ವಿಶೇಷ ಪರಿಹಾರ ಬೋಧನೆ ತರಗತಿ ಕಡ್ಡಾಯಗೊಳಿಸಿರುವ ಸುತ್ತೋಲೆಯನ್ನು ಹಿಂಪಡೆಯಬೇಕು, ಇಲ್ಲವೇ ರಜಾ ರಹಿತ ಇಲಾಖೆ ಎಂದು ಘೋಷಿಸಲು ಆಗ್ರಹ
ಪುತ್ತೂರು: ಶಾಲಾ ಶಿಕ್ಷಣ( ಪದವಿಪೂರ್ವ) ಇಲಾಖೆಯವರು ರಜಾ ಅವಧಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ -1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಕಡ್ಡಾಯಗೊಳಿಸಿ ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯಬೇಕು. ಅಥವಾ ರಜಾ ರಹಿತ ಇಲಾಖೆ ಎಂದು ಘೋಷಿಸಲು ಕ್ರಮಕೈಗೊಳ್ಳಬೇಕೆಂದು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸಭೆಯಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ.
ಪುತ್ತೂರು ಮತ್ತು ಕಡಬ ತಾಲೂಕು ವ್ಯಾಪ್ತಿಯ ಸರಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸಭೆಯು ಎ.11ರಂದು ಪುತ್ತೂರಿನ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಸರಕಾರದ ಸುತ್ತೋಲೆಯ ಬಗ್ಗೆ ಚರ್ಚಿಸಲಾಯಿತು. ಸರಕಾರ ಸುತ್ತೋಲೆಯ ಕುರಿತು ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘ ಬೆಂಗಳೂರು ಇವರು ಕೈಗೊಳ್ಳುವ ನಿರ್ಣಯಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಭೆಯಲ್ಲಿ ಘೋಷಿಸಲಾಯಿತು.
ಅಧ್ಯಕ್ಷತೆಯನ್ನು ಪುತ್ತೂರು ತಾಲ್ಲೂಕು ಸರಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಹರಿಪ್ರಕಾಶ್ ಬೈಲಾಡಿ ವಹಿಸಿದ್ದರು. ವಾಸುದೇವ ಗೌಡ, ಇಬ್ರಾಹಿಂ ಉಪಸ್ಥಿತರಿದ್ದು ವಿವಿಧ ಸಲಹೆಗಳನ್ನು ನೀಡಿದರು. ಹಿರಿಯ ಉಪನ್ಯಾಸಕರಾದ ಈಶ್ವರ ಭಟ್, ಶ್ರೀಧರ ರೈ, ಚಿತ್ರಲೇಖ ಹಾಗೂ ಪುತ್ತೂರು ಮತ್ತು ಕಡಬ ತಾಲೂಕು ವ್ಯಾಪ್ತಿಯ ಸರಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯದರ್ಶಿ ರಮೇಶ್ ಸ್ವಾಗತಿಸಿದರು, ವಿದ್ಯಾಧರ ರೈ ಸಭೆಯ ಉದ್ದೇಶ ಮತ್ತು ಆಶಯಗಳನ್ನು ವಿವರಿಸಿದರು. ಶ್ರೀನಿವಾಸ ಬಡಕಿಲ್ಲಾಯ ವಂದಿಸಿದರು.