ಪುತ್ತೂರು: ಮಧ್ವಚಾರ್ಯರು ತಪಃಗೈದ ಗಂಗಾ ಸಾನ್ನಿಧ್ಯವಿರುವ ಪರಮ ಪಾವನ ತೀರ್ಥವಿರುವ ಪ್ರಸಿದ್ಧವೂ, ಪುರಾತನವೂ ಆದ ಪಾವನ ಕ್ಷೇತ್ರ ಭಗವಾನ್ ಮಹಾವಿಷ್ಣು ನೆಲೆಸಿರುವ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಏ.12 ರಂದು ರಾತ್ರಿ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ವೈಭವದ ಬ್ರಹ್ಮರಥೋತ್ಸವ ನಡೆಯಿತು.
ಎ.12ರಂದು ಬೆಳಿಗ್ಗೆ ಗಂಟೆ 8 ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ರಾಜಾಂಗಣದಲ್ಲಿ ಬಟ್ಟಲು ಕಾಣಿಕೆ, ನವಕ ಕಲಶಾಭಿಷೇಕ ಅಪ್ಪಂಗಾಯಿ, ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಗಂಟೆ 7ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ಬ್ರಹ್ಮರಥೋತ್ಸವ, ಶ್ರೀ ಭೂತಬಲಿ ಉತ್ಸವ, ಶಯನೋತ್ಸವ, ಕವಾಟಬಂಧನ ನಡೆದು ಅನ್ನಸಂತರ್ಪಣೆ ನಡೆಯಿತು.
ಊರಪರವೂರ ಸಾವಿರಾರು ಮಂದಿ ಭಕ್ತಾಧಿಗಳು ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಭಾಗವಹಿಸಿ ದೇವರ ದರುಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದರು. ಸ್ಥಳದಲ್ಲಿ ಪುತ್ತೂರು ನಗರ ಠಾಣಾ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗು ಬಂದೋಬಸ್ತ್ ಕೈಗೊಂಡಿದ್ದರು.

ಈ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತೂರು, ಮಂಗಳೂರಿನ ಶಕ್ತಿ ಎಜ್ಯುಕೇಶನಲ್ ನ ಟ್ರಸ್ಟ್ ನ ಆಡಳಿತಾಧಿಕಾರಿ ಕೆ.ಸಿ.ನಾಯ್ಕ್, ಬೆಂಗಳೂರಿನ ಸೌಂದರ್ಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಸೌಂದರ್ಯ ಪಿ. ಮಂಜಪ್ಪ, ಕ್ಷೇತ್ರದ ಪ್ರಧಾನ ಅರ್ಚಕರಾದ ಕೃಷ್ಣ ಬಡಿಕಿಲ್ಲಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜನಾರ್ದನ ಎರ್ಕಡಿತ್ತಾಯ, ಸದಸ್ಯರಾದ ಸುಬ್ರಹ್ಮಣ್ಯ ಗೌಡ ಹಣಿಯೂರು, ಧೀರಜ್ ಗೌಡ ಹಿರ್ಕುಡೇಲು, ಸುಧೀರ್ ಪ್ರಸಾದ್ ಆನಾಜೆ, ಚಂದ್ರಶೇಖರ ನಾಯ್ಕ ಕುದ್ಮಾನು, ಕೇಶವ ಪೆಲತ್ತಡಿ, ಸರೋಜಿನಿ ಅರ್ಕ, ಯಶೋಧ ಹೊಸೊಕ್ಲು ಸೇರಿದಂತೆ ಊರ – ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.