ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ರವರ 134ನೇ ಜನ್ಮ ದಿನಾಚರಣೆ

0

ಪುತ್ತೂರು: ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರ ಸಭೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯು ಎ.14ರಂದು ತಾ.ಪಂ ಸಭಾಂಗಣದಲ್ಲಿ ನಡೆಯಿತು.


ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಸಂವಿಧಾನ ಅಡಿಯಲ್ಲಿರುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸರಿಯಾಗಿ ಕೆಲಸ ಮಾಡಿದಾಗ ಎಲ್ಲರಿಯೂ ನ್ಯಾಯ ದೊರೆಯಲಿದೆ. ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ಯಾರಿಗೂ ಸ್ವಂತ ನೆಲೆಯಲ್ಲಿ ಅಧಿಕಾರಿ ಚಲಾಯಿಸಲು ಅವಕಾಶವಿಲ್ಲ. ಯಾರೂ ಎಷ್ಟೇ ದೊಡ್ಡ ಕಾನೂನು ಜಾರಿ ಮಾಡಿದರೂ ಪ್ರಶ್ನಿಸುವ ಅಧಿಕಾರ ಸುಪ್ರೀಂಕೋರ್ಟ್‌ಗಿದೆ. ವ್ಯಕ್ತಿ ಸ್ವಾತಂತ್ರ್ಯ ನೀಡಿಲ್ಲ. ಪ್ರಧಾನಿಯಾಗಲಿ, ಮುಖ್ಯಮಂತ್ರಿಯಾಗಲಿ ಅಥವಾ ಅಧಿಕಾರಿಗಳೇ ಯಾವುದೇ ಕಾನೂನು ಮಾಡಿದರೂ ಪ್ರಶ್ನಿಸಲು ಸಂವಿಧಾನದಲ್ಲಿ ಅವಕಾಶವಿದೆ. ಸಂವಿಧಾನವನ್ನು ಸರಿಯಾಗಿ ಅನುಷ್ಠಾನ ಮಾಡುವುದರಿಂದ ಎಲ್ಲರಿಗೂ ಸಮಾನತೆ , ಬಡವರಿಗೂ ಮಾತನಾಡುವ ಅಧಿಕಾರವನ್ನು ನೀಡಿದ್ದಾರೆ. ಸಂವಿಧಾನದಡಿಯಲ್ಲಿ ದೇಶ ನಡೆಯುತ್ತಿದ್ದು ಸ್ವಂತ ನೆಲೆಯಲ್ಲಿ ಹಕ್ಕು ಚಲಾಯಿಸುವ ಅಧಿಕಾರ ಯಾರಿಗೂ ಅವಕಾಶ ನೀಡಿಲ್ಲ ಎಂದು ಹೇಳಿದ ಶಾಸಕರು ಅಂಬೇಡ್ಕರ್ ಅವರ ತತ್ವ ಸಿದ್ದಾಂತವನ್ನು ಭಾಷಣದಲ್ಲಿ ಮಾತ್ರವಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಮಕ್ಕಳಿಗೂ ಕಲಿಸಬೇಕು ಎಂದರು.


ಸಂಸ್ಮರಣಾ ಜ್ಯೋತಿ ಬೆಳಗಿಸಿ, ಸಂವಿಧಾನದ ಪೀಠಿಕೆ ಬೋಧಿಸಿದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗಿಸ್ ಮಾತನಾಡಿ, ಬಾಲ್ಯದಿಂದಲೇ ಬಹಳಷ್ಟು ಕಷ್ಟಗಳನ್ನು ಎದುರಿಸಿದ್ದ ಅಂಬೇಡ್ಕರ್ ತನ್ನ ಗುರಿಸಾಧಿಸಿದ್ದಾರೆ. ಅವರು ಪಡೆದಷ್ಟು ಪದವಿಗಳನ್ನು ಬೇರೆ ಯಾರೂ ಪಡೆದಿಲ್ಲ. ಜಾತಿ ವ್ಯವಸ್ಥೆ ವಿರುದ್ಧ, ಸಾಮಾಜಿಕ ಸಮಾನತೆ ಹಾಗೂ ಮಹಿಳಾ ಸಮಾನತೆಗಾಗಿ ಹೋರಾಡಿದವರಾಗಿದ್ದು ಅವರ ನೀಡಿದ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.


ಉಪನ್ಯಾಸ ನೀಡಿದ ಸರಕಾರಿ ಸಹಾಯಕ ಅಭಿಯೋಜಕ ಮಾತನಾಡಿ, ಜೀವನದಲ್ಲಿ ನಮಗೆ ಸಾಕಷ್ಟು ಅವಕಾಶಗಳು ದೊರೆತಿರುವುದು ಅಂಬೇಡ್ಕರ್‌ರವರ ಸಂವಿಧಾನದಿಂದ. ಅಂಬೇಡ್ಕರ್‌ರವರು ನೀಡಿರುವ ಸಂವಿಧಾನ ವಿಚಾರಗಳು ಇಂದಿಗೂ ಪ್ರಸ್ತುತ. ರಾಷ್ಟ್ರಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್‌ರವರನ್ನು ಎಷ್ಟು ಗೌರವಿಸಿದರೂ ಕಡಿಮೆ. ದೊಡ್ಡ ದೇವಸ್ಥಾನಗಳಲ್ಲಿ ಉಂಟಾಗುವ ಕಲಹ, ಭಿನ್ನಾಭಿಪ್ರಾಯಗಳಿಗೆ ನ್ಯಾಯ ನೀಡಿರುವ ಸುಪ್ರೀಂಕೋರ್ಟ್ ಕಾರ್ಯನಿರ್ವಹಿಸುತ್ತಿರುವುದು ಅಂಬೇಡ್ಕರ್‌ವರ ಸಂವಿಧಾನದ ಆಧಾರದಲ್ಲಿ ಆಗಿದೆ ಎಂದ ಅವರು ಅಂಬೇಡ್ಕರ್ ಆ ಕಾಲದ ಕಷ್ಟಗಳನ್ನು ಅರಿತುಕೊಂಡು ಸಂವಿಧಾನದಲ್ಲಿ ಜಾತ್ಯಾಧಾರಿತ ಮೀಸಲಾತಿ ನೀಡಿದ್ದಾರೆ ಎಂದರು.


ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾಗಿರುವ ತಹಶೀಲ್ದಾರ್ ಪುರಂದರ, ಡಿವೈಎಸ್ಪಿ ಅರುಣ್ ನಾಗೇ ಗೌಡ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ನಗರ ಸಭಾ ಪೌರಾಯಕ್ತ ಮಧು ಎಸ್.ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ, ಗೌರವಾರ್ಪಣೆ:
ಹಾರಾಡಿ ವಿದ್ಯಾರ್ಥಿ ನಿಲಯದ ನಿವೃತ್ತ ಅಡುಗೆ ಸಿಬ್ಬಂದಿ ದೇವಮ್ಮರವರನ್ನು ಸನ್ಮಾನಿಸಲಾಯಿತು. ಉಪನ್ಯಾಸ ನೀಡಿದ ಸರಕಾರಿ ಸಹಾಯಕ ಅಅಭಿಯೋಜಕ ಜನಾರ್ದನ, ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬರವರನ್ನು ಗೌರವಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಸ್ವಾಗತಿಸಿದರು. ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಾದ ಸವಿತಾ ಕಾರ್ಯಕ್ರಮ ನಿರೂಪಿಸಿ, ಪ್ರೇಮಲತಾ ವಂದಿಸಿದರು. ಹಾರಾಡಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here