ಪುತ್ತೂರು:ಮೃತ ವ್ಯಕ್ತಿಯೋರ್ವರಿಗೆ ಸೇರಿದ ದ್ವಿಚಕ್ರ ವಾಹನಕ್ಕೆ ಸಂಬಂಧಿಸಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮಾರಾಟ ವ್ಯವಹಾರ ಮಾಡಿರುವ ಸಂಬಂಧ, ಮೃತರ ಅಣ್ಣನ ಸಹಿತ ಇಬ್ಬರು ಆರೋಪಿಗಳ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.

ಪುತ್ತೂರು ಕೆಎಸ್‌ಆರ್‌ಟಿಸಿ ನಿಗಮದಲ್ಲಿ ಡ್ರೈವರ್ ಕಂ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಬೆಳಂದೂರು ಹೊಸೊಳಿಗೆ ನಿವಾಸಿ ಕುಸುಮಾಧರ ಎಚ್.ಎಂಬವರು 2023ರ ಏ.6ರಂದು ಕಾಣಿಯೂರು ಬಳಿಯ ರೈಲ್ವೇ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.ಅದಾದ ಬಳಿಕ, ಮೃತ ಕುಸುಮಾಧರ ಅವರ ಹೆಸರಿನಲ್ಲಿ ಪುತ್ತೂರು ಆರ್‌ಟಿಒ ಕಚೇರಿಯಲ್ಲಿ ನೋಂದಾವಣೆಗೊಂಡಿದ್ದ ಟಿವಿಎಸ್ ಅಪಾಚಿ ಮೋಟಾರ್ ಸೈಕಲ್(ಕೆ.ಎ.70ಇ:4741)ನ್ನು ಮೃತ ಕುಸುಮಾಧರ ಅವರ ಅಣ್ಣ, ಪುತ್ತೂರು ಕೆಎಸ್‌ಆರ್‌ಟಿಸಿ ಘಟಕದಲ್ಲಿ ಚಾಲಕನಾಗಿರುವ ವಾಸುದೇವ ಎಂಬವರು ಹಣದ ಲಾಭಗಳಿಸುವ ಉದ್ದೇಶದಿಂದ ಬೆಳಂದೂರು ಹೊಸೊಳಿಕೆ ಮನೆಯಲ್ಲಿ, ಆರ್‌ಟಿಒ ಕಚೇರಿಯ ಪತ್ರ 29,30 ಫಾರ್ಮುಗಳಿಗೆ,ಮೃತ ಕುಸುಮಾಧರ ಅವರ ನಕಲಿ ಸಹಿ ಮಾಡಿ,ದಾಖಲೆ ಸೃಷ್ಟಿಸಿ ಕೆಎಸ್‌ಆರ್‌ಟಿಸಿಯಲ್ಲಿ ಚಾಲಕ ಕಂ ನಿರ್ವಾಹಕನಾಗಿರುವ ವಿನಯ್ ಗೌಡ ಕರಂದ್ಲಾಜೆ ಎಂಬವರಿಗೆ ಮಾರಾಟ ಮಾಡಿದ್ದರು.ವಿನಯ್ ಅವರಿಗೆ, ನಕಲಿ ಸಹಿ ಮಾಡಿ ದಾಖಲೆ ಸೃಷ್ಟಿಸಿರುವ ಕೃತ್ಯದ ಬಗ್ಗೆ ತಿಳಿದಿದ್ದರೂ, ಮೋಟಾರ್ ಸೈಕಲನ್ನು ಪಡೆಯುವ ಉದ್ದೇಶದಿಂದ ,ಮೃತ ವ್ಯಕ್ತಿಯ ನಕಲಿ ಸಹಿ ಮಾಡಲಾಗಿದ್ದ ದಾಖಲೆಪತ್ರಗಳನ್ನು ಅದೇ ದಿನ ಆರ್‌ಟಿಒ ಕಚೇರಿಗೆ ನೀಡಿ ಮೋಟಾರ್ ಸೈಕಲನ್ನು ತನ್ನ ಹೆಸರಿಗೆ ನೋಂದಾಯಿಸಿಕೊಂಡು ವಂಚಿಸಿರುವುದಾಗಿ, ಮೃತ ಕುಸುಮಾಧರ ಅವರ ಪತ್ನಿ ಕೊಳ್ತಿಗೆ ಎಳೆತ್ತಡ್ಕದ ಶ್ರೀಮತಿ ಜಯಶ್ರೀ ಎ.ಅವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೆಳ್ಳಾರೆ ಪೊಲೀಸರು ಆರೋಪಿಗಳ ವಿರುದ್ಧ ಕಲಂ 465,467,471 ಜೊತೆಗೆ 34 ಐಪಿಸಿಯಡಿ ನ್ಯಾಯಾಲಯಕ್ಕೆ
ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.ಮೇ 6ರಂದು ಮುಂದಿನ ವಿಚಾರಣೆ ನಡೆಯಲಿದೆ.