ಪುತ್ತೂರು: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ವರ್ಷಂಪ್ರತಿ ಸಂಭ್ರಮ – ಸಡಗರದಿಂದ ನಡೆಯುತ್ತಿದೆ.
ಜಾತ್ರೋತ್ಸವದ ಏಳನೇ ದಿನವಾದ ಎ.16ರಂದು ಬಲ್ನಾಡು ಉಳ್ಳಾಲ್ತಿಗೆ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರಿಗೆ ಭಕ್ತಾದಿಗಳು ಮಲ್ಲಿಗೆ ಸಮರ್ಪಿಸುವುದು ವಾಡಿಕೆಯಾಗಿದೆ. ಮಂಗಳೂರಿನ ಶಕ್ತಿ ಎಜ್ಯುಕೇಶನಲ್ ಟ್ರಸ್ಟ್ ನ ಆಡಳಿತಾಧಿಕಾರಿ ಡಾ. ಕೆ.ಸಿ. ನಾಯ್ಕ್ ರವರು ಕಳೆದ 59 ವರುಷಗಳಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಹಾಗೂ ಬಲ್ನಾಡ ಉಳ್ಳಾಲ್ತಿಗೆ ಮಲ್ಲಿಗೆ ಸಮರ್ಪಣೆ ಮಾಡುತ್ತಿದ್ದು, ಈ ಭಾರಿ ಅವರು ಎ.16ರಂದು ತಮ್ಮ ಕುಟುಂಬದ ಸದಸ್ಯರ ಉಪಸ್ಥಿತಿಯಲ್ಲಿ 60ನೇ ವರುಷದ ಮಲ್ಲಿಗೆ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕೆ.ಸಿ. ನೈಕ್ ರವರ ಪತ್ನಿ ಸಗುಣಾ ಸಿ. ನಾಯ್ಕ್, ಪುತ್ರ ಸಂಜಿತ್ ನಾಯ್ಕ್, ಕುಟುಂಬಸ್ಥರು ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.
ದೇವರು ನೀಡಿದ ಸೌಭಾಗ್ಯ
ನಾನೊಬ್ಬ ಮಹಾಲಿಂಗೇಶ್ವರ ದೇವರ ಸುತ್ತಮುತ್ತಲು ಬೆಳೆದವ. ಆ ಬಳಿಕ ಉದ್ಯೋಗ ನಿಮಿತ್ತ ಮಂಗಳೂರಿಗೆ ತೆರಳಿದೆ. ಆನಂತರದ ದಿನಗಳಲ್ಲಿ ಕ್ಷೇತ್ರದ ಟ್ರಸ್ಟಿಯಾದೆ, ಅದರ ಬಳಿಕದ ವರುಷದಿಂದಲೇ ಮಹಾಲಿಂಗೇಶ್ವರ ದೇವರಿಗೆ ಹಾಗೂ ಉಳ್ಳಾಲ್ತಿ ಅಮ್ಮನವರಿಗೆ ಮಲ್ಲಿಗೆ ಸಮರ್ಪಣೆ ಮಾಡುತ್ತಿದ್ದೇನೆ. ಈ ಭಾರೀ ನಾನು ಮಲ್ಲಿಗೆ ಸಮರ್ಪಣೆ ಮಾಡುತ್ತಿರುವುದು ಅರುವತ್ತನೇ ವರುಷದ್ದಾಗಿದೆ. ನಮ್ಮ ಮನೆಯವರು, ಕುಟುಂಬಸ್ಥರು, ಕ್ಷೇತ್ರದ ಟ್ರಸ್ಟಿಗಳು, ಬಂಧುಮಿತ್ರರ ಉಪಸ್ಥಿತಿಯಲ್ಲಿ ಈ ಭಾರಿ ಮಲ್ಲಿಗೆ ಸಮರ್ಪಣೆ ಮಾಡಿದ್ದೇನೆ. ನಿರಂತರ ಅರವತ್ತು ವರುಷ ಈ ಒಂದು ಅರ್ಪಣೆ ಮಾಡುವ ಯೋಗ ಸಿಗುವುದು ಕಡಿಮೆ ಎನ್ನುವುದು ನನ್ನ ಭಾವನೆ. ದೇವರು ಮಲ್ಲಿಗೆ ಅರ್ಪಿಸುವ ಸೌಭಾಗ್ಯ ನನಗೆ ನೀಡಿದ್ದಾರೆ. ನಾನು ಮಾಡುತ್ತಾ ಬಂದಿದ್ದೇನೆ.

ಡಾ.ಕೆ.ಸಿ.ನಾಯ್ಕ್
ಆಡಳಿತಾಧಿಕಾರಿ
ಶಕ್ತಿ ಎಜ್ಯಕೇಶನಲ್ ಟ್ರಸ್ಟ್ ಮಂಗಳೂರು