ಪುತ್ತೂರು: ರಾಷ್ಟ್ರೀಯ ಹೆದ್ದಾರಿ 274ರಲ್ಲಿ ಒಳಮೊಗ್ರು ಗ್ರಾಪಂ ವ್ಯಾಪ್ತಿಗೆ ಒಳಪಟ್ಟಂತೆ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ರಚನೆ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವ ಬಗ್ಗೆ ಈಗಾಗಲೇ ದೂರುಗಳು ಬಂದಿದ್ದು ಇಂತಹ ಅನಧಿಕೃತ ಅಂಗಡಿ ವ್ಯಾಪಾರ ಕೇಂದ್ರಗಳನ್ನು ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ರವರಿಗೆ ಮನವಿ ಮಾಡಿಕೊಳ್ಳುವುದು ಎಂದು ಒಳಮೊಗ್ರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ಎ.೯ ರಂದು ಗ್ರಾಪಂ ಕಛೇರಿ ಸಭಾಂಗಣದಲ್ಲಿ ನಡೆಯಿತು. ಸಾರ್ವಜನಿಕ ಅರ್ಜಿ ವಿಚಾರಣೆಯ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್.ರವರು ವಿಷಯ ಪ್ರಾಸ್ತಾಪಿಸಿ ಈಗಾಗಲೇ ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿರುವ ರಾಷ್ಟ್ರೀಯ ಹೆದ್ದಾರಿ ೨೭೫ ರಲ್ಲಿ ಅನಧಿಕೃತವಾಗಿ ಕಟ್ಟಡ ರಚನೆ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯೂ ಹೆಚ್ಚಾಗಿದೆ. ಇದಲ್ಲದೆ ಇಂತಹ ವ್ಯಾಪಾರಕ್ಕೆ ಗ್ರಾಪಂನಿಂದ ಯಾವುದೇ ಅನುಮತಿ ಕೂಡ ಇರುವುದಿಲ್ಲ. ಗ್ರಾಪಂನಿಂದ ಪರವಾನಗೆ ಪಡೆದುಕೊಂಡು ವ್ಯಾಪಾರ ನಡೆಸುತ್ತಿರುವ ವ್ಯಾಪಾರಸ್ಥರಿಗೆ ಇದರಿಂದ ತೊಂದರೆಗಳು ಉಂಟಾಗುತ್ತಿವೆ. ಈಗಾಗಲೇ ಇಂತಹ ಒಂದು ಅನಧಿಕೃತ ವ್ಯಾಪಾರ ಕೇಂದ್ರದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಅದನ್ನು ಗ್ರಾಪಂ ಸಹಕಾರದೊಂದಿಗೆ ತೆರವು ಕೂಡ ಮಾಡಲಾಗಿದೆ. ಆದ್ದರಿಂದ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿರುವ ಅನಧಿಕೃತ ಕಟ್ಟಡ, ವ್ಯಾಪಾರ ಕೇಂದ್ರಗಳನ್ನು ತೆರವು ಮಾಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಮಾಡಿಕೊಳ್ಳುವ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಗ್ರಾಪಂ ಆಡಳಿತ ಮಂಡಳಿ ಸಂಪೂರ್ಣ ಒಪ್ಪಿಗೆಯನ್ನು ನೀಡಿತು ಮತ್ತು ಅದರಂತೆ ನಿರ್ಣಯ ಕೈಗೊಳ್ಳಲಾಯಿತು.
ಜಾಹೀರಾತು ಫಲಕಕ್ಕೆ ಅನುಮತಿ ಕಡ್ಡಾಯ
ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಬಹಳಷ್ಟು ಜಾಹೀರಾತು ಫಲಕ, ಬ್ಯಾನರ್‌ಗಳು ಕಂಡು ಬರುತ್ತಿದ್ದು ರಸ್ತೆ ಬದಿಯಲ್ಲಿ ಜಾಹೀರಾತು ಫಲಕ ಅಳವಡಿಸಲು ಗ್ರಾಪಂನಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು ಆದರೆ ಪರವಾನಗೆ ತೆಗೆದುಕೊಳ್ಳದೇ ಜಾಹೀರಾತು ಫಲಕಗಳನ್ನು ಅಳವಡಿಸಿರುವುದು ಕಂಡು ಬರುತ್ತಿದೆ ಈ ಬಗ್ಗೆ ಏನು ಕ್ರಮ ಕೈಗೊಳ್ಳುವುದು ಎಂದು ಪಿಡಿಒರವರು ಸಭೆಗೆ ತಿಳಿಸಿದರು. ಮುಂದಿನ ದಿನಗಳಲ್ಲಿ ಪಂಚಾಯತ್‌ನಿಂದ ಪರವಾನಗೆ ಪಡೆದುಕೊಳ್ಳದೆ ರಸ್ತೆ ಬದಿಯಲ್ಲಿ ಜಾಹೀರಾತು ಫಲಕ ಅಳವಡಿಸಿದರೆ ಅಂತಹ ಜಾಹೀರಾತು ಫಲಕಗಳನ್ನು ತೆರವುಗೊಳಿಸುವುದು ಹಾಗೂ ದಂಡ ವಿಧಿಸುವುದು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ರವರಿಗೆ ಮನವಿ ಮಾಡಿಕೊಳ್ಳುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಕಸ ಹಾಕಿದರೆ ದಂಡ, ಸಿಸಿ ಕ್ಯಾಮಾರದ ಕಣ್ಗಾವಲು
ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಗ್ರಾಪಂನಿಂದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು ಆದರೂ ಗ್ರಾಮದ ಕೆಲವೊಂದು ಕಡೆಗಳನ್ನು ಕಸ, ತ್ಯಾಜ್ಯ ಹಾಕುತ್ತಿರುವುದು ಕಂಡು ಬರುತ್ತಿದ್ದು ಕಸ ಹಾಕುವವರನ್ನು ಪತ್ತೆ ಹಚ್ಚುವ ಸಲುವಾಗಿ ಗ್ರಾಪಂನಿಂದ ಸಿಸಿ ಕ್ಯಾಮರಾ ಅಳವಡಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಕಸ ಹಾಕುವವರನ್ನು ಪತ್ತೆ ಹಚ್ಚುವ ಮೂಲಕ ಅವರಿಗೆ ದಂಡ ವಿಧಿಸುವುದು ದಂಡ ವಿಧಿಸಲು ವಿರೋಧಿಸಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಮೀನು ಮಾರುಕಟ್ಟೆಗೆ ಜಮೀನು ಬೇಕಾಗಿದೆ
ಗ್ರಾಮ ಪಂಚಾಯತ್‌ನಿಂದ ಮೀನು ಮಾರುಕಟ್ಟೆ ಮಾಡುವ ಉದ್ದೇಶವಿದ್ದು ಅದಕ್ಕಾಗಿ ಜಮೀನಿನ ಅವಶ್ಯಕತೆ ಇದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಮೀನು ಮಾರುಕಟ್ಟೆಗೆ ಸೂಕ್ತ ಜಮೀನು ಕಾದಿರಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಕುಡಿಯುವ ನೀರಿನ ಬಗ್ಗೆ ಚರ್ಚೆ ನಡೆಸಲಾಯಿತು. ಕುಡಿಯುವ ನೀರಿನ ಬಿಲ್ ಪಾವತಿ ಮಾಡದವರಿಗೆ ನೋಟೀಸ್ ನೀಡುವುದು ಈಗಾಗಲೇ ಹಲವು ಬಾರಿ ನೋಟಿಸ್ ನೀಡಿದರೂ ಬಿಲ್ ಪಾವತಿ ಮಾಡದೇ ಇರುವವರ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಎಂದು ನಿರ್ಣಯಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ, ಲತೀಫ್ ಕುಂಬ್ರ, ಮಹೇಶ್ ರೈ ಕೇರಿ, ಪ್ರದೀಪ್, ಶಾರದಾ, ನಳಿನಾಕ್ಷಿ, ವನಿತಾ ಮನೋಜ್, ರೇಖಾ ಯತೀಶ್, ನಿಮಿತಾ ರೈ, ಚಿತ್ರಾ ಬಿ.ಸಿ, ಸುಂದರಿ ಉಪಸ್ಥಿತರಿದ್ದರು. ಪಿಡಿಓ ಅವಿನಾಶ್ ಬಿ.ಆರ್.ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿಗಳನ್ನು ಓದಿ ಹೇಳಿದರು. ಕಾರ್ಯದರ್ಶಿ ಜಯಂತಿ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿಗಳಾದ ಕೇಶವ, ಜಾನಕಿ, ಗುಲಾಬಿ, ಮೋಹನ್, ಸಿರಿನಾ ಸಹಕರಿಸಿದ್ದರು.