ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮಾ.31ರಂದು ಆರಂಭಗೊಂಡ ಬೇಸಿಗೆ ಶಿಬಿರ ’ಕೌಶಲ್ಯ ಪರ್ವ’ ಇದರ ಸಮಾರೋಪ ಸಮಾರಂಭ ಎ.೭ರಂದು ಶಾಲಾ ಸಭಾಂಗಣದಲ್ಲಿ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ತೊಡಗಿಸಿಕೊಳ್ಳುವಿಕೆಯಿಂದ ಬೇಸಿಗೆ ಶಿಬಿರ ಯಶಸ್ವಿಯಾಗಿದೆ. ವಿದ್ಯಾರ್ಥಿಗಳೆಲ್ಲರೂ ಈ ಶಿಬಿರದ ಪ್ರಯೋಜನ ಪಡೆದುಕೊಂಡು ಸಂಸ್ಕಾರವಂತ ಪ್ರಜೆಗಳಾಗಬೇಕೆಂದು ಹೇಳಿದರು. ಅತಿಥಿಯಾಗಿದ್ದ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಬಾರಿಂಜ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗೆ ಸಮಸ್ಯೆಯನ್ನು ಎದುರಿಸಿ ದಿಟ್ಟತನ ತೋರಿಸಿ ಮುನ್ನಡೆಯಬೇಕೇ ಹೊರತು ಸಮಸ್ಯೆಗೆ ಬೆನ್ನು ತೋರಿಸಿ ಪಲಾಯನ ಮಾಡುವ ವಿದ್ಯಾರ್ಥಿಗಳು ಆಗಬಾರದು ಎಂದು ಹೇಳಿದರು.
ಇನ್ನೋರ್ವ ಅತಿಥಿ ಶಿಕ್ಷಕ-ರಕ್ಷಕ ಸಂಘದ ಜೊತೆ ಕಾರ್ಯದರ್ಶಿ ಪುರಂದರ ಗೌಡ ಮಾತನಾಡಿ, ದುಬಾರಿ ಶುಲ್ಕ ಪಾವತಿಸಿ ಶಿಕ್ಷಣ ನೀಡುವ ಸಂಸ್ಥೆಗಳಿಗೂ, ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯಲ್ಲಿ ದೊರೆಯುವ ಸಂಸ್ಕಾರಯುತ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಹೇಳಿದರು. ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಸೌಮ್ಯ ಮಾಧವ ಮಾತನಾಡಿ, ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳು ತಯಾರಿಸಿದ ವಿಷಯವಾರು ಮಾದರಿಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ದಕ್ಷಿಣ ಕನ್ನಡ ಕಬ್ ಹಾಗೂ ಬುಲ್ ಬುಲ್ ವಿಭಾಗದ ಸುವರ್ಣ ಗರಿ, ತೃತೀಯ ಚರಣ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಜೊತೆ ಕಾರ್ಯದರ್ಶಿ ಮಮತಾ, ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಗಾಯತ್ರಿ ಯು.ಎನ್., ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಲೋಹಿತ ಎ.ಉಪಸ್ಥಿತರಿದ್ದರು.
ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಪ್ರಾಚಾರ್ಯ ಪ್ರವೀದ್ ಸ್ವಾಗತಿಸಿ, ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ.ವಂದಿಸಿದರು. ಶಿಬಿರ ಸಂಘಟಕರೂ, ಸಂಸ್ಥೆಯ ಸಹ ಶಿಕ್ಷಕರೂ ಆದ ವಸಂತ್, ಗೋಪಾಲ್, ಸಂಜನ್, ಸಹಶಿಕ್ಷಕಿಯರಾದ ಸಂಧ್ಯಾ, ತ್ರಿವೇಣಿ, ಸುಮನಾ ಕೆರೆಕರೆ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ವ್ಯವಸ್ಥಾಪಕ ರಮೇಶ್ ರೈ ಆರ್.ಬಿ. ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರು ಸಹಕರಿಸಿದರು. ವಿಶೇಷವಾಗಿ ಕುಣಿತ ಭಜನೆ, ವಿಷಯವಾರು ಮಾದರಿಗಳ ಪ್ರದರ್ಶನ, ಕರಕುಶಲ ವಸ್ತುಗಳನ್ನು ಪ್ರದರ್ಶಿಸಲಾಯಿತು.