ಇಂದು ಯೇಸುಕ್ರಿಸ್ತರ ಪುನರುತ್ಥಾನ ಆಚರಣೆ
ನಾಳೆ ಈಸ್ಟರ್ ಹಬ್ಬ
ಪುತ್ತೂರು: ಯೇಸು ಕ್ರಿಸ್ತರು ಶಿಲುಬೆಯಲ್ಲಿ ತನ್ನ ಪ್ರಾಣವನ್ನು ಅರ್ಪಿಸಿದ ದಿನವಾದ ಶುಭಶುಕ್ರವಾರ ‘ಗುಡ್ ಫ್ರೈಡೇ’ ಹಾಗೂ ಅದರ ಹಿಂದಿನ ದಿನ ಯೇಸುಕ್ರಿಸ್ತರ ಕೊನೆಯ ಭೋಜನದ ಪವಿತ್ರ ಗುರುವಾರ ಆಚರಣೆ ಚರ್ಚ್‌ಗಳಲ್ಲಿ ನಡೆಯಿತು. ಪುತ್ತೂರಿನ ಮಾದೆ ದೇವುಸ್ ಚರ್ಚ್, ಬನ್ನೂರು ಸಂತ ಅಂತೋನಿ ಚರ್ಚ್, ಮರೀಲ್ ಸೇಕ್ರೆಡ್ ಹಾರ್ಟ್ ಚರ್ಚ್, ಉಪ್ಪಿನಂಗಡಿ ದೀನರ ಕನ್ಯಾ ಮಾತೆ ದೇವಾಲಯ, ಬೆಳ್ಳಾರೆ, ಮನೆಲ, ನಿಡ್ಪಳ್ಳಿ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಕಾರ್ಯಕ್ರಮ ನಡೆಯಿತು. ಪುತ್ತೂರು ಮಾಯ್ ದೆ ದೇವುಸ್ ಚರ್ಚ್‌ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಯೇಸು ಕ್ರಿಸ್ತರು ಶಿಲುಬೆಗೇರುವ ಮೊದಲು ತನ್ನ 12 ಮಂದಿ ಶಿಷ್ಯರೊಂದಿಗೆ ಕುಳಿತು ಕೊನೆಯ ಭೋಜನ ಮಾಡಿದ ದಿನದ ನೆನಪಿನಲ್ಲಿ ಪವಿತ್ರ ಗುರುವಾರ ಆಚರಣೆ ಮಾಡಲಾಗುತ್ತದೆ. ಮಾಯ್ ದೆ ದೇವುಸ್ ಚರ್ಚ್‌ನಲ್ಲಿ ಎ.17ರಂದು ಯೇಸುವಿನ ಕೊನೆಯ ದಿನದ ಆಚರಣೆ ಮಾಡಲಾಯಿತು. ಕ್ರಿಸ್ತರು ತನ್ನ 12 ಮಂದಿ ಶಿಷ್ಯರ ಪಾದಗಳನ್ನು ತೊಳೆದು ತ್ಯಾಗ, ಕ್ಷಮೆ, ಪ್ರೀತಿ, ಸೇವೆಯ ಸಂದೇಶ ಸಾರುವ ಪ್ರಕ್ರಿಯೆ ನಡೆಸಲಾಯಿತು. ವಂ| ರೂಪೇಶ್ ತಾವ್ರೋ ಬಲಿಪೂಜೆ ನೆರವೇರಿಸಿದರು. ಮಾಯ್ ದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಲಾರೆನ್ಸ್ ಮಸ್ಕರೇನ್ಹಸ್ 12 ಮಂದಿ ಕ್ರೈಸ್ತ ವಿಶ್ವಾಸಿ ಜನರ ಪಾದಗಳನ್ನು ತೊಳೆಯುವ ಆಚರಣೆ ನಡೆಸಿದರು. ಸಹಾಯಕ ಧರ್ಮಗುರು ವಂ| ಲೋಹಿತ್ ಅಜಯ್ ಮಸ್ಕರೇನ್ಹಸ್ ಆಶೀರ್ವಚನ ನೀಡಿ ಯೇಸು ಸ್ವಾಮಿಯ ಶಿಲುಬೆಯ ಮರಣ ನಮಗೆ ಭರವಸೆಯ ಸಂಕೇತ. ಯೇಸು ಸ್ವಾಮಿ ತನಗೆ ಜನರು ತಿರಸ್ಕರಿಸಿದರೂ, ಅವರ ಜೀವನ ಕಷ್ಟಕರವಾದರೂ, ಶಿಲುಬೆ ಹೊತ್ತು ನಡೆದಾಗ ಬಿದ್ದರೂ ಎದ್ದು ಮುನ್ನಡೆಯುತ್ತಾರೆ. ಯೇಸು ನಿರಾಶೆಗೊಳ್ಳುವುದಿಲ್ಲ. ತಿರಸ್ಕಾರ, ಕಷ್ಟವನ್ನು ಮೆಟ್ಟಿ ನಿತ್ತು ತನ್ನ ಗುರಿ ತಲುಪುತ್ತಾರೆ. ನಮಗೆ ತಿರಸ್ಕಾರ ಲಭಿಸಿದಾಗ, ಕಷ್ಟ ಬಂದಾಗ ಹಾಗೂ ಬಿದ್ದಾಗ ಎದ್ದು ಮುನ್ನಡೆಯಲು ಯೇಸು ನಮ್ಮ ಭರವಸೆಯ ಮೂಲವಾಗಿದ್ದಾರೆ ಎಂದರು. ವಂ.ಅಶೋಕ್ ರಾಯನ್ ಕ್ರಾಸ್ತಾ, ವಂ.ಮ್ಯಾಕ್ಸಿಂ ಡಿಸೋಜ ಉಪಸ್ಥಿತರಿದ್ದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟಾ ಹಾಗೂ ಸಮಿತಿ ಸದಸ್ಯರು, ಕ್ರೈಸ್ತ ಭಾಂಧವರು ಉಪಸ್ಥಿತರಿದ್ದರು.
ಶುಭಶುಕ್ರವಾರ ಆಚರಣೆ:
ಶುಭ ಶುಕ್ರವಾರವನ್ನು ಕ್ರೈಸ್ತ ಧರ್ಮದವರು ಪವಿತ್ರ ದಿನವನ್ನಾಗಿ ಆಚರಿಸುತ್ತಾರೆ. ಈ ದಿನ ಯೇಸು ಕ್ರಿಸ್ತರನ್ನು ಶಿಲುಬೆಗೆ ಹಾಕಲ್ಪಟ್ಟ ದಿನವಾಗಿದೆ. ಶುಭ ಶುಕ್ರವಾರದ ಮಹತ್ವವು ಯೇಸು ತನ್ನ ಪ್ರಾಣವನ್ನು ತ್ಯಾಗ ಮಾಡಿದ್ದನ್ನು ಸ್ಮರಿಸುವುದರಲ್ಲಿ ಇದೆ. ಕ್ರೈಸ್ತದೇವಾಲಯಗಳಲ್ಲಿ ವಿಶೇಷ ಪೂಜೆಗಳು, ಧ್ಯಾನ ಮತ್ತು ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ. ಜನರು ಉಪವಾಸದಿಂದ ದಿನ ಕಳೆಯುತ್ತಾರೆ ಮತ್ತು ಮೌನದಿಂದ ದೇವರನ್ನು ಸ್ಮರಿಸುತ್ತಾರೆ. ಈ ದಿನವು ದುಃಖದ ದಿನವಾದರೂ, ಯೇಸು ತನ್ನ ಮರಣದ ಮುಖಾಂತರ ಲಭಿಸಿ ಕೊಟ್ಟ ಮೋಕ್ಷದ ಕಾರಣದಿಂದಾಗಿ ಅದನ್ನು ಶುಭ ಶುಕ್ರವಾರ ಎಂದು ಕರೆಯುತ್ತಾರೆ.
‘ಗುಡ್ ಫ್ರೈಡೇ’ ಶುಭ ಶುಕ್ರವಾರ ದಿನ ಯೇಸುಕ್ರಿಸ್ತರ ಶಿಲುಬೆಯ ಹಾದಿ ಕಾರ್ಯಕ್ರಮ ನಡೆಯಿತು. ಎ.18ರಂದು ಬೆಳಿಗ್ಗೆ ಪ್ರಾರ್ಥನೆ, ಸಂಜೆ ಪ್ರಾರ್ಥನಾ ವಿಧಿ ನೆರವೇರಿದ ಬಳಿಕ ಯೇಸುಕ್ರಿಸ್ತರ ಪಾರ್ಥೀವ ಶರೀರ ಮತ್ತು ಮೇರಿ ಮಾತೆಯ ಮೂರ್ತಿಯ ಮೌನ ಮೆರವಣಿಗೆ ನಡೆಯಿತು. ಚರ್ಚ್‌ನಿಂದ ಮೆರವಣಿಗೆ ಆರಂಭಗೊಂಡು ಎಮ್.ಟಿ. ರಸ್ತೆ ಮೂಲಕ ಕೋರ್ಟು ರಸ್ತೆಯಲ್ಲಿ ಸಾಗಿ ಪುನಃ ಚರ್ಚ್‌ಗೆ ಆಗಮಿಸಿತು. ವಂ.ಅಶೋಕ್ ರಾಯನ್ ಕ್ರಾಸ್ತಾ ಪ್ರಾರ್ಥನಾ ವಿಧಿ ನೆರವೇರಿಸಿದರು. ಚರ್ಚ್‌ನ ಪ್ರಧಾನ ಧರ್ಮಗುರು ವಂ.ಲಾರೆನ್ಸ್ ಮಸ್ಕರೇನಸ್, ಸಹಾಯಕ ಧರ್ಮಗುರು ವಂ.ಲೋಹಿತ್ ಅಜಯ್ ಮಸ್ಕರೇನಸ್, ವಂ.ಮ್ಯಾಕ್ಸಿಂ ಡಿಸೋಜ, ವಂ| ರೂಪೇಶ್ ರವೀನ್ ತಾವ್ರೋ ಉಪಸ್ಥಿತರಿದ್ದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟಾ ಹಾಗೂ ಪಾಲನಾ ಸಮಿತಿ ಸದಸ್ಯರು, ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.