ಪುತ್ತೂರು: ಪುತ್ತೂರು ಕೆಎಸ್ ಆರ್ ಟಿಸಿ ಡಿಪೋಗೆ 500 ಬಸ್ ಚಾಲಕ ಹಾಗೂ ನಿರ್ವಾಹಕರನ್ನು ನೇಮಿಸುವಂತೆ ಕರ್ನಾಟಕ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರಿಗೆ ಶಾಸಕ ಅಶೋಕ್ ರೈ ಅವರು ಮನವಿ ಮಾಡಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ಚಾಲಕ ಮತ್ತು ನಿರ್ವಾಹಕರ ಕೊರತೆಯಿಂದ ಕೆಲವು ರೂಟ್ ಗಳಲ್ಲಿ ಬಸ್ ಸಂಚಾರ ಮಾಡಲು ಅಸಾಧ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಸ್ ಓಡಾಟ ಮಾಡದೇ ಇದ್ದಲ್ಲಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ. ಪುತ್ತೂರು ತಾಲೂಕಿನ ಬಹುತೇಕ ಗ್ರಾಮಗಳ ಜನತೆ ನಿತ್ಯ ಸಂಚಾರಕ್ಕೆ ಸರಕಾರಿ ಬಸ್ಸನ್ನೇ ಅವಲಂಬಿತರಾಗಿದ್ದಾರೆ. ಈ ಕಾರಣಕ್ಕೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾದರೆ ಅದು ದೊಡ್ಡ ಸಮಸ್ಯೆಯಾಗುತ್ತಿದೆ. ಬಸ್ ಇದ್ದರೂ ಚಾಲಕ, ನಿರ್ವಾಹಕರಿಲ್ಲದೇ ಇದ್ದರೆ ಏನು ಪ್ರಯೋಜನ ಎಂದು ಸಚಿವರ ಗಮನಕ್ಕೆ ತಂದ ಶಾಸಕರು ಈ ಬಗ್ಗೆ ಕೂಡಲೇ ಕ್ರಮ ವಹಿಸಿ ಪುತ್ತೂರಿಗೆ 500 ಜನ ಚಾಲಕ ನಿರ್ವಾಹಕರನ್ನು ಏಕಕಾಲದಲ್ಲಿ ನೇಮಿಸಬೇಕು ಎಂದು ಮನವಿ ಮಾಡಿದ್ದಾರೆ. ತಮ್ಮ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.