ಮಂಗಳೂರು ವಿ.ವಿ ಅಂತರ್ ಕಾಲೇಜು ಮಹಿಳೆಯರ ಕ್ರಿಕೆಟ್ ಪಂದ್ಯಾಟ

0

ಎಸ್‌ಎಂಎಸ್ ಬ್ರಹ್ಮಾವರ್ ಚಾಂಪಿಯನ್, ಆಳ್ವಾಸ್ ಮೂಡಬಿದ್ರೆ ರನ್ನರ್ಸ್

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ, ಮಂಗಳೂರು ಹಾಗೂ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಕಾಲೇಜಿನ ಕ್ರೀಡಾಂಗಣದಲ್ಲಿ ಎ.7 ರಂದು ನಡೆದ ಮಂಗಳೂರು ವಿ.ವಿ ಅಂತರ್ ಕಾಲೇಜು ಮಹಿಳೆಯರ ಕ್ರಿಕೆಟ್(ಲೆದರ್ ಬಾಲ್) ಓವರ್ ಆರ್ಮ್ ಪಂದ್ಯಾಟದಲ್ಲಿ ಬ್ರಹ್ಮಾವರ್ ಎಸ್‌ಎಂಎಸ್ ಕಾಲೇಜು ಚಾಂಪಿಯನ್ ಆಗಿದ್ದು, ಆಳ್ವಾಸ್ ಮೂಡಬಿದ್ರೆ ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿತು.


ಪಂದ್ಯಾಟದ ಉತ್ತಮ ಬೌಲರ್ ಆಗಿ ಬ್ರಹ್ಮಾವರ ಎಸ್‌ಎಂಸ್ ಕಾಲೇಜಿನ ಸ್ವರ್ಣ ಗೌರಿ, ಉತ್ತಮ ಬ್ಯಾಟರ್ ಆಗಿ ಆಳ್ವಾಸ್ ಕಾಲೇಜಿನ ಧನುಶ್ರೀ, ಉತ್ತಮ ಸರ್ವಾಂಗೀಣ ಆಟಗಾರಳಾಗಿ ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ಲಕ್ಷ್ಮೀರವರು ಆಯ್ಕೆಯಾದರು.


ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ|ಜೆರಾಲ್ಡ್ ಸಂತೋಷ್ ಡಿ’ಸೋಜರವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಕ್ರಿಕೆಟ್ ಎಂಬುದು ಮೈಂಡ್ ಗೇಮ್ ಜೊತೆಗೆ ಗ್ಲಾಮರಸ್ ಗೇಮ್. ಇಲ್ಲಿ ತಾಂತ್ರಿಕ ನೈಪುಣ್ಯತೆ, ಟೈಮಿಂಗ್ಸ್, ದೈಹಿಕ ಕ್ಷಮತೆ, ನಿರಂತರ ಅಭ್ಯಾಸ ಬಹಳ ಮುಖ್ಯ ಜೊತೆಗೆ ಪಂದ್ಯಾಟ ಹೇಗೆ ಜಯಿಸುವುದು ಎನ್ನುವ ಜ್ಞಾನಾಶಕ್ತಿ ಬಹಳ ಮುಖ್ಯವಾಗುತ್ತದೆ ಎಂದರು.


ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ ಡಾ|ವಿಜಯ ಕುಮಾರ್ ಮೊಳೆಯಾರ್ ಮಾತನಾಡಿ, ಈಗಾಗಲೇ ಐಪಿಎಲ್ ಪಂದ್ಯಾಟ ನಡೆಯುತ್ತಿದೆ. ಕ್ರಿಕೆಟ್‌ನಲ್ಲಿ ಸಾಧನೆ ಮಾಡಬೇಕಾದರೆ ಬದ್ಧತೆ ಬಹಳ ಮುಖ್ಯ. ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್‌ರವರು ನಮ್ಮ ಮುಂದೆ ದಂತಕತೆಯಾಗಿ ಬೆಳೆದು ನಿಂತಿದ್ದಾರೆ. ಕಠಿಣ ಪರಿಶ್ರಮ ಮತ್ತು ಬದ್ಧತೆ ಇದ್ದಾಗ ಸಾಧನೆ ಮಾಡಲು ಸಾಧ್ಯ ಎಂದರು.


ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಡಾ.ಪ್ರಸನ್ನ, ಕ್ರಿಕೆಟ್ ಪಂದ್ಯಾಟದ ವೀಕ್ಷಕರಾಗಿರುವ ಡಾ.ಪೊಡಿಯರವರು ಉಪಸ್ಥಿತರಿದ್ದರು. ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ ಸ್ವಾಗತಿಸಿ, ವಿಜೇತರ ಪಟ್ಟಿ ವಾಚಿಸಿದರು. ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here