ಅನ್ನದ ಅಗಳು ಮುತ್ತಾದ ಐತಿಹ್ಯದ ಕೆರೆಯ ಪಕ್ಕದಲ್ಲೇ ಅನ್ನಪ್ರಸಾದ ವಿತರಣೆ
ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೆರೆಗೆ ಬಹಳ ಇತಿಹಾಸವಿದೆ. ಅನ್ನದ ಅಗಳು ಮುತ್ತಾದ ಐತಿಹ್ಯವುಳ್ಳ ಕೆರೆಯ ಪಕ್ಕದಲ್ಲೇ ಈ ಬಾರಿ ಅನ್ನಪ್ರಸಾದ ವಿತರಣೆ ನಡೆಯುತ್ತಿರುವುದು ವಿಶೇಷ. ಏ.10ರಿಂದ 20ರ ತನಕ ಭಕ್ತಾದಿಗಳಿಗೆ ನಿರಂತರ ಅನ್ನಪ್ರಸಾದ ವಿತರಣೆ ಉದ್ದೇಶದಿಂದ ಏ.10ರಂದು ಧ್ವಜಾರೋಹಣ ಬಳಿಕ ಅನ್ನಪೂರ್ಣ ಭೋಜನ ಮಂಟಪವನ್ನು ಉದ್ಘಾಟಿಸಲಾಯಿತು.

ಅನ್ನಪೂರ್ಣೆಯ ಆಶೀರ್ವಾದ ನಿರಂತರ:
ಅನ್ನಪೂರ್ಣ ಮಂಟಪವನ್ನು ಉದ್ಘಾಟಿಸಿದ ದೇವಳದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ಮಾತನಾಡಿ ಜಾತ್ರೆಗೆಂದು ಸಿದ್ದತೆ ಮಾಡಿದ ನೂತನ ಅನ್ನಛತ್ರದಲ್ಲಿ ಒಬ್ಬ ಭಕ್ತನಿಗೂ ದೇವರ ಅನ್ನಪ್ರಸಾದ ಸಿಗಲಿಲ್ಲ ಎಂದು ವಾಪಸ್ ಹೋಗಬಾರದು.ಹಾಗೆ ಆದರೆ ಇದರಿಂದ ದೇವರು ಕೋಪಿಷ್ಟರಾಗುತ್ತಾರೆ.ನನಗೆ ಯಾವ ರೀತಿ ನೈವೇದ್ಯ ಉಂಟೋ ಅದೇ ರೀತಿ ಬಂದ ಭಕ್ತರಿಗೂ ಪ್ರಸಾದ ಲಭಿಸಬೇಕೆಂಬುದು ದೇವರ ಇಚ್ಚೆ. ಆ ಉದ್ದೇಶದಿಂದ ಜಾತ್ರೋತ್ಸವ ಸಂದರ್ಭದಲ್ಲಿ ನಡೆಯುವ ಅನ್ನದಾನ ಅತ್ಯಂತ ಯಶಸ್ವಿಯಾಗಿ ನೆರವೇರಬೇಕು.ಅನ್ನಪೂರ್ಣೆ ನಿರಂತರ ಆಶೀರ್ವಾದ ನೀಡುತ್ತಾಳೆ ಎಂದರು.
ಮನಸ್ಸಿಗೆ ತೃಪ್ತಿದಾಯಕವಾಗುವಂತೆ ಅನ್ನಸಂತರ್ಪಣೆ ಮಾಡಿ:
ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಎಲ್ಲಾ ಭಕ್ತರಿಗೂ ವ್ಯವಸ್ಥಿತ ರೀತಿಯಲ್ಲಿ ಅನ್ನದಾನ ನೀಡುವ ವ್ಯವಸ್ಥೆ ಮಾಡಲಾಗಿದೆ.ಈ ಬಾರಿ ಹೆಚ್ಚಿನ ಜಾಗ ಸಿಕ್ಕಿದ ಕಾರಣ ಇಲ್ಲಿ ಇನ್ನೂ ಒಳ್ಳೆಯ ರೀತಿಯಲ್ಲಿ ಅನ್ನದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರೆಲ್ಲರೂ ಅನ್ನಪ್ರಸಾದ ಸ್ವೀಕರಿಸಬೇಕು.ಇಲ್ಲಿ ನೂಕು ನುಗ್ಗಲು ಏನೂ ಇರುವುದಿಲ್ಲ. ನಾಲ್ಕೈದು ಕೌಂಟರ್‌ನಲ್ಲಿ ಅನ್ನಪ್ರಸಾದ ವಿತರಣೆ ಆಗಲಿದೆ. ಭಕ್ತರು ಪೂಜೆ ಪುನಸ್ಕಾರ ಮಾಡಿ ಅನ್ನಪ್ರಸಾದ ಸ್ವೀಕರಿಸಬೇಕು. ಅನ್ನಪ್ರಸಾದ ವಿತರಣೆ ಮಾಡುವವರು ನಗುಮೊಗದಿಂದ ಇರಬೇಕು. ಯಾರಿಗೂ ಏರು ಧ್ವನಿಯಲ್ಲಿ ಮಾತನಾಡಬಾರದು. ಭಕ್ತರ ಮನಸ್ಸಿಗೆ ಸಂತೃಪ್ತಿಯಾಗುವಂತೆ ಅನ್ನಸಂತರ್ಪಣೆ ಮಾಡಬೇಕು ಎಂದರು.
ಮನೆಯ ಕಾರ್ಯಕ್ರಮವೆಂಬಂತೆ ಸಹಕರಿಸಿ:
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ ದೇವರ ಪ್ರೇರಣೆ, ತಂತ್ರಿಯವರ ಆಶೀರ್ವಾದ, ಶಾಸಕರ ಮಾರ್ಗದರ್ಶನದಂತೆ ಜಾತ್ರೋತ್ಸವ ಯಶಸ್ವಿಯಾಗಿ ನಡೆಯಲಿದೆ. ಅದರಲ್ಲೂ ಇವತ್ತು ಅನ್ನಪ್ರಸಾದ ವಿತರಣೆಗೆ ನೂತನ ವ್ಯವಸ್ಥೆ ಕಲ್ಪಿಸಲಾಗಿದೆ. ಅದು ಕೂಡಾ ಹಿರಿಯರು ಹೇಳಿದಂತೆ ಈ ಕೆರೆಗೆ ಬಹಳ ಮಹತ್ವವಿದೆ.ಇದರ ಹಿನ್ನೆಲೆ ಎಲ್ಲರಿಗೂ ತಿಳಿದ ವಿಚಾರ.ಅಂತಹ ವ್ಯವಸ್ಥೆಯ ಉದ್ಘಾಟನೆ ಭಾಗ್ಯ ನಮಗೆ ಸಿಕ್ಕಿದೆ. ತಾಂಬೂಲ ಪ್ರಶ್ನೆಯ ಸಂದರ್ಭದಲ್ಲಿ ರಕ್ತೇಶ್ವರಿಯ ಕೋಪ ಶಮನಕ್ಕೆ ಆಕೆಯನ್ನು ಒಳಾಂಗಣದಲ್ಲಿ ತರುವ ವ್ಯವಸ್ಥೆಯನ್ನೂ ಮಾಡಲಾಯಿತು.ಅದರ ಬಳಿಕ ಹೇಗೆ ಕೆಲಸ ಆಗುತ್ತಿದೆ ಎಂಬುದೇ ಗೊತ್ತಿಲ್ಲ.ಎಲ್ಲವೂ ತನ್ನಿಂತಾನೆ ನಡೆಯುತ್ತಿದೆ.ಕೆಲಸ ಮಾಡುವ ಸಂದರ್ಭ ದಾನಿಗಳು ಜಲ್ಲಿ, ಸಿಮೆಂಟ್, ಪೈಂಟ್ ಎಲ್ಲವನ್ನೂ ನೀಡಲು ಮುಂದೆ ಬಂದಿದ್ದಾರೆ.ಭಕ್ತರೋರ್ವರು ಬೋರ್‌ವೆಲ್ ಕೂಡಾ ಕೊಡಲು ಮುಂದೆ ಬಂದಿದ್ದಾರೆ.ಇವತ್ತು ಭಕ್ತರು ಮನೆಯ ಕಾರ್ಯ ಎಂದು ಗ್ರಹಿಸಿ ಸಹಕರಿಸಿ,ಅನ್ನಪ್ರಸಾದ ಸ್ವೀಕರಿಸುವಂತೆ ಮನವಿ ಮಾಡಿದರು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ್ ರೈ ಮೇಗಿನಗುತ್ತು, ಸಮಿತಿ ಸದಸ್ಯರಾದ ಈಶ್ವರ ಬೆಡೇಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ಮಹಾಬಲ ರೈ ವಳತ್ತಡ್ಕ, ಕೃಷ್ಣವೇಣಿ, ನಳಿನಿ ಪಿ ಶೆಟ್ಟಿ, ವಿನಯ ಸುವರ್ಣ, ದಿನೇಶ್ ಕುಲಾಲ್, ದೇವಳದ ಪ್ರಧಾನ ಅರ್ಚಕ ವೇ.ಮೂ ವಸಂತ ಕೆದಿಲಾಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ,ಕೋಟಿಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಪುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ, ರೈ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ನಯನಾ ರೈ, ಜಗದೀಶ್ ಸಾಮಾನಿ, ಪಿ.ಜಿ.ಚಂದ್ರಶೇಖರ್ ರಾವ್, ಸ್ಯಾಕ್ಸೋಫೋನ್ ವಾದಕ ಪಿ.ಕೆ.ಗಣೇಶ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಮೊದಲ ದಿನವೇ ದಶಸಹಸ್ರ ಭಕ್ತರಿಂದ ಅನ್ನಪ್ರಸಾದ ಸ್ವೀಕಾರ :
ಮಧ್ಯಾಹ್ನ ಶ್ರೀ ದೇವರ ಮಹಾಪೂಜೆ ಬಳಿಕ ನೂತನ ಅನ್ನಪೂರ್ಣ ಭೋಜನ ಮಂಟಪದ ಪಾಕಶಾಲೆಯಲ್ಲಿ ಪಲ್ಲಪೂಜೆ ನಡೆಯಿತು.ಪಲ್ಲಪೂಜೆಯ ಬಳಿಕ ಭಕ್ತರಿಗೆ ಅನ್ನಪ್ರಸಾದ ವಿತರಣೆ ನಡೆಯಿತು.ಅನ್ನಪ್ರಸಾದ ಸ್ವೀಕರಿಸಲು ನಿಂತಿದ್ದ ಭಕ್ತರ ಸರತಿ ಸಾಲುಗಳು ದೇವಳದ ಎದುರು ಭಾಗದ ಮುಖದ್ವಾರದ ತನಕ ತಲುಪಿತ್ತು.ಅನ್ನಪ್ರಸಾದ ವಿತರಣೆಗೆ ಪ್ರತ್ಯೇಕವಾಗಿ ಮೂರು ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿತ್ತು.ಎರಡನೇ ಬಾರಿ ಅನ್ನಪ್ರಸಾದ ಸ್ವೀಕರಿಸಲು ಪ್ರತ್ಯೇಕ ಕೌಂಟರ್ ಮಾಡಲಾಗಿತ್ತು.ಅಲ್ಲಿಂದ ಪಾಯಸದ ಕೌಂಟರ್ ಕೂಡಾ ಪ್ರತ್ಯೇಕವಾಗಿತ್ತು.ಮಜ್ಜಿಗೆ ವಿತರಣೆಗೂ ಪ್ರತ್ಯೇಕ ಪ್ರತ್ಯೇಕ ಕೌಂಟರ್ ಮಾಡಲಾಗಿತ್ತು.ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ ಕಾರಣ ಅನ್ನಛತ್ರ ಭಕ್ತರಿಂದ ತುಂಬಿತ್ತು.ಭಕ್ತರಿಗೆ ಸಾವಕಾಶವಾಗಿ ಅನ್ನಪ್ರಸಾದ ಸ್ವೀಕರಿಸಲು, ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನೂ ಮಾಡಲಾಗಿತ್ತು.ವಿಚಾರಣೆ ಕೌಂಟರ್ ಕೂಡಾ ತೆರೆಯಲಾಗಿತ್ತು.ಹಿರಿಯರಿಗೆ ಮತ್ತು ಸಣ್ಣ ಮಕ್ಕಳನ್ನು ಕರೆದುಕೊಂಡು ಬಂದವರಿಗೆ ಪ್ರತ್ಯೇಕವಾಗಿ ಕುಳಿತು ಬಾಳೆಎಲೆಯಲ್ಲಿ ಅನ್ನಪ್ರಸಾದ ವಿತರಣೆ ಕಾರ್ಯ ನಡೆಯಿತು. ತಂತ್ರಿ, ವೈದಿಕರಿಗೆ ಪ್ರತ್ಯೇಕ ಕೊಠಡಿಯಲ್ಲಿ ಅನ್ನಪ್ರಸಾದ ವಿತರಣೆ ನಡೆಯಿತು. ಆಹಾರದ ಸುರಕ್ಷತೆಯ ದೃಷ್ಟಿಯಿಂದ ಅನ್ನಪ್ರಸಾದ ಬಡಿಸುವವರು ಮುಖಗವಸು, ತಲೆ ಹೊದಿಕೆ ಹಾಕಿಕೊಂಡಿದ್ದರು.
ಇತಿಹಾಸ ಮರುಕಳಿಸುತ್ತಿದೆ
ಪುತ್ತೂರು ಜಾತ್ರೋತ್ಸವ ಬಹಳ ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯ. ಅದು ಜೀರ್ಣೋದ್ದಾರ ಆಗಿ ಬ್ರಹ್ಮಕಲಶೋತ್ಸವದ ಬಳಿಕ ಮತ್ತೂ ವೈಭವದಿಂದ ನಡೆಯುತ್ತಿದೆ. 2025ರ ಜಾತ್ರೋತ್ಸವದಲ್ಲಿ ಧ್ವಜಾರೋಹಣ ನೋಡುವಾಗಲೇ ಭಕ್ತಾದಿಗಳು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಜಾತ್ರೋತ್ಸವ ಸಂದರ್ಭದಲ್ಲಿ ಬರುವ ಭಕ್ತಾದಿಗಳಿಗೆ ಅತ್ಯಂತ ಯಶಸ್ವಿಯಾಗಿ ಅನ್ನದಾಸೋಹ ನಡೆಯಬೇಕೆಂದು ಅನ್ನಪೂರ್ಣ ಮಂಟಪವೂ ಉದ್ಘಾಟನೆಗೊಂಡಿದೆ. ಹೀಗೆ ಪ್ರತಿ ಜಾತ್ರೆಯಲ್ಲೂ ಮಹಾಲಿಂಗೇಶ್ವರ ಏನಾದರೊಂದು ವಿಶೇಷತೆ ತೋರಿಸುತ್ತಾ ಇದ್ದಾನೆ. ಪುತ್ತೂರು ಮಹಾದೇವನ ಬ್ರಹ್ಮರಥ ಭಾರತದಲ್ಲೇ ಪ್ರಸಿದ್ಧಿಯನ್ನು ಪಡೆದಿದೆ. 2025ರಲ್ಲಿ ಪುತ್ತೂರಿನ ಶಾಸಕ ಅಶೋಕ್ ರೈ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ನೇತೃತ್ವದಲ್ಲಿ ಬರುವಂತಹ ಭಕ್ತರಿಗೆ ಅನ್ನದಾನ ಯಶಸ್ವಿಯಾಗಿ ನಡೆಯಬೇಕೆಂದು ಅನ್ನಪೂರ್ಣ ಮಂಟಪವನ್ನು ಉದ್ಘಾಟನೆ ಮಾಡಲಾಗಿದೆ. ಇಲ್ಲಿ ನಮ್ಮ ಕಲ್ಪನೆಯಂತೆ, ಪುತ್ತೂರು ಮಹಾಲಿಂಗೇಶ್ವರ ದೇವರ ಇತಿಹಾಸವನ್ನು ನೋಡಿದರೆ ಹಿಂದೆ ಪುತ್ತೂರಿನ ಕೆರೆಯ ಸಮೀಪದಲ್ಲೇ ಅನ್ನದಾನ ನಡೆಯುತ್ತಿತ್ತು. ಆ ಅನ್ನದ ಅಗಳುಗಳೇ ಮುತ್ತಾಗಿ ಪರಿವರ್ತನೆ ಆದ ಕಾರಣ ಇಂದು ಕೂಡಾ ಪುತ್ತೂರು ಎಂದರೆ ಅದು ಮುತ್ತೂರು ಎಂದು ಪ್ರಸಿದ್ದಿ ಪಡೆದಿದೆ.ಆ ರೀತಿಯ ಚರಿತ್ರೆಯ ಕ್ಷೇತ್ರವಿದು.ಈಗ ಮತ್ತೊಮ್ಮೆ ಆ ಕೆರೆಯ ಸಮೀಪದಲ್ಲೇ ಅನ್ನಛತ್ರ ಉದ್ಘಾಟನೆ ಆಗಿದೆ ಎಂದರೆ ಇತಿಹಾಸ ಮರುಕಳಿಸಿದೆ.ಈ ಜಾತ್ರೋತ್ಸವವು ಕೂಡಾ ಬ್ರಹ್ಮಕಲಶೋತ್ಸವ ರೀತಿಯಲ್ಲಿ ನಡೆಯಲಿದೆ. ಅದೇ ರೀತಿ ಶಿವಪೂಜೆಯನ್ನು ಪ್ರತಿಯೊಬ್ಬ ಭಕ್ತರೂ ಮಾಡುವಂತೆ ವಿನಂತಿ
ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ದೇವಳದ ಪ್ರಧಾನ ತಂತ್ರಿಗಳು
30 ಲಕ್ಷ ಸಂಗ್ರಹ, 32 ಲಕ್ಷ ಖರ್ಚು
ಮುಂದಿನ ದಿನ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಆರಂಭಿಸುತ್ತೇವೆ. ಇದಕ್ಕೂ ಭಕ್ತರ ಸಹಕಾರ ಬೇಕು. ಹುಂಡಿಗೆ ಹಣ ಹಾಕಿದರೆ ಬೇರೆ ಬೇರೆ ಕಡೆ ಹೋಗುತ್ತದೆ ಎಂಬ ಭಾವನೆ ಕೆಲವರ ಮನಸ್ಸಿನಲ್ಲಿ ಇದೆ.ಆದರೆ ಅದು ಎಲ್ಲಿಗೂ ಹೋಗುವುದಿಲ್ಲ ದೇವಸ್ಥಾನದ ಅಭಿವೃದ್ಧಿಗೇ ಬರುತ್ತದೆ. ಅದೇ ರೀತಿ ಕೆಲವರ ಮನಸ್ಸಿನಲ್ಲಿ,ದೇವಸ್ಥಾನದಲ್ಲಿ ಬೇಕಾದಷ್ಟು ಹಣ ಇದೆ ಎಂಬ ಭಾವನೆ ಇದೆ.ಇಲ್ಲಿಯೂ ದೇವಸ್ಥಾನದಲ್ಲಿ ರೂ.30 ಲಕ್ಷ ಕಲೆಕ್ಷನ್, ರೂ.32 ಲಕ್ಷ ಖರ್ಚು ಆಗುತ್ತಿದೆ. ಆದ್ದರಿಂದ ಭಕ್ತರು ಹೆಚ್ಚಿನ ಸೇವೆ ಮಾಡಿಸಬೇಕು. ಮುಂದಿನ ದಿನ ಆಗುವ ಜೀರ್ಣೋದಾರಕ್ಕೆ ಎಲ್ಲರೂ ಕೈ ಜೋಡಿಸಬೇಕಾಗಿ ವಿನಂತಿ
ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು