ತಾಲೂಕು ಕಚೇರಿಯಲ್ಲಿ ಧೂಳು ಹಿಡಿದಿದ್ದ ಕಡತಗಳು ಜನರ ಮನೆ ಬಾಗಿಲಿಗೆ ತಲುಪಿಸಿದ್ದೇನೆ: ಶಾಸಕ ಅಶೋಕ್ ರೈ
ಪುತ್ತೂರು: ಅಕ್ರಮ ಸಕ್ರಮ,94ಸಿ ಹಕ್ಕು ಪತ್ರ ಪಡೆಯಲು ಬಡವರು ಸಲ್ಲಿಸಿದ್ದ ಅರ್ಜಿಗಳು ತಾಲೂಕು ಕಚೇರಿಯಲ್ಲಿ ದೂಳು ಹಿಡಿದು ರಾಶಿ ಬಿಧ್ದಿದ್ದವು ಅವುಗಳನ್ನು ವಿಲೇವಾರಿ ಮಾಡಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಮನೆ ಬಾಗಿಲಿಗೆ ತಲುಪಿಸಿದ್ದೇನೆ ಇದರಲ್ಲಿ ನನಗೆ ತೃಪ್ತಿ ಇದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಬಜತ್ತೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಮಾತನಾಡಿದರು.
ಬಜತ್ತೂರು ಗ್ರಾಮದ ಬಡವರ ಕಡತಗಳನ್ನು ಈ ಹಿಂದೆ ಆಡಳಿತ ಮಾಡಿದವರು ಯಾಕೆ ವಿಲೇವಾರಿ ಮಾಡಿಲ್ಲ ಎಂದು ನನಗೆ ಗೊತ್ತಿಲ್ಲ,ಉಳ್ಳವರ ಕಡತಗಳು ವಿಲೇವಾರಿಯಾಗಿದೆ ಬಡವರದ್ದು ಕಚೇರಿಯಲ್ಲೇ ಇದೆ ಕೇಳುವವರೇ ಇಲ್ಲದಂತಾಗಿತ್ತು. ಜನರ ವೋಟು ಪಡೆದವರು ಜನರನ್ನು ಮರೆಯಬಾರದು ಅವರ ಕೆಲಸವನ್ನು ಮಾಡಿಕೊಡಬೇಕು ,ಯಾವ ಕಾರಣಕ್ಕೆ ಸುಳ್ಳು ಭರವಸೆ ಕೊಟ್ಟು ಮತ ನೀಡಿದ ಬಡವರಿಗೆ ವಂಚನೆ ಮಾಡಬಾರದು ಎಂದು ಶಾಸಕರು ಹೇಳಿದರು.

ದ್ವೇಷ ಬೀಜ ಬಿತ್ತಿಲ್ಲ:
ಶಾಸಕನಾಗಿ ಇಷ್ಟು ದಿನ ನಾನು ಎಲ್ಲೂ ವಿಷ ಬೀಜ ಬಿತ್ತಿಲ್ಲ, ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಕೆಲಸವನ್ನು ಮಾಡಿಲ್ಲ. ಪುತ್ತೂರು ಕ್ಷೇತ್ರದ ಜನತೆ ಏನು ಆಸೆ ಪಟ್ಟಿದ್ದರೋ ಅದನ್ನು ನೀಡುವ ಕೆಲಸಮಾಡಿದ್ದೇನೆ. ಕುಡಿಯುವ ನೀರು, ಮೆಡಿಕಲ್ ಕಾಲೇಜು,ಕ್ರೀಡಾಂಗಣ, ಆರ್ ಟಿ ಒ ಕೇಂದ್ರ ಸೇರಿದಂತೆ ದೇವಸ್ಥಾನಗಳ ,ರಸ್ತೆಗಳ ಅಭಿವೃದ್ದಿ ಮಾಡಿದ್ದೇನೆ ಎಂದು ಹೇಳಿದ ಶಾಸಕರು ಜನರ ನಡುವೆ ಧರ್ಮಗಳ ವಿಷ ಬೀಜ ಬಿತ್ತು ಧರ್ಮಕ್ಕೆ ಗೆಲ್ಲುವ ,ವೋಟು ಪಡೆಯುವ ದುಷ್ಟ ಕೆಲಸವನ್ನು ಮಾಡಿಲ್ಲ,ಮಾಡುವುದೂ ಇಲ್ಲ ಅದು ಕಾಂಗ್ರೆಸ್ ನ ಸಂಸ್ಕೃತಿಯೂ ಅಲ್ಲ ಎಂದು ಶಾಸಕರು ಹೇಳಿದರು.
ಮೆಡಿಕಲ್ ಕಾಲೇಜು ನನಗಾಗಿ ತಂದಿಲ್ಲ:
ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾಗಿದೆ,ಇದು ನನ್ನ ಲಾಭಕ್ಕೆ ಮಾಡಿದ್ದಲ್ಲ ನನ್ನ ಕ್ಷೇತ್ರದ ಜನತೆಗೋಸ್ಕರ ತಂದಿದ್ದೇನೆ. ಅಧಿಕಾರದಲ್ಲಿರುವಾಗ ಏನಾದರೂ ಜನತೆಗೆ ನೀಡಬೇಕು ಎಂಬ ಉದ್ದೇಶದಿಂದ ಮೆಡಿಕಲ್ ಕಾಲೇಜು ಇಲ್ಲಿಗೆ ತಂದಿದ್ದೇನೆ,ಜನ ಅದನ್ನು ಸ್ವೀಕರಿಸಿದ್ದಾರೆ,ಮುಂದೆ ಪುತ್ತೂರಿನ ಅಭಿವೃದ್ದಿಗೆ ಇದು ಕಾರಣವಾಗಲಿದೆ ಎಂದು ಶಾಸಕರು ಹೇಳಿದರು.
ಹತ್ತಿರದಲ್ಲಿ ಕೊಯಿಲ ಇದ್ದರೂ ಮಾಜಿ ಶಾಸಕರಿಗೆ ಕಾಣಲಿಲ್ಲ:
ಕೊಯಿಲದಲ್ಲಿರುವ ಜಾನುವಾರು ಕೇಂದ್ರ ಮಾಜಿ ಶಾಸಕರು ಕಡೆಗಣಿಸಿದ್ದಾರೆ, ಕಳೆದ ಅವಧಿಯ ಬಿಜೆಪಿ ಸರಕಾರ ಕೊಯಿಲ ಪಶುಸಂಗೋಪಣಾ ಕೇಂದ್ರಕ್ಕೆ ನಯಾ ಪೈಸೆ ನೀಡಿಲ್ಲ, ಸಿದ್ದರಾಮಯ್ಯ ಅವರು ಸಿ ಎಂ ಆಗಿದ್ದಾಗ ಅನುದಾನ ಇಟ್ಟಿದ್ದರು. ಆ ಬಳಿಕ ಬಂದ ಬಿಜೆಪಿ ಸರಕಾರ ಇದನ್ನು ಕಡೆಗಣಿಸಿತ್ತು.ಇದೀಗ 19 ಕೋಟಿ ರೂ ಅನುದಾನ ತಂದು ಅದನ್ನು ಅಭಿವೃದ್ದಿ ಮಾಡುತ್ತಿದ್ದೇವೆ ಎಂದು ಶಾಸಕರು ಹೇಳಿದರು.

11 ಗ್ರಾಮಗಳ ಹಕ್ಕು ಪತ್ರ ವಿತರಣೆ
ಕಾರ್ಯಕ್ರಮದಲ್ಲಿ ಪಡ್ನೂರು, ಬನ್ನೂರು, ಕಬಕ,ಕೊಡಿಪ್ಪಾಡಿ,ಚಿಕ್ಕಮುಡ್ನೂರು,ಕೋಡಿಂಬಾಡಿ,ಬೆಳ್ಳಿಪ್ಪಾಡಿ,ನೆಕ್ಕಿಲಾಡಿ,ಉಪ್ಪಿನಂಗಡಿ,ಬಜತ್ತೂರು,ಹಿರೆಬಂಡಾಡಿ ಗ್ರಾಮಗಳ ಒಟ್ಟು 127 94ಸಿ ಹಕ್ಕು ಪತ್ರವನ್ನು ವಿತರಿಸಲಾಗಿದೆ. ಹಾಗೂ 60 ಅಕ್ರಮ ಸಕ್ರಮ ಕಡತಗಳನ್ನು ವಿಲೇವಾರಿ ಮಾಡಲಾಗಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಅಶೋಕ್ ರೈ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಕ್ಷೇತ್ರದ ಜನರ ಪರವಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಕೆಲಸ ಮಾಡುವ ಮೂಲಕ ಜನರ ಅಚ್ಚುಮೆಚ್ಚಿನ ಶಾಸಕರು ಎಂಬ ಹಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಕ್ಷಾ ತೀತವಾಗಿ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ. ಪುತ್ತೂರು ಕ್ಷೇತ್ರದಲ್ಲಿ ಜನಸ್ನೇಹಿ ಶಾಸಕರಾಗಿರುವ ಶಾಸಕರು ಬಡವರ ಪರ ಕಲ್ಯಾಣ ಯೋಜನೆಯನ್ನು ಪುತ್ತೂರಿಗೆ ತಂದಿದ್ದಾರೆ. ಮೆಡಿಕಲ್ ಕಾಲೇಜನ್ನು ತನ್ನ ಕ್ಷೇತ್ರಕ್ಕೆ ಮಂಜೂರುಗೊಳಿಸುವಲ್ಲಿ ಯಶಸ್ವಿಯಾಗಿರುವ ಶಾಸಕರು ಬಡವರ ಮಕ್ಕಳೂ ವೈದ್ಯರಾಗಬೇಕು ಎಂಬ ಕನಸನ್ನು ಹೊತ್ತು ಈ ಯೋಜನೆಯನ್ನು ತಂದಿದ್ದಾರೆ, ಮೆಡಿಕಲ್ ಕಾಲೇಜು ಆರಂಭವಾದ ಬಳಿಕ ಪುತ್ತೂರು ಸಮಗ್ರ ಅಭಿವೃದ್ದಿಯಾಗಲಿದೆ. ಇಂದು ಜನರ ಸಮ್ಮುಖದಲ್ಲೇ ಆಗುತ್ತಿರುವುದು ಶಾಸಕರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ವರ್ಷಕ್ಕೆ ಒಂದೋ ಎರಡು ಬಾರಿ ನಡೆಯುತ್ತಿದ್ದ ಅಕ್ರಮ ಸಕ್ರಮ ಬೈಠಕ್ ಅಶೋಕ್ ರೈ ಶಾಸಕರಾದ ಬಳಿಕ ವಾರಕ್ಕೊಮ್ಮೆ ಗ್ರಾಮಸ್ಥರ ಮನೆ ಬಾಗಿಲ ಬಳಿ ನಡೆಯುತ್ತಿದೆ ಇದು ಐತಿಹಾಸಿಕ ವಿಚಾರವಾಗಿದೆ ಎಂದು ಬಡಗನ್ನೂರು ಹೇಳಿದರು.
ವೇದಿಕೆಯಲ್ಲಿ ಸದಸ್ಯರಾದ ರೂಪರೇಖಾ ಆಳ್ವ, ರಾಮಣ್ಣ ಪಿಲಿಂಜ, ತಹಶಿಲ್ದಾರ್ ಪುರಂದರ್ ಹೆಗ್ಡೆ,ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ,ಉಪಸ್ಥಿತರಿದ್ದರು.