ಬಡಗನ್ನೂರು ಸ ಹಿ ಪ್ರಾ ಶಾಲಾ ನೂತನ ಕೊಠಡಿ ಉದ್ಘಾಟಿಸಿ ಶಾಸಕ ಅಶೋಕ್ ರೈ

ಪುತ್ತೂರು: ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ, ಸರಕಾರಿ ಶಾಲೆಯ ಬಗ್ಗೆ ನಿರ್ಲಕ್ಷ್ಯ ಬೇಡ, ಸರಕಾರಿ ಶಾಲೆಯಲ್ಲಿರುವ ಶಿಕ್ಷಕರು ತರಬೇತಿ ಪಡೆದವರೇ ಆಗಿದ್ದು ಇಂತಹ ಶಿಕ್ಷಕರು ಖಾಸಗಿ ಶಾಲೆಗಳಲ್ಲಿ ಸಿಗಲು ಸಾಧ್ಯವಿಲ್ಲ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.ಅವರು ಬಡಗನ್ನೂರು ಗ್ರಾಮದ ಬಡಗನ್ನೂರು ಸ. ಹಿ ಪ್ರಾ ಶಾಲೆಯ ನೂತನ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕದ ವಿಚಾರವಾಗಿದೆ, ಸರಕಾರಿ ಶಾಲೆಗಳು ಮುಚ್ಚಿದರೆ ಅದರ ಪರಿಣಾಮ ವಿಪರೀತವಾಗಿರುತ್ತದೆ. ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಈ ವಿಚಾರದಲ್ಲಿ ಮುತುವರ್ಜಿ ವಹಿಸಿ ಶಾಲೆಯನ್ನು ಉಳಿಸುವ ಕೆಲಸವನ್ನು ಮಾಡಬೇಕು ಎಂದು ಶಾಸಕರು ಹೇಳಿದರು.
ಇಂದು ಉನ್ನತ ಸ್ಥಾನದಲ್ಲಿರುವ ಎಲ್ಲಾ ರಾಜಕಾರಣಿಗಳು ಸರಕಾರಿ ಶಾಲೆಯಲ್ಲೇ ವ್ಯಾಸಂಗ ಮಾಡಿದವರು ಆವಾಗ ಖಾಸಗಿ ಶಾಲೆ ಇರಲಿಲ್ಲ, ಈಗಿನ ರಾಜಕಾರಣಿಗಳ ಮಕ್ಕಳು ಸರಕಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಿಲ್ಲ ಎಂದು ಹೇಳಿದ ಶಾಸಕರು ಸರಕಾರಿ ಶಾಲೆ ಉಳಿಸುವಲ್ಲಿ ಎಲ್ಲರೂ ಶ್ರಮವಹಿಸಬೇಕು ಎಂದು ಹೇಳಿದರು.
ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಲ್ಲ
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಾವುದೇ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಲ್ಲ, ಕೊರತೆ ಇರುವಲ್ಲಿ ಶಿಕ್ಷಕರನ್ನು ನೇಮಕಮಾಡಲಾಗಿದೆ. ಮಕ್ಕಳ ಸಂಖ್ಯೆ ಮಾತ್ರ ಕೊರತೆ ಇದ್ದು ಅದನ್ನು ನೀಗಿಸುವಲ್ಲಿ ನಾವೆಲ್ಲರೂ ಪ್ರಯತ್ನ ಮಾಡಬೇಕು ಇದಕ್ಕಾಗಿ ಸರಕಾರ ಪ್ರತೀ ಎರಡು ಗ್ರಾಮಕ್ಕೊಂದು ಕೆಪಿಎಸ್ ಮಾದರಿ ಶಾಲೆಯನ್ನು ಆರಂಭಿಸಲಿದೆ. ಕನಿಷ್ಠ ಮಕ್ಕಳಿರುವ ಶಾಲೆಯನ್ನು ಕೆಪಿಎಸ್ ಜೊತೆ ಮರ್ಜಿ ಮಾಡಲಾಗುವುದು. ಶತಮಾನ ಕಂಡ ಶಾಲೆಗಳು ಮುಚ್ಚುವ ಹಂತದಲ್ಲಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಮಕ್ಕಳನ್ನು ಪೆದ್ದ ಎಂದು ಕರೆಯದಿರಿ
ಮಕ್ಕಳು ಕಲಿಕೆಯಲ್ಲಿ ಹಿಂದೆ ಇದ್ದರೆ ಅವರನ್ನು ಶಿಕ್ಷಕರಾಗಿ, ಪೋಷಕರಾಗಲಿ ಪೆದ್ದ ಎಂದು ತಪ್ಪಿಯೂ ಕರೆಯಬೇಡಿ, ಆ ಮಗು ಕಲಿಯದೇ ಇರಲು ಪೋಷಕರೇ ನೇರ ಕಾರಣರು. ಮಗುವಿನ ಶಿಕ್ಷಣದ ಫೌಂಡೇಷನ್ ಸರಿಯಾಗದ ಕಾರಣ ಮಗು ಆಸ್ಥಿತಿಗೆ ಬಂದಿರಬಹುದು. ಮಕ್ಕಳು ಕಲಿಯದೇ ಇದ್ದರೆ ಅದಕ್ಕೆ ಪೋಷಕರೇ ನೇರ ಹೊಣೆಯಾಗಲಿದ್ದು ಪೆದ್ದ ಎಂದು ಕರೆದರೆ ಮಗು ಮಾನಸಿಕವಾಗಿ ನೊಂದು ಹೋಗುವ ಸಾಧ್ಯತೆ ಇದೆ ಎಂದು ಶಾಸಕರು ಹೇಳಿದರು.
ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರ ಶ್ರೀನಿವಾಸ ಭಟ್ ಚಂದುಕೊಡ್ಲು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಪುತ್ತೂರು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ತರಗತಿ ಉದ್ಘಾಟನೆ ಮಾಡಿ ಮಾತನಾಡಿದರು. ಕಾರ್ಯಕ್ರಮವು ಬಡಗನ್ನೂರು ಗ್ರಾ. ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ, ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಬಡಗನ್ನೂರು ಗ್ರಾ. ಪಂ ಸದಸ್ಯರುಗಳಾದ ರವಿರಾಜ ರೈ ಸಜಂಕಾಡಿ, ಸಂತೋಷ್ ಆಳ್ವ, ಗಿರಿಮನೆ ಬಡಗನ್ನೂರು ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಕೆ. ಪಿ. ಸುಬ್ಬಯ್ಯ, ಗೌರವ ಉಪಸ್ಥಿತರಾಗಿ ಅಕ್ರಮ ಸಕ್ರಮ ಸಮಿತಿ ಸದಸ್ಯ ಹಾಜಿ ಮಹಮ್ಮದ್ ಬಡಗನ್ನೂರು, ಪುತ್ತೂರ ರಮಾದೇವಿ ಮತ್ತು ಶ್ರೀ ಲಕ್ಷ್ಮೀನಾರಾಯಣ ರಾವ್ ಪಡುಮಲೆ ಮಂಗಳೂರು, ಹಿರಿಯ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರಾದ ಬಾಲಕೃಷ್ಣ ರೈ ಕುದ್ಯಾಡಿ, ಜಯಂತ ರೈ ಕುದ್ಯಾಡಿ, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ನಾರಾಯಣ ರೈ ಕುದ್ಯಾಡಿ, ಕೃಷ್ಣ ರೈ ಕುದ್ಯಾಡಿ, ಮುಖ್ಯಗುರುಗಳು, ಬಡಗನ್ನೂರು ಹಿರಿಯ ವಿದ್ಯಾರ್ಥಿ ಸಂಘ ಸಲಹೆಗಾರರ ಸತೀಶ್ ರೈ ಕಟ್ಟಾವು, ಹಿರಿಯ ವಿದ್ಯಾರ್ಥಿ ಸಂಘದ ಸಂಘಟನಾ ಕಾರ್ಯದರ್ಶಿ, ಸಲಾವುದ್ದೀನ್ ಪದಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಜನಾರ್ಧನ ಪೂಜಾರಿ ಪದಡ್ಯ , ನರ್ತಕ ಡಾ. ರವೀಶ್ ಪಡುಮಲೆ, ಆಬಿದ್ ಬಡಗನ್ನೂರು, ಉದ್ಯಮಿ ರಾಕೇಶ್ ರೈ ಕುದ್ಕಾಡಿ ಉಪಸ್ಥಿತರಿದ್ದರು.