ಪುತ್ತೂರು:ಸುಮಾರು 40 ವರ್ಷಗಳಿಂದ ನಾವು ಪುತ್ತೂರು ಮಾಯ್ ದೆ ದೇವುಸ್ ಚರ್ಚ್‌ನ ಆವರಣಕ್ಕೆ ಹೋಗುತ್ತಿದ್ದೇವೆ.ಅಲ್ಲಿ ಪ್ರಶಾಂತವಾದ ವಾತಾವರಣ ಇದೆ.ಮಾನಸಿಕವಾಗಿ ಉಲ್ಲಾಸ ಸಿಗುತ್ತದೆ.ಆದುದರಿಂದ ಅಲ್ಲಿ ಕುಳಿತುಕೊಂಡು ಮಾತನಾಡಿ ಮತ್ತೆ ಮನೆಗೆ ಹೋಗುತ್ತೇವೆ.ಇದೇ ರೀತಿ ಮೊನ್ನೆ ಏ.13ರಂದು ಚರ್ಚ್‌ನ ವಠಾರಕ್ಕೆ ಬಂದಿದ್ದೆವು.ಆಗ ಚರ್ಚ್‌ನ ಸೆಕ್ಯೂರಿಟಿ ಗಾರ್ಡ್ ಬಂದು ನಮ್ಮನ್ನು ಹೊರಗೆ ಹೋಗುವಂತೆ ತಿಳಿಸಿದ್ದಾರೆ.ನಾವು ಹೊರಗೆ ಹೋಗಲು ಸಿದ್ಧರಾದಾಗ ಗೇಟಿಗೆ ಬೀಗ ಹಾಕಲಾಗಿದೆ.ಕೀ ತೆಗೆಯುವಂತೆ ಕೇಳಿದಾಗ ಕೀಯನ್ನು ಫಾದರ್‌ರವರು ತೆಗೆದುಕೊಂಡಿದ್ದಾರೆ.ಅವರಲ್ಲಿಯೇ ಹೋಗಿ ಮಾತನಾಡಿ ಎಂದು ತಿಳಿಸಿದ್ದಾರೆ.ಬಳಿಕ ನಾವು ಬಿಷಪ್‌ರವರಿಗೆ ಕೂಡ ಫೋನ್ ಮಾಡಿ ವಿಷಯ ತಿಳಿಸಿದ್ದೇವೆ.ಅವರು ಕೂಡ ನೀವು ಫಾದರ್ ಅವರಲ್ಲಿಯೇ ಮಾತನಾಡಿ ಎಂದು ಹೇಳಿದ್ದಾರೆ.ಗೇಟಿಗೆ ಬೀಗ ಹಾಕಿ ಒಳಗೆ ಜನಸೇರಿಸಿ ನಮ್ಮನ್ನು ಅಲ್ಲಿಗೆ ಕಳುಹಿಸಿ ಗಲಾಟೆ ಮಾಡಬೇಕು.ನಮ್ಮ ಮೇಲೆ ಕೇಸ್ ಆಗುವ ಹಾಗೆ ಆಗಬೇಕು ಎಂದು ಫಾದರ್ ಲಾರೆನ್ಸ್ ಮಸ್ಕರೇನಸ್ ಅವರು ಈ ರೀತಿ ಮಾಡಿದ್ದಾರೆ ಎಂದು ಕ್ರಿಶ್ಚಿಯನ್ ಯೂನಿಯನ್ ಅಧ್ಯಕ್ಷ ಮೌರೀಸ್ ಮಸ್ಕರೇನ್ಹಸ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಏ.13ರಂದು ಚರ್ಚ್ ಗೇಟ್ ಬಂದ್ ಮಾಡುವ ಬಗ್ಗೆ ಏಕಾಏಕಿ ನಿರ್ಧಾರ ತೆಗೆದುಕೊಂಡಿದ್ದಾರೆ.ಗೇಟ್ ಬಂದ್ ಮಾಡುವ ಒಂದು ವಾರ ಮೊದಲೇ ಪ್ರಕಟಣೆ ಕೊಡಬೇಕಿತ್ತು.ದಿಢೀರ್ ನಿರ್ಧಾರ ತೆಗೆದುಕೊಂಡದ್ದು ತಪ್ಪು ಎಂದು ಅವರು ಹೇಳಿದರು.ಏ.13ರ ಸಂಡೇ ದಿನದಿಂದ ಏ.20ರ ಈಸ್ಟರ್ ದಿನದವರೆಗೆ ಒಂದು ವಾರ ಕ್ರಿಶ್ಚಿಯನ್ನರಿಗೆ ಧಾರ್ಮಿಕವಾಗಿ ಪವಿತ್ರವಾದ ದಿನಗಳಾಗಿವೆ. ಇಂತಹ ದಿನಗಳಲ್ಲಿ ಚರ್ಚ್ ನಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಇಲ್ಲ ಎಂದರೆ ಹೇಗೆ? ಎಂದವರು ಪ್ರಶ್ನಿಸಿದರು.
ಮಾ.26ರಂದು ವಿಕ್ಟರನ ಬಾಲಿಕಾ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿರುವಾಗ ಚರ್ಚ್ ಆವರಣದಲ್ಲಿ ಫಿಲಂ ಶೂಟಿಂಗ್ ನಡೆದಿದೆ.ಸರಕಾರದ ನಿಯಮಗಳನ್ನು ಉಲ್ಲಂಸಿದ್ದಾರೆ.ಅವರಿಗೆ ಶೂಟಿಂಗ್ ಮಾಡಲು ಅನುಮತಿ ಕೊಟ್ಟವರು ಯಾರು? ಎಂದು ಪ್ರಶ್ನಿಸಿದ ಮೌರೀಸ್ ಮಸ್ಕರೇನ್ಹಸ್ ಅವರು, ಫಾದರ್‌ರವರ ತಪ್ಪಿನಿಂದಲೇ ಈ ಪ್ರಮಾದ ನಡೆದಿದೆ. ಇದರಲ್ಲಿ ನಮ್ಮ ಕೈವಾಡ ಇಲ್ಲ ಎಂದು ತಿಳಿಸಿದರು.
ಚರ್ಚ್‌ನಲ್ಲಿ ಎಲ್ಲಾ ಕಾರ್ಯಕ್ರಮಗಳೂ ನಡೆಯುತ್ತಿದೆ.ಶಿಸ್ತು ಪಾಲಿಸಬೇಕು ಎಂದು ಹೇಳುವವರು ಚರ್ಚ್‌ನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಮದ್ಯ ಸರಬರಾಜು ಮಾಡುವುದು ಯಾಕೆ? ಚರ್ಚ್ ವಠಾರದಲ್ಲಿ ಶಾಲೆಗಳು ಇರುವ ಕಾರಣ ಅಲ್ಲಿನ ಕಾರ್ಯಕ್ರಮಗಳಿಗೆ ಮದ್ಯ ಸರಬರಾಜು ಯಾಕೆ?ಎಂದು ಪ್ರಶ್ನಿಸಿದ ಅವರು,ಇನ್ನು ಮುಂದೆ ಕಾರ್ಯಕ್ರಮಗಳಿಗೆ ಮದ್ಯ ಸರಬರಾಜು ಮಾಡಿದರೆ ಕ್ರಿಶ್ಚಿಯನ್ ಯೂನಿಯನ್‌ನಿಂದ ದ.ಕ.ಜಿಲ್ಲಾಧಿಕಾರಿ ಹಾಗೂ ಯೂನಿಯನ್ ಜಿಲ್ಲಾ ಸಮಿತಿಗೆ ದೂರು ನೀಡಲಾಗುವುದು ಎಂದರು.
ನನಗೆ ಹುದ್ದೆ ನೀಡದಂತೆ ಶಾಸಕರಿಗೆ ಫೋನ್ ಮಾಡಿದ್ದಾರೆ:
ಶಾಸಕ ಅಶೋಕ್ ರೈರವರ ಗೆಲುವಿಗೆ ನಾನೂ ಪುತ್ತೂರಿನಲ್ಲಿ ಕೆಲಸ ಮಾಡಿದ್ದೇನೆ.ಆದರೆ, ನನಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಹುದ್ದೆ ನೀಡಬಾರದು ಎಂದು ಶಾಸಕರಿಗೆ ಫಾದರ್ ಅವರು ಫೋನ್ ಮಾಡಿ ತಿಳಿಸಿದ್ದಾರೆ ಇದು ಸರಿಯಾ? ಎಂದು ಮೌರೀಸ್ ಪ್ರಶ್ನಿಸಿದರು.
ಚರ್ಚ್ ಪಾಲನಾ ಸಮಿತಿಯಿಂದ ನನ್ನ ಬಗ್ಗೆ ಪುತ್ತೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.ನನ್ನ ಮೇಲೆ ದ್ವೇಷ ಸಾಧಿಸಲಾಗುತ್ತಿದೆ.ಯಾವುದೇ ಆರೋಪಗಳಿಗೆ ಚರ್ಚ್ ವತಿಯಿಂದ ಪ್ರಕಟಣೆ ಹೊರಡಿಸಬೇಕು ಅದಲ್ಲದೆ ವೈಯಕ್ತಿಕವಾಗಿ ನಮ್ಮ ಮೇಲೆ ಆಕ್ರಮಣ ಮಾಡಬಾರದು ಎಂದು ಅವರು ಹೇಳಿದರು.ಕ್ರಿಶ್ಚಿಯನ್ ಯೂನಿಯನ್ ಉಪಾಧ್ಯಕ್ಷ ಜಾನ್ ಕೆನ್ಯೂಟ್ ಮಸ್ಕರೇನಸ್, ಗೌರವ ಸಲಹೆಗಾರ ವಿನ್ಸೆಂಟ್ ತಾವ್ರೋ, ಕಾರ್ಯಕಾರಿ ಸಮಿತಿ ಸದಸ್ಯರಾದ ರೋಶನ್, ಅರುಣ್ ಪಿಂಟೋ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮಾಯ್ ದೆ ದೇವುಸ್ ಚರ್ಚ್‌ಪಾಲನಾ ಪರಿಷತ್‌ನಿಂದ ಸ್ಪಷ್ಟೀಕರಣ
ಮೌರಿಸ್ ಮಸ್ಕರೇನಸ್ ಹಾಗೂ ಇತರರು ಮಾಯ್ ದೆ ದೇವುಸ್ ಚರ್ಚ್ ಧರ್ಮಗುರುಗಳ ಮೇಲೆ ಮಾಡಿದ ಎಲ್ಲಾ ಆರೋಪಗಳು ಸುಳ್ಳಿನಿಂದ ಕೂಡಿದ್ದಾಗಿದೆ ಎಂದು ಮಾಯ್‌ದೆ ದೇವುಸ್ ಚರ್ಚ್ ಪಾಲನಾ ಪರಿಷತ್ ಸ್ಪಷ್ಟೀಕರಣ ನೀಡಿದೆ. ಮೌರಿಸ್ ಮಸ್ಕರೇನಸ್ 25-30 ವರ್ಷಗಳಿಂದ ಚರ್ಚ್ ಹಾಗೂ ಧರ್ಮಗುರುಗಳ ಮೇಲೆ ಆರೋಪ ಮಾಡಿ ಶಾಂತಿ ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ವಿರುದ್ಧದ ಆರೋಪ ಸಾಬೀತುಗೊಂಡಿರುವುದರಿಂದ ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯಿಂದ ವಜಾ ಮಾಡಲಾಗಿದೆ. ಇದರಿಂದ ಕುಪಿತಗೊಂಡು ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ ಎಂದಿದ್ದಾರೆ.
ಮಾ.26ರಂದು ಚಿತ್ರ ತಂಡದವರ ಕಣ್ತಪ್ಪಿನಿಂದಾಗಿ ಚಿತ್ರೀಕರಣಕ್ಕೆ ತಯಾರು ಮಾಡಿದ್ದು ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಪರೀಕ್ಷೆಗಳು ಸುಸೂತ್ರವಾಗಿ ನಡೆದಿದೆ. ಮೌರಿಸ್ ಮಸ್ಕರೇನಸ್ ಹಾಗೂ ಅವರ ಜೊತೆಗಿದ್ದವರು ಮಾಯ್ ದೆ ದೆವುಸ್ ಚರ್ಚ್ ವಠಾರದಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡಿ, ಸಮಾಜ ವಿರೋಧಿ ಹಾಗೂ ಧರ್ಮ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಚರ್ಚ್ ವಠಾರದ ಮುಖ್ಯ ಗೇಟ್ ಸಂಜೆ 7 ಗಂಟೆಗೆ ಮುಚ್ಚಬೇಕು. ಗೇಟ್ ಮುಚ್ಚುವ 10 ನಿಮಿಷದ ಮುಂಚಿತವಾಗಿ ಸೆಕ್ಯೂರಿಟಿಯವರು ವಠಾರದಲ್ಲಿ ಇರುವ ವಾಹನ ಮಾಲೀಕರಿಗೆ ವಾಹನವನ್ನು ತೆರವು ಮಾಡಲು ತಿಳಿಸಿ ಆ ನಂತರ 7 ಗಂಟೆಗೆ ಬೀಗ ಹಾಕುವುದು ಎಂದು ನಿರ್ಣಯಿಸಲಾಗಿದೆ. ಅದರಂತೆ ಎ.13ರಂದು ಸಂಜೆ 6.50ಕ್ಕೆ ಚರ್ಚ್ ವಠಾರದ ಸೆಕ್ಯೂರಿಟಿ ಗಾರ್ಡ್ ತಮ್ಮ ವಾಹನ ತೆಗೆಯಲು ಹೇಳಿದ್ದು, ಪ್ರತಿಯಾಗಿ ನಾವು ತೆಗೆಯುವುದಿಲ್ಲ ಏನ್ ಮಾಡುತ್ತೀರಿ ? ಬರಲಿ ಪಾದ್ರಿ ನಾವೂ ನೋಡಿಕೊಳ್ಳುತ್ತೇವೆ ಎಂದು ದುರಹಂಕಾರದ ಮಾತುಗಳನ್ನಾಡಿರುತ್ತಾರೆ. ತಪ್ಪೊಪ್ಪಿ ಗೇಟ್ ಕೀ ತೆರವು ಗೊಳಿಸಲು ಮನವಿ ಮಾಡಿದ್ದಲ್ಲಿ ಗೇಟ್ ತೆರವು ಗೊಳಿಸಲು ಬಿಷಪ್‌ರವರು ನಿರ್ದೇಶಿಸಿದ್ದರು. ಸಂಚಾರಿ ಪೊಲೀಸ್‌ರವರಲ್ಲಿಯೂ ಇದನ್ನೇ ಹೇಳಲಾಯಿತು. ಆದರೆ ಅದಕ್ಕೆ ಒಪ್ಪದ್ದಿದ್ದರಿಂದ ರಾತ್ರಿ 10 ಗಂಟೆಗೆ ವಾಹನಗಳನ್ನು ವಠಾದಲ್ಲೇ ಬಿಟ್ಟು, ನಿರ್ಗಮಿಸಿರುತ್ತಾರೆ. ಚರ್ಚ್ ಧರ್ಮಗುರುಗಳ ನಿವಾಸದಲ್ಲಿ ಮದ್ಯಪಾನದ ಸರಬರಾಜು ವಿಷಯ ಸಂಪೂರ್ಣ ಸುಳ್ಳಿನಿಂದ ಕೂಡಿರುವುದ್ದಕ್ಕೆ ಹಾಜರಿದ್ದ ಮಹಿಳೆಯರೇ ಸಾಕ್ಷಿ ಎಂದು ಚರ್ಚ್ ಪಾಲನಾ ಪರಿಷತ್ ಸ್ಪಷ್ಟ ಪಡಿಸಿದೆ.