ನೆಲ್ಯಾಡಿ: ನಿವೃತ್ತ ಸೈನಿಕ, ಹಿರಿಯ ಸಾಹಿತಿ, ಕವಿ,ಕೃಷಿಕ, ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ನಿಸರ್ಗಮಾಣಿಕ್ಯ ನಿಲಯ ನಿವಾಸಿ, ಅಗ್ರಾಳ ನಾರಾಯಣ ರೈ(85ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಎ.20ರಂದು ಬೆಳಿಗ್ಗೆ 9.30ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೂರು ದಿನದ ಹಿಂದೆ ನಾರಾಯಣ ರೈಯವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆಗೆ ಸ್ಪಂದಿಸದೆ ಎ.20ರಂದು ಬೆಳಿಗ್ಗೆ 9.30ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ.
ನಾರಾಯಣ ರೈ ಅವರು ಭಾರತೀಯ ಸೇನೆಯಲ್ಲಿ ಸುಮಾರು 28 ವರ್ಷ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ನಿವೃತ್ತಿಯ ಬಳಿಕ ಕೃಷಿಯಲ್ಲಿ ತೊಡಗಿಕೊಂಡಿದ್ದ ಅವರು ಕಥೆ, ಕವನ ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದರು. ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದರು. ಇವರ ಕಥೆ, ಕವನಗಳು ಮಂಗಳ, ಸುಧಾ ಸಹಿತ ವಿವಿಧ ವಾರಪತ್ರಿಕೆ, ದಿನಪತ್ರಿಕೆಗಳಲ್ಲೂ ಪ್ರಕಟಗೊಂಡಿವೆ. ಇವರಲ್ಲಿನ ಸಾಹಿತ್ಯಾಭಿರುಚಿಯನ್ನು ಗಮನಿಸಿ ಕನ್ನಡ ಸಾಹಿತ್ಯ ಪರಿಷತ್, ಬಂಟರ ಸಂಘ ಸಹಿತ ವಿವಿಧ ಸಂಘಟನೆಗಳೂ ಗುರುತಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿವೆ.
ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ನಾರಾಯಣ ರೈಯವರು ಗುರುತಿಸಿಕೊಂಡಿದ್ದರು. ನೆಲ್ಯಾಡಿ ವಲಯ ಬಂಟರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದು ಪ್ರಸ್ತುತ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿಯಲ್ಲೂ ಈ ಹಿಂದೆ ಸೇವೆ ಸಲ್ಲಿಸಿದ್ದರು. ಇವರು ಕೊಡುಗೈ ದಾನಿಯೂ ಆಗಿದ್ದರು.
ಮೃತರು ಪತ್ನಿ ಸುಲೋಚನಾ ರೈ, ಪುತ್ರ ಪ್ರಸನ್ನ ರೈ, ಪುತ್ರಿಯರಾದ ಪೂರ್ಣಿಮಾ ರೈ, ಪ್ರತಿಮಾ ರೈ, ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.