“ತುಳು ಎನ್ನ ಉಡಲ್ದ ಬಾಸೆ, ತುಳುಕು ಯಾನ್ ಯಾಪೊಲಾ ಉಲ್ಲೆ”: ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಪುತ್ತೂರು: ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ತುಳುನಾಡ್ ಕಾನ್ಕ್ಲೇವ್-2025 ಸಮಾವೇಶ ಎ.13ರಂದು ನಡೆಯಿತು.ಕಾರ್ಯಕ್ರಮದಲ್ಲಿ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ ಸಂಸ್ಥೆಯಿಂದ ತುಳುವಿನ ವಿಚಾರ ಘೋಷ್ಠಿ, ತುಳುವಿನ ಮಾಹಿತಿ ಪಸರಿಕೆಯ ಕಾರ್ಯಕ್ರಮ ನಡೆಯಿತು.
ತುಳು ಲಿಪಿ ಎಲ್ಲರ ಸೊತ್ತು, ತುಳು ಲಿಪಿಗೆ ಮತ್ತೆ ಮತ್ತೆ ಬದಲಾವಣೆ ಸಲ್ಲದು
ತುಳು ಲಿಪಿಯ ಕುರಿತು ನಡೆದ ವಿಚಾರ ಘೋಷ್ಠಿಯಲ್ಲಿ, ತುಳು ಲಿಪಿಯ ಬೆಳವಣಿಗೆ, ಲಿಪಿ ಮೂಲೆಗುಂಪಾಗಲು ಕಾರಣ. ಕನ್ನಡ ಲಿಪಿಯನ್ನು ತುಳುವಿಗೆ ಬಳಸುವುದರಿಂದಾಗುವ ತೊಡಕುಗಳು ಹಾಗೂ ಸಾಂಪ್ರದಾಯಿಕ ತುಳು ಲಿಪಿಯ ಅಗತ್ಯತೆಯ ಬಗ್ಗೆ ವಿಸ್ತಾರವಾಗಿ ತಜ್ಞರಾದ್ ನಿಶಾಂತ್ ರತ್ನಾಕರ್, ದೀಪಕ್ ಪಡುಕೋಣೆ, ಪ್ರಹ್ಲಾದ್ ಪಿ.ತಂತ್ರಿ ಅವರು ತುಳುಲಿಪಿಯ ಕೂಟಾಕ್ಷರಗಳ ಬಳಕೆ ಮತ್ತು ಅದರ ಪ್ರಾಮುಖ್ಯತೆ, ಸಾಂಪ್ರದಾಯಿಕ ತುಳು ಲಿಪಿಯನ್ನೇ ಹೇಗೆ ಆಧುನಿಕತೆಗೆ ಬಳಸಬಹುದೆಂಬ ಚರ್ಚೆ ಹೊಸದಾಗಿ ಈ ಕಾನ್ಕ್ಲೇವ್ ನಲ್ಲಿ ಬಿಡುಗಡೆಯಾದ ಮಲ್ಲಿಗೆ ಫಾಂಟ್ ನ ಕುರಿತಾದ ವಿವರವೂ, ಅದರಲ್ಲಿರುವ 1800ಕ್ಕೂ ಹೆಚ್ಚಿನ ಅಕ್ಷರ ವಿನ್ಯಾಸದ ಬಗ್ಗೆ ಮಾಹಿತಿ ನೀಡಿದರು.
ಉಳ್ಳವರು ರಚಿಸಿದ ಇತಿಹಾಸದಲ್ಲಿ ನಮಗೆ ಸ್ಥಾನಮಾನವಿಲ್ಲ, ಈಗಿನ ಆಟಿ ಆಚರಣೆ ಕೇವಲ ವೇದಿಕೆಗೆ ಸೀಮಿತ
ತುಳುನಾಡಿನ ಇತಿಹಾಸ ಇಲ್ಲಿ ಆಳಿದವರ ಇತಿಹಾಸವಾಗದೆ ಸಾಮಾನ್ಯ ತುಳುವರ ಜೀವನದ ಇತಿಹಾಸವಾಗಿ ಮತ್ತೆ ರಚನೆಯಾಗಬೇಕೆಂದು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಡಾ. ತುಕಾರಾಮ ಪೂಜಾರಿಯವರು ಅಭಿಪ್ರಾಯಪಟ್ಟರು. ಪಂಚ ದ್ರಾವಿಡ ಭಾಷೆಗಳಲ್ಲಿ ತುಳುವಿನ ಹೊರತಾಗಿ ಎಲ್ಲಾ ಭಾಷೆಗಳಿಗೂ ರಾಜ್ಯ ಇರುವಾಗ ತುಳುವರು ರಾಜ್ಯ ಕೇಳುವುದರಲ್ಲಿ ತಪ್ಪಿಲ್ಲ. ತುಳು ರಾಜ್ಯದ ಕಲ್ಪನೆ ಇಂದಿನದಲ್ಲ, ಐನೂರು ವರ್ಷಗಳ ಹಿಂದೆಯೇ ಪಂಜುರ್ಲಿ ಪಾರ್ದನದಲ್ಲೇ ತುಳು ರಾಜ್ಯದ ಕಲ್ಪನೆಯನ್ನು ನಮ್ಮ ಜನಪದರು ವರ್ಣಿಸಿದ್ದಾರೆ ಎಂದು ಹೇಳಿದರು. ಆಟಿ ಎಂದರೆ ಅನಿಷ್ಟ, ಆಟಿ ಎಂದರೆ ಬಡತನ, ಆದರೆ ಈಗ ಆಟಿ ಕೇವಲ ವೇದಿಕೆಗೆ ಸೀಮಿತವಾಗಿರುವುದು ಶೋಚನೀಯ ಎಂದರು.
ಕೊರಗಜ್ಜ ಅಲ್ಲ ಕೊರಗ ತನಿಯ, ಇಂದು ನಮ್ಮ ಈ ಆರಾಧನೆಗೆ ಅಪಚಾರವಾಗುತ್ತಿದೆ
ಬಾಬು ಕೊರಗ ಪಾಂಗಾಳ ಮಾತನಾಡಿ, ಕೊರಗರಲ್ಲಿ ಹತ್ತು ಹದಿನಾರು ಪಂಗಡಗಳನ್ನು ವಿದ್ವಾಂಸರು ಗುರುತಿಸುತ್ತಾರೆ ಆದರೆ ಅದೆಲ್ಲಾ ಸರಿಯಲ್ಲ, ಕೊರಗರಲ್ಲಿರಿವುದು ಕೇವಲ 4 ಪಂಗಡಗಳು. ಕೊರಗ ಭಾಷೆ ಹೇಗೆ ಅಳಿವಿನಂಚಿಗೆ ಸಾಗಿದೆ, ಯಾವ ರೀತಿ ಕೊರಗರು ತುಳು, ಕನ್ನಡ ಭಾಷೆಗೆ ಒಗ್ಗಿಕೊಂಡರು. ಕೊರಗ ತನಿಯನ್ನು ಕೊರಗಜ್ಜ ಎನ್ನುವುದು ತಪ್ಪು, ಆತ ಅಮರನಾಗುವ ಹೊತ್ತಿಗೆ 18-22 ವರ್ಷದ ಯುವಕ ಹಾಗಿರುವಾಗ ಆತನಿಗೆ ಅಜ್ಜನೆಂದು ಕರೆಯುವ ವಾದವೇಕೆ? ಇದೇ ರೀತಿ ಯುವಕರಾಗಿ ಅಮರರಾದ ತುಳುನಾಡಿನ ಅದೆಷ್ಟೋ ವೀರರನ್ನು ಯಾಕೆ ಅಜ್ಜನೊಂದು ಕರೆಯುವುದಿಲ್ಲ? ಕೊರಗ ತನಿಯನಿಗೆ ಕಲಿ ಮತ್ತು ವೀಳ್ಯದೆಲೆ ಅಡಿಕೆ ಇಡಬೇಕು. ಈಗಿನ ಹಾಗೆ ಹರಿದ ವೀಲ್ಯದೆಲೆ(ಬೀಡಾ) ಮತ್ತು ಮದ್ಯವನ್ನು ಇಡುವುದು ಆರಾಧನೆಗೆ ಮಾಡುವ ಅಪಚಾರ ಎಂದರು.

ಕಾಪು ವಿಧಾನಸಭಾ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ತುಳು ನಮ್ಮ ಮನಸ್ಸಿನ ಭಾಷೆ, ತುಳು ನಮ್ಮ ಅಪ್ಪೆಭಾಷೆ, ತುಳುವಿನ ಪರ ವಿಧಾನಸೌಧದಲ್ಲಿ ಧ್ವನಿ ಎತ್ತಿದ್ದೇನೆ. ತುಳುವಿಗಾಗಿ ಎಲ್ಲಾ ರೀತಿಯಲ್ಲೂ ಸಹಕಾರ ನೀಡಲು ನಾನು ಸಿದ್ದ ಎಂದರು.
ತುಳುವಿನ ಹೋರಾಟ ಎಂದರೆ ಅದು ನಮ್ಮ ಸ್ವಂತಿಕೆಯ ಹೋರಾಟ, ಎಷ್ಟೋ ವರ್ಷಗಳಿಂದ ತುಳುವಿಗಾಗಿ ಹೋರಾಡುತ್ತಿರುವ ನಾವು ಎಂದಿಗೂ ನಿಮ್ಮಂತ ಯುವಕರ ಬೆಂಗಾವಲಿಗಿದ್ದೇವೆ ಎಂಬ ಭರವಸೆಯನ್ನು ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ ಯೋಗೀಶ್ ಶೆಟ್ಟಿ ಜೆಪ್ಪು ನೀಡಿದರು.
ರೋಶನ್ ರೆನಾಲ್ಡ್ ಮಾತನಾಡಿ, ಹತ್ತು ಹಲವಾರ್ ಕೇಸ್ ಗಳಾದರೂ ತುಳುವಿನ ಹೋರಾಟದಲ್ಲಿ, ತುಳುವಿಗೆ ಅನ್ಯಾಯವಾಗುವಾಗ ಮುಂಚೂಣೊಯಲ್ಲಿದ್ದು ಎದೆಕೊಡುವುದರಲ್ಲಿ ಹಿಂಜರಿಯುವ ಮಾತೇ ಇಲ್ಲ ಎಂದರು.
ವಿಶು ಶ್ರೀಕೇರ ಮಾತನಾಡಿ, ತುಳುವರು ಎಲ್ಲರನ್ನೂ ತಮ್ಮವರೆಂದು ಆಲಂಗಿಸಿ ಇಂದು ಅವರಿಂದಲೇ ಬೆನ್ನಿಗೆ ಚೂರಿ ಹಾಕಿಕೊಳ್ಳುತ್ತಿದ್ದೇವೆ. ತುಳುವರು ತುಳುವಿಗಾಗಿ ಇದುವರೆಗೆ ರಾಜಕಾರಣೆಗಳಿಗೆ ಕೊಟ್ಟಿರುವ ಮನವಿಗಳಲ್ಲಿ ಇಡೀ ತುಳುನಾಡಿಗೇ ಉಪಹಾರ ಕೊಡಬಹುದು ಎಂದರು.
ಶಟ್ಟರ್ ಬಾಕ್ಸ್ ಫಿಲಂನ ಸಚಿನ್ ಶೆಟ್ಟಿ ಮಾತನಾಡಿ, ತುಳುವಿಗಾಗಿ ಹೋರಾಡಲು ನಾವು ಯಾವತ್ತೂ ಸಿದ್ದರು, ತುಳುವಿಗೆ ಎಲ್ಲಾದರೂ ಅನ್ಯಾಯವಾದರೆ ನಾವು ಖಂಡಿತ ಬರುವೆನು ಎಂದು ಹೇಳಿದರು.
ಪ್ರಖರ ವಾಗ್ಮಿ ಶ್ರೀಕಾಂತ್ ಶೆಟ್ಟಿ ಮಾತನಾಡಿ, ತುಳುವರು ಹುಟ್ಟು ಹೋರಾಟಗಾರರು, ತುಳುವರ ಇತಿಹಾಸ, ತುಳುವರ ಬದುಕು ಮತ್ತು ತುಳುವರು ಕಟ್ಟಿದ ತುಳುನಾಡು ಯಾವತ್ತೂ ಶಾಶ್ವತ. ತುಳುವಿಗೆ ಸಿಗಬೇಕಾದ ಮಾನ್ಯತೆ, ರಾಜ್ಯಾಡಳಿತದ ಸ್ಥಾನಮಾನಗಳು ಸಿಗದೇ ಇರುವುದು ನಮ್ಮ ಜನಪ್ರತಿನಿಧಿಗಳಲ್ಲಿರುವ ಇಚ್ಛಾಶಕ್ತಿಯ ಕೊರತೆಯನ್ನು ತಿಳಿಸುತ್ತದೆ. ತುಳುವಿನ ಶಾಸನಗಳು, ತುಳುವಿನ ಪುರಾತನ ಕೃತಿಗಳು, ತುಳುವಿನ ರಾಜ್ಯದ ಕಲ್ಪನೆಯ ಕುರಿತು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ ಸಂಸ್ಥಾಪಕರಾದ ಮಹಿ ಮುಲ್ಕಿ ಇವರು, ಕರ್ನಾಟಕ ಏಕೀಕರಣ ಕಾಲದಲ್ಲಿ ತುಳುನಾಡನ್ನು ಕರ್ನಾಟಕದೊಂದಿಗೆ ಸೇರಿಸಲು ನಡೆದ ಇತಿಹಾಸದ ಘಟನೆಗಳು. ತುಳುವಿಗೆ ನಡೆದ ಅನ್ಯಾಯದ ಬಗ್ಗೆ ತಿಳಿಸಿ, ಇನ್ನು ಮುಂದೆ ಪ್ರತೀ ವರ್ಷ ತುಳುನಾಡ್ ಕಾನ್ಕ್ಲೇವ್ ನಡೆಯುವುದು ಎಂಬ ಘೋಷಣೆಯನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಜೈ ತುಲುನಾಡ್ ಸಂಘಟನೆಯ ಅಧ್ಯಕ್ಷರಾದ ಉದಯ್ ಪೂಂಜಾ, ದೈವಾರಾಧನೆ ಸಂರಕ್ಷಣಾ ವೇದಿಕೆಯ ಭರತ್ ಬಲ್ಲಾಲಭಾಗ್, ಆಳ್ವಕೂಟೊ ಬ್ಯಾಂಡ್ ನ ಪ್ರವೀಣ್ ಆಳ್ವ, ತುಳು ಸಾಹಿತಿ ಕುಶಾಲಾಕ್ಷಿ ವಿ. ಕುಲಾಲ್ ಇವರು ವೇದಿಕೆಯಲ್ಲಿದ್ದರು.
ತುಳುವಿಗಾಗಿ ಕೆಲಸ ಮಾಡಿರುವ ಶಾಸನತಜ್ಞರಾದ ಸುಭಾಸ್ ನಾಯಕ್ ಹಾಗೂ ಸಂಘಟನೆಗಳಾದ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ “ತುಡರ್” ಮತ್ತು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ “ತುಳು ಸಂಘ”ಕ್ಕೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಸುವಿತ್ ಶೆಟ್ಟಿ ಮತ್ತು ಚೈತ್ರಾ ನಿರೂಪಿಸಿದರು. ನಿಶ್ಚಿತ್ ರಾಮಕುಂಜ ಇವರು ಸ್ವಾಗತಿಸಿದರು, ಸುಕೇಶ್ ಪುತ್ತೂರು ಇವರು ವಂದಿಸಿದರು.
ಕೃತಿ ಬಿಡುಗಡೆ
ಕುಶಾಲಾಕ್ಷಿ ವಿ.ಕುಲಾಲ್ ಇವರ ಹತ್ತನೇ ತುಳು ಕೃತಿ “ಪತ್ತ್” ದ ಅಧಿಕೃತ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹರ್ಷಾ ಬೇಲಾಡಿಯವರ ತುಳು ಕವನ ಸಂಕಲನ “ಒಂಜಿ ಕನ”, ಮತ್ತು ಸಾವಿರ ಪ್ರತಿ ಮಾರಾಟವಾದ ತುಳುವಿನ ಮೊದಲ ಕೃತಿ “ಜೀಟಿಗೆ”ಯ ಎರಡನೇ ಮುದ್ರಣದ ಬಿಡುಗಡೆಯೂ ನಡೆಯಿತು. ತುಳು ಕನ್ನಡ ಸಾಹಿತಿ ಮುದ್ದು ಮೂಡುಬೆಳ್ಳೆ ಕೃತಿ ಬಿಡುಗಡೆಗೊಳಿಸಿದರು.