ಹಿರಿಯ ಕಾನೂನು ಅಧಿಕಾರಿ ಕೆ. ಶಿವಪ್ರಸಾದ್ ಆಳ್ವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ

0

ಪುತ್ತೂರು: ರಾಜ್ಯ ಸರ್ಕಾರಿ ನೌಕರರಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದವರಿಗೆ ನೀಡಲಾಗುವ ಸರ್ವೋತ್ತಮ ಸೇವಾ ಪ್ರಶಸ್ತಿಯ 2023ನೇ ಸಾಲಿನ ಪಟ್ಟಿಯನ್ನು ಸರ್ಕಾರ ಎ.19ರಂದು ಪ್ರಕಟಿಸಿದೆ. ಹಿರಿಯ ಕಾನೂನು ಅಧಿಕಾರಿ ಪುತ್ತೂರಿನ ಕೆ.ಶಿವಪ್ರಸಾದ್ ಆಳ್ವರವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರತೀ ಜಿಲ್ಲೆಯ ಜಿಲ್ಲಾಧಿಕಾರಿ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗೆ ತಲಾ ಇಬ್ಬರನ್ನು ನಾಮ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ 30 ಸಾಧಕರ ಹೆಸರುಗಳನ್ನು ಸರ್ಕಾರ ಪ್ರಕಟಿಸಿದೆ.

ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾದವರಿಗೆ ಸರ್ಕಾರ ನೀಡುತ್ತಿದ್ದ ಪ್ರಶಸ್ತಿಯ ಮೊತ್ತವನ್ನು ತಲಾ 10 ಸಾವಿರದಿಂದ 25 ಸಾವಿರಕ್ಕೆ ಮತ್ತು ರಾಜ್ಯ ಪ್ರಶಸ್ತಿಗೆ ಆಯ್ಕೆಯಾದವರಿಗೆ ತಲಾ 25 ಸಾವಿರದಿಂದ 50 ಸಾವಿರಕ್ಕೆ ಪ್ರಶಸ್ತಿ ಮೊತ್ತ ಏರಿಸಲಾಗಿದೆ. ಪ್ರಶಸ್ತಿಗೆ ಆಯ್ಕೆಯಾಗಿರುವ ಕೆ.ಶಿವಪ್ರಸಾದ್ ಆಳ್ವ ಅವರು ಪುತ್ತೂರು ತಾಲೂಕಿನ ದರ್ಬೆ ಸಮೀಪದ ಕಾವೇರಿಕಟ್ಟೆ ಮೂಲದವರಾಗಿದ್ದು ವಿವಿಧ ನ್ಯಾಯಾಲಯಗಳಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಮತ್ತು ಸರ್ಕಾರಿ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿ ಜನಮೆಚ್ಚುಗೆ ಗಳಿಸಿದ್ದು ಪ್ರಸ್ತುತ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿಯಾಗಿದ್ದಾರೆ. ಹಲವು ವಿಶೇಷ ಪ್ರಕರಣಗಳಲ್ಲಿ ಸರಕಾರದ ಪರ ವಾದ ಮಂಡಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುವ ಶಿವಪ್ರಸಾದ್ ಆಳ್ವ ಅವರು ಕೋಕಾ ಕಾಯ್ದೆಯಡಿ ಬಂಧಿತನಾಗಿರುವ ಭೂಗತ ಪಾತಕಿ ಬನ್ನಂಜೆ ರಾಜಾನ ವಿರುದ್ಧ ಪ್ರಾಸಿಕ್ಯೂಶನ್ ಪರ ಯಶಸ್ವಿಯಾಗಿ ವಾದ ಮಂಡಿಸಿದ ಹಿನ್ನಲೆಯಲ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನ್ಯಾಯಾಂಗ ಇಲಾಖೆಯಿಂದ ಈ ಪ್ರಶಸ್ತಿಗೆ ಮೊದಲಿಗರು ಎಂಬ ಖ್ಯಾತಿಗೆ ಶಿವಪ್ರಸಾದ್ ಆಳ್ವ ಭಾಜನರಾಗಿದ್ದಾರೆ.

ಶಿವಪ್ರಸಾದ್ ಆಳ್ವ ಅವರು 1994 ರಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಜೇಷ್ಠತಾಪಟ್ಟಿಯಲ್ಲಿ ಮೊದಲ ಕ್ರಮ ಸಂಖ್ಯೆಯಲ್ಲಿ ನೇಮಕಗೊಂಡು ಈವರೆಗೆ ವಿಭಾಗದ ಆಡಳಿತ ಮುಖ್ಯಸ್ಥರಾಗಿ 10 ವರ್ಷ, ಅಭಿಯೋಜಕರಾಗಿ 31 ವರ್ಷ ಸೇವೆ ಸಲ್ಲಿಸಿದ್ದು, ಇನ್ನು 02 ವರ್ಷಗಳ ಸೇವಾ ಅವಧಿ ಹೊಂದಿರುವ ಇಲಾಖೆಯ ಏಕೈಕ ಅಧಿಕಾರಿಯಾಗಿರುತ್ತಾರೆ.

ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರಾಗಿ ಹೆಚ್ಚುವರಿ ಪ್ರಭಾರದಲ್ಲಿ ಇದ್ದಾಗ 30 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಶಿಕ್ಷೆ ಅದರಲ್ಲಿ 10 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ, 1 ಪ್ರಕರಣದಲ್ಲಿ ಮರಣದಂಡನೆಯಾಗಿರುತ್ತದೆ.

ಮಂಗಳೂರಿನ ೬ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಅಭಿಯೋಜಕರಾಗಿ ನಿಯೋಜಿಸಲ್ಪಟ್ಟ ೬ ಪ್ರಕರಣಗಳಲ್ಲಿ ೪ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆಯಾಗಿದೆ. ಅವುಗಳಲ್ಲಿ 2 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯಾಗಿರುತ್ತದೆ.

ಭೂಗತ ಪಾತಕಿ ರಶೀದ್ ಮಲಬಾರಿಯ ವಿರುದ್ಧ ದಾಖಲಾದ ಪ್ರಕರಣದಲ್ಲಿ ಅಭಿಯೋಜಕರಾಗಿ ಕರ್ತವ್ಯ ನಿರ್ವಹಿಸಿದ್ದು, ಈ ಪ್ರಕರಣದಲ್ಲಿ ಆತನಿಗೆ ಶಿಕ್ಷೆಯ ತೀರ್ಪಾಗಿರುತ್ತದೆ.

ಬೆಳಗಾವಿ ಕೋಕಾ ನ್ಯಾಯಾಲಯದಲ್ಲಿ ೩ ದಿನಗಳ ಕಾಲ ಸುದೀರ್ಘ ಅಂತಿಮ ವಾದ ಮಂಡಿಸಿ ಭೂಗತ ಪಾತಕಿಯಾದ ಬನಂಜೆ ರಾಜಾ ಮತ್ತು ಆತನ ಸಹಚರರ ವಿರುದ್ಧ ದಾಖಲಾಗಿದ್ದ ಕೋಕಾ ಪ್ರಕರಣದಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಶಿಕ್ಷೆಯಾಗಿದ್ದು, ಅದರಲ್ಲಿ ವಿಶೇಷ ಹೆಚ್ಚುವರಿ ಸರಕಾರಿ ಅಭಿಯೋಜಕರಾಗಿ ಕರ್ತವ್ಯ ನಿರ್ವಹಣೆ.

ಉಡುಪಿಯ ನ್ಯಾಯವಾದಿ ಪ್ರೇಮರಾಜ ಕಿಣಿರವರ ವಿರುದ್ಧ ಪರಿಶಿಷ್ಟ ಜಾತಿಯ ಕಕ್ಷೀದಾರರಿಗೆ ಎಂ.ವಿ.ಸಿ. ಪ್ರಕರಣದಲ್ಲಿ ನ್ಯಾಯಾಲಯ ಮಂಜೂರು ಮಾಡಿದ ಹಣವನ್ನು ನೊಂದವರಿಗೆ ಪಾವತಿಸದೆ ಪೋರ್ಜರಿ ಮಾಡಿ ಹಣವನ್ನು ಸ್ವಂತಕ್ಕೆ ದುರುಪಯೋಗಪಡಿಸಿದ ಬಗ್ಗೆ ದಾಖಲಾದ ಪ್ರಕರಣದಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ವಾದಿಸಿ ಆರೋಪಿ ಪ್ರೇಮರಾಜ ಕಿಣಿಯವರಿಗೆ ಜೀವಾವಧಿ ಶಿಕ್ಷೆಯಾಗಿದೆ.

ಉಡುಪಿಯ ಹಿಂದಿನ ಶಾಸಕ ಶ್ರೀ ರಘುಪತಿ ಭಟ್ ರವರ ಪತ್ನಿ ಪದ್ಮಪ್ರಿಯ ರವರ ಆತ್ಮಹತ್ಯೆಗೆ ಕಾರಣನಾದ ಆರೋಪಿ ಅತುಲ್ ರಾವ್ ರವರ ಪ್ರಕರಣದಲ್ಲೂ ವಿಶೇಷ ಸರಕಾರಿ. ಅಭಿಯೋಜಕರಾಗಿ ವಾದಿಸಿ ಆರೋಪಿಗೆ ಶಿಕ್ಷೆಯಾಗಿರುತ್ತದೆ.

ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅಂಕೋಲ ತಾಲೂಕಿನ ಆಂದ್ರೆ ಗ್ರಾಮದಲ್ಲಿ ಚಿನ್ನಾಭರಣ ಹಾಗೂ ನಗದು ದೋಚುವ ಉದ್ದೇಶದ ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿತರಿಗೆ ಜೀವಾವಧಿ ಶಿಕ್ಷೆಯಾಗಿರುತ್ತದೆ.

ಮಂಗಳೂರಿನ ವಿವಿಧ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 4 ಸೆಷನ್ಸ್ ಕೇಸು ಮತ್ತು ಪುತ್ತೂರಿನ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 4 ಸೆಷನ್ಸ್ ಕೇಸು ಉಡುಪಿಯಲ್ಲಿ 02 ಪ್ರಕರಣ ಹಾಗೂ ಕಾರವಾರದ ಸಿ.ಜೆ.ಎಂ.ನ್ಯಾಯಾಲಯದಲ್ಲಿ ಕರ್ನಾಟಕ ಮೀನುಗಾರಿಕಾ ನಿಗಮಕ್ಕೆ 8 ಕೋಟಿ ಹಣ ವಂಚನೆಯಾದ ಬಾಬು ಪ್ರರಕಣದಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಮಾನ್ಯ ಸರಕಾರ ನೇಮಿಸಿರುತ್ತದೆ.

ಕರ್ನಾಟಕ ಡಿಸಿಆರ್‌ಇನ ಮುಖ್ಯಸ್ಥರಾದ ಎ.ಡಿ.ಜಿ.ಪಿ. ಶ್ರೀ ಅರುಣ್ ಚಕ್ರವರ್ತಿ ಇವರ ನೇತೃತ್ವದ ತಂಡದ ಸದಸ್ಯರಾಗಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯ್ದೆಯಡಿಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಿರುವ ಚತ್ತೀಸ್‌ಗಢ, ಉತ್ತರಖಾಂಡ್, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಈ ೬ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ಪ್ರವಾಸ ಮಾಡಿ ಸರಕಾರಕ್ಕೆ ವರದಿ ಮಂಡಿಸಿದ ತಂಡದ ಸದಸ್ಯರಾಗಿ ಕಾರ್ಯ ನಿರ್ವಹಿಸಿರುತ್ತಾರೆ.

ನವಂಬರ್ 2023 ರಲ್ಲಿ ಉಡುಪಿಯ ಸಂತೆಕಟ್ಟೆ ಬಳಿ ಇಂಡಿಯನ್ ಏರ್‌ಲೈನ್ಸ್‌ನ ಉದ್ಯೋಗಿ, ಆಕೆಯ ತಾಯಿ, ತಂಗಿ,ತಮ್ಮನ ಸಹಿತ 4 ಕೊಲೆಯಾದ ಪ್ರಕರಣದಲ್ಲಿ ಮೃತರ ಮನೆಯವರ ಮತ್ತು ಸಾರ್ವಜನಿಕರ ಕೋರಿಕೆಯ ಮೇರೆಗೆ ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಿಸಲ್ಪಟ್ಟಿರುತ್ತಾರೆ.

12. ಅನ್ಯವಾಸಿ ಭಾರತೀಯ ಶ್ರೀ ಪ್ರವೀಣ್ ಶೆಟ್ಟಿ ವಕ್ವಾಡಿ ಎಂಬವರ ದುಬೈಯಲ್ಲಿರುವ ಪೋರ್ಚುನ್ ಗ್ರೂಪ್ ಆಫ್ ಹೋಟೇಲಿನಲ್ಲಿ ಸುಮಾರು 2.5 ಕೋಟಿಗೂ ಅಧಿಕ ಪ್ರಮಾಣದ ವಂಚನೆಯ ಪ್ರಕರಣದಲ್ಲಿ ಉಡುಪಿಯ ನ್ಯಾಯಾಲಯದಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಶ್ರೀ ಪ್ರವೀಣ್ ಶೆಟ್ಟಿ ವಕ್ವಾಡಿಯವರ ಕೋರಿಕೆಯ ಮೇರೆಗೆ ಸರಕಾರವು ನಿಯೋಜಿಸಿರುತ್ತದೆ.

ಪೊಲೀಸ್ Sub Inspector & DySP ಹುದ್ದೆಗಳಿಗೆ ನೇಮಕಾತಿಗೊಂಡ ಪೊಲೀಸು ಅಧಿಕಾರಿಗಳಿಗೆ ಮೈಸೂರು ಪೊಲೀಸು ಅಕಾಡಮಿಯಲ್ಲಿ ತರಬೇತಿ ನೀಡುತ್ತಿದ್ದು, ಸದ್ರಿ ತರಬೇತಿಗೆ ಸಂಬಂಧಿಸಿ ಕೋಕಾ ಕಾಯ್ದೆಯ ಬಗ್ಗೆ ವಿಶೇಷ ಅತಿಥಿ ಉಪನ್ಯಾಸಕರ ಪಟ್ಟಿಯಲ್ಲಿ ಸೇರ್ಪಡೆಯಾಗಿರುತ್ತಾರೆ.

14. ಪಶ್ಚಿಮ ವಲಯದ IGP ವ್ಯಾಪ್ತಿಯ ಪೊಲೀಸು ವಾರ್ಷಿಕ ಕರ್ತವ್ಯ ಕೂಟ (Duty meet) ದಲ್ಲಿ ಈ ವರೆಗೆ ನಡೆದ ಎಲ್ಲಾ 6 ಕೂಟಗಳಲ್ಲಿಯೂ ಅಭಿಯೋಜನಾ ಇಲಾಖಾ ವತಿಯಿಂದ ಕಾನೂನು ಪ್ರಶ್ನೆ ಪತ್ರಿಕೆಯನ್ನು ಸಿದ್ದಪಡಿಸಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಗಮನಿಸಿದರೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ 10% ಕ್ಕೂ ಕಡಿಮೆ ಇದ್ದರೂ, ಶ್ರೀ ಶಿವಪ್ರಸಾದ್ ಆಳ್ವಕೆ. ಅಭಿಯೋಜಕರಾಗಿ ಕಾರ್ಯ ನಿವಹಿಸಿದ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ 50% ಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ಶಿಕ್ಷೆಯಾಗಿರುತ್ತದೆ.

ಶಿವಪ್ರಸಾದ್ ಆಳ್ವ.ಕೆ. ಇವರು ಕರ್ತವ್ಯಕ್ಕೆ ಹಾಜರಾದ ದಿನದಿಂದ ಇಂದಿನವರೆಗೆ ಅಭಿಯೋಜನಾ ಇಲಾಖೆಯಲ್ಲಿಯೇ ಅತ್ಯಂತ ಹೆಚ್ಚಿನ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಕರ್ತವ್ಯ ನಿರ್ವಹಿಸಿದವರಲ್ಲಿ ರಾಜ್ಯದಲ್ಲಿ ಪ್ರಥಮ ಅಧಿಕಾರಿ ಎಂಬ ಹಿರಿಮೆ ಇವರದ್ದು.

LEAVE A REPLY

Please enter your comment!
Please enter your name here