಡದ ಪ್ರಜ್ವಲ್ ಅವರು ಪಡೆದರು. ಮಹಿಳಾ ವಿಭಾಗದಲ್ಲಿ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂಪಾ ಮತ್ತು ತಂಡ, ದ್ವಿತೀಯ ಬಹುಮಾನವನ್ನು ಯಶೋಧಾ ಮತ್ತು ತಂಡ ಪಡೆಯಿತು.