ಮಹಾಲಿಂಗೇಶ್ವರ ದೇವರ ಅವಭೃತಸ್ನಾನದ ಸಂಭ್ರಮದ ಸವಾರಿ ಆರಂಭ

0

ಪುತ್ತೂರು ಜಗದೊಡೆಯ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರು ನಡೆದಾಡುವ ದೇಗುಲ ಬ್ರಹ್ಮರಥದಲ್ಲಿ ತನ್ನ ವೈಭವದ ಸವಾರಿಯನ್ನು ಮಾಡುವ ಮೂಲಕ ಹತ್ತೂರ ಭಕ್ತ ಸಮುದಾಯಕ್ಕೆ ಅಭಯದ ಆಶೀರ್ವಾದವನ್ನು ಮಾಡಿದ್ದಾರೆ.ಸಹಸ್ರಾರು ಭಕ್ತರು ಬ್ರಹ್ಮರಥೋತ್ಸವದ ಸಂಭ್ರಮವನ್ನು ಮನತುಂಬಿಸಿಕೊಂಡಿದ್ದಾರೆ.

ಶ್ರೀ ದೇವರ ಅವಭೃತ ಸ್ನಾನದ ಸವಾರಿ ಆರಂಭಗೊಂಡಿದೆ.ದೇವಸ್ಥಾನದಿಂದ ಹೊರಟು ಸುಮಾರು 15 ಕಿ.ಮೀ. ದೂರದಲ್ಲಿರುವ ವೀರಮಂಗಲದ ಕುಮಾರಧಾರ ಪುಣ್ಯ ನದಿಯಲ್ಲಿ ಶ್ರೀ ದೇವರು ಎಂದಿನಂತೆ ಅವಭೃತ ಸ್ನಾನ ಮಾಡಲಿದ್ದಾರೆ. ಶ್ರೀ ಮಹಾಲಿಂಗೇಶನ ಅವಭೃತ ಸ್ನಾನದ ಸವಾರಿಯಲ್ಲಿ ದಾರಿಯುದ್ಧಕ್ಕೂ ಅಲ್ಲಲ್ಲಿ ಭಕ್ತರು ಕಟ್ಟಿಸಿದ ಕಟ್ಟೆಗಳಲ್ಲಿ ಪೂಜೆ ಸ್ವೀಕರಿಸಲಿದ್ದಾರೆ. ಈ ವರ್ಷ ಒಟ್ಟು 57 ಕಟ್ಟೆಗಳಲ್ಲಿ ಶ್ರೀ ದೇವರು ಕಟ್ಟೆ ಪೂಜೆ ಸ್ವೀಕರಿಸಲಿದ್ದಾರೆ.

ವೀರಮಂಗಲದಲ್ಲಿ ಹತ್ತೂರ ಒಡೆಯನ ಅವಭೃತ ಸ್ನಾನ: ಇದರ ಹಿಂದೆಯೂ ಒಂದು ಕಥೆ ಇದೆ….
ಹೌದು ಇದಕ್ಕೂ ಒಂದು ಇತಿಹಾಸವಿದೆ. ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಭಕ್ತನಿಗೆ ತನ್ನ ದರ್ಶನ ಕೊಡುವ ಮೂಲಕ ಆತನ ಇಷ್ಟಾರ್ಥಗಳನ್ನು ಈಡೇರಿಸುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ವೀರಮಂಗಲಕ್ಕೆ ಅವಭೃತ ಸ್ನಾನಕ್ಕೆ ಬರುವ ಹಿಂದೆಯೂ ಒಂದು ಕಥೆ ಇದೆ. ಈ ಹಿಂದೆ ನಿತ್ಯಮಂಗಳ ಎಂದು ಕರೆಯುತ್ತಿದ್ದ ಈಗಿನ ವೀರಮಂಗಲವನ್ನು ಆಗಿನ ಬಲ್ಲಾಳ ವಂಶದ ವೀರಮ್ಮ ಬಳ್ಳಾಲ್ತಿ ಆಳ್ವಿಕೆ ಮಾಡುತ್ತಿದ್ದರು. ಅನಾದಿ ಕಾಲದಿಂದಲೂ ಶ್ರೀ ಮಹಾಲಿಂಗೇಶ್ವರ ದೇವರು ಉಪ್ಪಿನಂಗಡಿ ನದಿ ತೀರಕ್ಕೆ ಅವಭೃತ ಸ್ನಾನಕ್ಕೆ ತೆರಳುವ ಪದ್ಧತಿ ಇತ್ತು. ವೀರಮ್ಮ ಬಳ್ಳಾಲ್ತಿಯವರು ದೇವರನ್ನು ನೋಡಲು ಪ್ರತಿ ವರ್ಷ ಉಪ್ಪಿನಂಗಡಿಗೆ ತೆರಳುತ್ತಿದ್ದರು. ಆದರೆ ಆ ವರ್ಷ ವೀರಮ್ಮ ಬಳ್ಳಾಲ್ತಿ ತುಂಬು ಗರ್ಭಿಣಿಯಾಗಿದ್ದರಿಂದ ಅವರಿಗೆ ಉಪ್ಪಿನಂಗಡಿಗೆ ದೇವರನ್ನು ನೋಡಲು ಹೋಗಲು ಆಗಲಿಲ್ಲ. ಆಗ ವೀರಮ್ಮ ಬಳ್ಳಾಲ್ತಿಯವರು ಮನದಲ್ಲೆ ಒಂದು ಪ್ರಾರ್ಥನೆ ಮಾಡಿಕೊಂಡರು, ನಾನು ತುಂಬು ಗರ್ಭಿಣಿಯಾಗಿರುವುದರಿಂದ ಉಪ್ಪಿನಂಗಡಿಗೆ ದೇವರನ್ನು ನೋಡಲು ಹೋಗಲು ಆಗುತ್ತಿಲ್ಲ, ಶ್ರೀ ದೇವರು ನಿತ್ಯಮಂಗಳದತ್ತ ಬರುತ್ತಿದ್ದರೆ ದೇವರ ದರ್ಶನ ಪಡೆಯಬಹುದಿತ್ತು. ಅವರು ನಿತ್ಯಮಂಗಳದತ್ತ ಬಂದರೆ ಅವರಿಗೆ ಒಂದು ಕದಿಕೆ ಅವಲಕ್ಕಿ ಸೇವೆ ನೀಡುತ್ತಿದ್ದೆ ಎಂದು ಪ್ರಾರ್ಥಿಸಿಕೊಂಡರು. ಶ್ರೀ ಮಹಾಲಿಂಗೇಶ್ವರ ದೇವರಿಗೆ ತನ್ನ ಭಕ್ತೆಯ ಪ್ರಾರ್ಥನೆ ಕೇಳಿತು. ವೀರಮ್ಮ ಬಳ್ಳಾಲ್ತಿಯ ಭಕ್ತಿಗೆ ಒಲಿದು ಮಹಾಲಿಂಗೇಶ್ವರ ನಿತ್ಯಮಂಗಳಕ್ಕೆ ಭೇಟಿ ನೀಡಿದರು. ಶ್ರೀ ಮಹಾವಿಷ್ಣುವನ್ನು ಭೇಟಿಯಾಗಿ ಅಲ್ಲಿ ಕಟ್ಟೆಪೂಜೆ ಸ್ವೀಕರಿಸಿ ವೀರಮ್ಮ ಬಳ್ಳಾಲ್ತಿಗೆ ದರ್ಶನವಿತ್ತು ಕುಮಾರಧಾರ ನದಿಯಲ್ಲಿ ಅವಭೃತ ಸ್ನಾನ ಮುಗಿಸಿದರು ಎಂಬ ಇತಿಹಾಸವಿದೆ. ವೀರಮ್ಮ ಬಳ್ಳಾಲ್ತಿಯ ಭಕ್ತಿಯ ಫಲವಾಗಿ ನಿತ್ಯಮಂಗಳ ಮುಂದೆ ವೀರಮಂಗಲವಾಯಿತು ಎಂದು ಹೇಳುತ್ತಾರೆ. ಈಗಲೂ ಭಕ್ತರಿಂದ ಕದಿಕೆ ಅವಲಕ್ಕಿ ಸೇವೆ ನಡೆಯುವುದನ್ನು ಕಾಣಬಹುದಾಗಿದೆ. ಒಟ್ಟಿನಲ್ಲಿ ಭಕ್ತನ ಮನದಿಚ್ಚೆಯನ್ನು ಈಡೇರಿಸುವ ಮಹಾಲಿಂಗೇಶ ನಮ್ಮೆಲ್ಲರನ್ನು ಸದಾ ಕಾಯುತ್ತಿದ್ದಾನೆ ಎನ್ನುವುದು ಮಾತ್ರ ಸತ್ಯ.

LEAVE A REPLY

Please enter your comment!
Please enter your name here