*ಜೀವನದಲ್ಲಿ ನಡೆಯುವ ಸಣ್ಣ ಸಣ್ಣ ಘಟನೆಗಳು ಅಗಾಧವಾದ ಅನುಭವಗಳನ್ನು ನೀಡುತ್ತವೆ: ಬಡೆಕ್ಕಿಲ ಪ್ರದೀಪ್
*ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ನಡೆದ ರಾಜ್ಯಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರ
- *ಖ್ಯಾತ ಧ್ವನಿ ಕಲಾವಿದ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಬಡೆಕ್ಕಿಲ ಪ್ರದೀಪ್ ಭಾಗಿ
ಜೀವನದಲ್ಲಿ ಮುಂದೆ ಸಾಗುತ್ತಿರಬೇಕಾದರೆ ಸಾಕಷ್ಟು ಗೊಂದಲಗಳು ಎದುರಾಗುತ್ತವೆ. ಇದನ್ನು ನಿವಾರಿಸಿಕೊಂಡು ಸಾಗುವುದೇ ನಿಜವಾದ ಬದುಕು ಎನಿಸಿಕೊಳ್ಳುತ್ತದೆ. ಜೀವನದಲ್ಲಿ ಸೋಲು ಗೆಲುವುಗಳು ಸಹಜ. ಸೋಲಿನಿಂದ ನಿರಾಶರಾಗದೆ ಸ್ಪಷ್ಟವಾದ ಗುರಿ ಇಟ್ಟುಕೊಂಡು ನಮ್ಮ ಆಸಕ್ತಿಗನುಗುಣವಾಗಿ ಕಂಡ ಕನಸನ್ನು ಬೆನ್ನತ್ತಿ ಹೋಗುವ ಹವ್ಯಾಸವನ್ನು ಬೆಳೆಸಿಕೊಂಡಲ್ಲಿ, ಜೀವನದಲ್ಲಿ ಸಫಲತೆ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಹಲವು ಕನ್ನಡ ಕಿರುತೆರೆ ವಾಹಿನಿಗಳ ಖ್ಯಾತಧ್ವನಿ ಕಲಾವಿದ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಬಡೆಕ್ಕಿಲ ಪ್ರದೀಪ್ ಇವರು ನುಡಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಯುರೇಕಾ -2025 ರಾಜ್ಯಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವ್ಯಕ್ತಿಗೂ ಧ್ವನಿಯನ್ನು ವ್ಯಕ್ತಪಡಿಸುವ, ತಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ಇತರರಿಗೆ ತಿಳಿಯಪಡಿಸುವ ಅವಕಾಶವಿದೆ. ಅದೇ ರೀತಿ ನಾವು ಮಾತನಾಡುವ ವಿಚಾರಗಳ ಕುರಿತು ನಮಗೆ ಸ್ಪಷ್ಟತೆ, ಆತ್ಮವಿಶ್ವಾಸ ಮತ್ತು ಧೈರ್ಯವಿರಬೇಕು. ಜೀವನದಲ್ಲಿ ನಡೆಯುವ ಸಣ್ಣ ಸಣ್ಣ ಘಟನೆಗಳು ಅಗಾಧವಾದ ಅನುಭವಗಳನ್ನು ನೀಡುತ್ತವೆ ಎಂದು ಹೇಳಿದರು.ಇವರು Find your voice , Shape your future ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಅವಧಿಯನ್ನು ನಡೆಸಿಕೊಟ್ಟರು.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೆ.ಎಂ ಕೃಷ್ಣ ಭಟ್ ಮಾತನಾಡುತ್ತಾ ಎಸ್.ಎಸ್.ಎಲ್.ಸಿ ಬಳಿಕ ನಮ್ಮ ಆಯ್ಕೆ, ಅಭಿರುಚಿಗೆ ಅನುಗುಣವಾಗಿ ಬದಲಾಗಬೇಕು. ನಾವು ಮುಂದುವರಿಯಬೇಕಾದ ಕ್ಷೇತ್ರಗಳ ಬಗ್ಗೆ ವಿಶೇಷ ಗಮನ ಕೊಡಬೇಕು. ನಮ್ಮ ಕನಸಿಗೆ ಊರುಗೋಲಾಗಿ ನಿಲ್ಲುವ ನಮ್ಮ ಕುಟುಂಬ ಹಾಗೂ ಸಮಾಜವನ್ನು ಪ್ರೀತಿಸಿ, ಗೌರವಿಸಬೇಕು. ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಆತ್ಮವಿಶ್ವಾಸದಿಂದ ಮುಂದುವರಿಯಬೇಕು. ನಿರಂತರ ಶ್ರಮದ ಮೂಲಕ ಯಶಸ್ಸನ್ನು ಸಾಕಾರಗೊಳಿಸಿಕೊಳ್ಳಬೇಕು ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಆಡಳಿತಮಂಡಳಿ ನಿರ್ದೇಶಕರಾದ ವತ್ಸಲಾ ರಾಜ್ಞಿ ಮಾತನಾಡಿ ನಮ್ಮ ಕನಸುಗಳನ್ನು ಸಾಕಾರಗೊಳಿಸಲು ವಯಸ್ಸು ಒಂದು ತಡೆಗೋಡೆ ಅಲ್ಲ. ನಮ್ಮಲ್ಲಿ ಆತ್ಮವಿಶ್ವಾಸ,ಛಲ, ದೃಢತೆಇದ್ದಲ್ಲಿ ಭವಿಷ್ಯ ಸುಂದರವಾಗಿ ರೂಪುಗೊಳ್ಳುತ್ತದೆ. ಜೀವನದಲ್ಲಿ ಶಿಸ್ತು, ಸುಸಂಸ್ಕಾರವನ್ನು ಅಳವಡಿಸಿಕೊಂಡಲ್ಲಿ ಉತ್ತಮ ಜೀವನವನ್ನು ನಿಭಾಯಿಸಬಹುದು. ಹಿರಿಯರ ಹಿತ ನುಡಿಗಳನ್ನು ಅಲಕ್ಷಿಸದೆ, ಅನುಷ್ಠಾನಗೊಳಿಸಿಕೊಂಡಲ್ಲಿ ಯಶಸ್ಸು ಖಂಡಿತ ಸಾಧ್ಯ.” ಎಂದು ಹೇಳಿದರು. ಏಪ್ರಿಲ್ 7 ರಿಂದ 12ರವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ನಡೆಸಿದ ರಾಜ್ಯಮಟ್ಟದ ಶಿಬಿರದಲ್ಲಿ ವಿವಿಧೆಡೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಭಾಗವಹಿಸಿದರು. ಆರು ದಿನಗಳ ಕಾಲ ನಡೆದ ಶಿಬಿರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಜ್ಞರೆನಿಸಿಕೊಂಡ ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳ ಆಸಕ್ತಿಗನುಗುಣವಾಗಿ ವೈವಿಧ್ಯಮಯ ಅವಧಿಗಳು, ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳು, ಕ್ಷೇತ್ರ ಭೇಟಿ, ಮನೋರಂಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಶಿಬಿರದ ಕೊನೆಯ ದಿನದ ಬೆಳಗ್ಗಿನ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ಮೊದಲೇ ನಿಗದಿಪಡಿಸಿದ ವಿಷಯದ ಆಧಾರದಲ್ಲಿ ಅಭಿನಯ ಪ್ರಸ್ತುತಿ ನಡೆಯಿತು. ಬಳಿಕ ವಿದ್ಯಾರ್ಥಿಗಳಿಗೆ ಗಣಕಶಾಸ್ತ್ರ ವಿಭಾಗದ ಉಪನ್ಯಾಸಕರು ಪ್ರಾಯೋಗಿಕ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಧ್ವನಿ ಕಲಾವಿದ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಬಡೆಕ್ಕಿಲ ಪ್ರದೀಪ್ ಅವರಿಗೆ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ವಿದ್ಯಾರ್ಥಿಗಳಿಗಾಗಿ ನಡೆಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ದೇವಿಚರಣ್ ರೈ, ಶಿಬಿರದ ಸಂಯೋಜಕಿ ಹಾಗೂ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ದೀಕ್ಷಿತಾ, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿ ಅನಘಾ ಪ್ರಾರ್ಥಿಸಿ,ಉಪಪ್ರಾಂಶುಪಾಲ ದೇವಿಚರಣ್ ರೈ. ಎಂ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಪುಷ್ಪಲತಾ ವಂದಿಸಿ, ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಹರ್ಷಿತಾ ಪಿ ನಿರೂಪಿಸಿದರು.