ಪುತ್ತೂರು,ಕಡಬ,ವಿಟ್ಲದಿಂದಲೂ ಸಾವಿರಾರು ಮಂದಿ ಭಾಗಿ
ಮಂಗಳೂರು:ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಮಂಗಳೂರು ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್‌ನಲ್ಲಿ ಏ.18ರಂದು ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.ಪುತ್ತೂರು,ಕಡಬ, ವಿಟ್ಲ ಭಾಗದಿಂದಲೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮುಸಲ್ಮಾನ ಬಂಧುಗಳು ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಉಡುಪಿ ಸಂಯುಕ್ತ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿತ್ತು.ದ.ಕ.ಮಾತ್ರವಲ್ಲದೆ ಉಡುಪಿ,ಕೊಡಗು, ಚಿಕ್ಕಮಗಳೂರು,ಕಾಸರಗೋಡು ಜಿಲ್ಲೆಯ ಸಾವಿರಾರು ಮಂದಿ ಭಾಗವಹಿಸಿದ್ದರು.ಜಿಲ್ಲೆಯ ಬಹುತೇಕ ಮುಸ್ಲಿಂ ಸಂಘಟನೆಗಳ ಮುಖಂಡರು,ಕಾರ್ಯಕರ್ತರು ಭಾಗಿಯಾಗಿದ್ದರು.ನೇತ್ರಾವತಿ ನದಿಯಲ್ಲಿ ದೋಣಿ ಬಳಸಿಯೂ ಕೆಲವರು ಶಾ ಗಾರ್ಡನ್ ತಲುಪಿದ್ದರು.ಎಲ್ಲೆಡೆ ಆಝಾದಿ ಘೋಷಣೆ ಮೊಳಗಿತು.ಅಪರಾಹ್ನ ಕಣ್ಣೂರು ದರ್ಗಾ ಝಿಯಾರತ್ ನಡೆದ ಬಳಿಕ ಆರಂಭಗೊಂಡ ಕಾರ್ಯಕ್ರಮವು ಮುಸ್ಸಂಜೆಯ ವೇಳೆಗೆ ಮುಕ್ತಾಯಗೊಂಡಿತು.
ಸುನ್ನಿ ಸಂಘಟನೆಗಳ ಎರಡು ವಿಭಾಗದ ಉಲೆಮಾಗಳ ನಾಯಕತ್ವದಲ್ಲಿ ರೂಪುಗೊಂಡ ಕರ್ನಾಟಕ ಉಲೆಮಾ ಒಕ್ಕೂಟದ ವತಿಯಿಂದ ನಡೆದ ಈ ಬೃಹತ್ ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ಸೈಯದ್ ಇಸ್ಮಾಯಿಲ್ ತಂಙಳ್ ಉಜಿರೆ ದುಆ:ಗೈದರು.ಕವಿ ಅಲ್ಲಾಮ ಇಕ್ಬಾಲರ ಕವನವನ್ನು ಉಲ್ಲೇಖಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಾತನಾಡಿ ವಕ್ಫ್ ಮುಸ್ಲಿಮರ ಹಕ್ಕಾಗಿದೆ.ಫಾಸಿಸ್ಟ್ ಶಕ್ತಿಗಳು ವಕ್ಫ್ ಆಸ್ತಿಯನ್ನು ಕಿತ್ತುಕೊಳ್ಳಲು ಯಾವ ಕಾರಣಕ್ಕೂ ಬಿಡಲಾರೆವು ಎಂದು ಘೊಷಿಸಿದರು.
ರಾಜ್ಯ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಬೆಂಗಳೂರು,ಕರ್ನಾಟಕ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಉಸ್ಮಾನುಲ್ ಫಾಝಿ ತೋಡಾರು,ಕರ್ನಾಟಕ ಉಲಮಾ ಒಕ್ಕೂಟದ ನಿರ್ದೇಶಕ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಕರ್ನಾಟಕ ಮುಸ್ಲಿಂ ಒಕ್ಕೂಟದ ಕಾರ್ಯದರ್ಶಿಗಳಾದ ಡಾ|ಎಂ.ಎಸ್.ಎಂ.ಅಬ್ದುಲ್ ರಶೀದ್ ಝೈನಿ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್,ಕರ್ನಾಟಕ ಉಲಮಾ ಒಕ್ಕೂಟದ ಪದಾಧಿಕಾರಿಗಳಾದ ಡಾ|ಫಾಝಿಲ್ ಹಝ್ರತ್ ಕಾವಳಕಟ್ಟೆ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಖಾಸಿಂ ದಾರಿಮಿ, ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ,ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಅಬೂಸುಫಿಯಾನ್ ಸಖಾಫಿ, ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ,ಮೆಹಬೂಬ್ ಸಖಾಫಿ ಕಿನ್ಯ, ಉಲೆಮಾಗಳಾದ ಎಸ್.ಬಿ.ಮುಹಮ್ಮದ್ ದಾರಿಮಿ, ಅಮೀರ್ ತಂಞಳ್ ಕಿನ್ಯ, ರಫೀಕ್ ಹುದವಿ ಕೋಲಾರ, ಅನ್ವರ್ ಅಸ್‌ಅದಿ ಚಿತ್ರದುರ್ಗ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಭಟನಾ ಸ್ಥಳದಲ್ಲಿ ಸೇರಿದ್ದವರು ಆಝಾದಿ ಘೋಷಣೆಗಳನ್ನು ಕೂಗುತ್ತಾ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಪೊಲೀಸರ ಜತೆಗೆ ಸ್ವಯಂ ಸೇವಕರು ಕೂಡಾ ಮೈದಾನದ ಸುತ್ತಮುತ್ತ ಸುಗಮ ಸಂಚಾರ ವ್ಯವಸ್ಥೆಗೆ ಸಹಕರಿಸುತ್ತಿರುವುದು ಕಂಡು ಬಂತು.
ರಾಷ್ಟ್ರ ಧ್ವಜಗಳ ಹಾರಾಟ:
ಸಮಾವೇಶದ ಮೈದಾನದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸಮೂಹವೇ ಸೇರಿತ್ತು.ಅಲ್ಲಲ್ಲಿ ರಾಷ್ಟ್ರ ಧ್ವಜಗಳ ಹಾರಾಟ ಪ್ರತಿಭಟನಾಕಾರರಿಗೆ ಹೊಸ ಚೈತನ್ಯ ತುಂಬಿದವು.ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿವಿಧ ರೀತಿಯ ಭಿತ್ತಿ ಪತ್ರಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು.‘ಈ ಕಾಯ್ದೆ-ಸಾಂವಿಧಾನಿಕ ಆಕ್ರಮಣ’,‘ನ್ಯಾಯಕ್ಕಾಗಿ ಹೋರಾಟ, ವಕ್ಫ್ ಆಸ್ತಿ ಕಾಪಾಡೋಣ,‘ಸೇವ್ ವಕ್ಫ್, ಸೇವ್ ಕಾನ್‌ಸ್ಟಿಟ್ಯೂಶನ್’,‘ವಕ್ಫ್ ರಾಜಕೀಯಗೊಳಿಸದಿರಿ’,‘ನಮ್ಮನ್ನು ಮೌನವಾಗಿಸಬೇಡಿ-ಈ ಕಾಯ್ದೆ ಹಿಂಪಡೆಯಿರಿ’,‘ನಮ್ಮ ಹಕ್ಕುಗಳು, ನಮ್ಮ ಧ್ವನಿ ಯಾವುದೇ ರಾಜಿ ಇಲ್ಲ’ ಮೊದಲಾದ ಘೋಷಣೆಗಳಿಂದ ಕೂಡಿದ ಭಿತ್ತಿ ಪತ್ರಗಳ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪುತ್ತೂರು,ಕಡಬ,ವಿಟ್ಲದಿಂದಲೂ ಸಾವಿರಾರು ಮಂದಿ ಭಾಗಿ:
ಪುತ್ತೂರು,ಕಡಬ ತಾಲೂಕು,ಸುಳ್ಯ ಮತ್ತು ಬಂಟ್ವಾಳ ತಾಲೂಕುಗಳಿಂದಲೂ ವಿವಿಧ ಮುಸ್ಲಿಂ ಸಂಘಟನೆಗಳ ಪ್ರಮುಖರು ಸೇರಿದಂತೆ ಸಾವಿರಾರು ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.ಖಾಸಗಿ ಬಸ್ಸುಗಳ ಸಹಿತ ವಿವಿಧ ವಾಹನಗಳಲ್ಲಿ ಕಾರ್ಯಕರ್ತರು ಮಂಗಳೂರು ತೆರಳಿದ್ದರು.