ಪುತ್ತೂರು: ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ, ದ.ಕ ಜಿಲ್ಲಾ ಮಟ್ಟದಲ್ಲಿ ಕಾರ್ಯಾಚರಿಸುತ್ತಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 15ನೇ ಶಾಖೆಯು ಎ.26 ರಂದು ಬೆಳಿಗ್ಗೆ 10.30ಕ್ಕೆ ಕಲ್ಲಡ್ಕದ ಪ್ರೀತಿ ಟವರ್ಸ್ನ ಪ್ರಥಮ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈಯವರು ತಿಳಿಸಿದ್ದಾರೆ.
ಅವರು ಎ.17 ರಂದು ಬಿಸಿರೋಡ್ನಲ್ಲಿ ಪ್ರತಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ 23 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಂಘವು ಈಗಾಗಲೇ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ, ಪಂಜ, ಬೊಳುವಾರು, ಮಡ್ಯಂತಾರು ಹಾಗೂ ಬಿಸಿರೋಡ್ಗಳಲ್ಲಿ ಶಾಖೆಗಳನ್ನು ಹೊಂದಿ, ಪ್ರಸ್ತುತ ಕಲ್ಲಡ್ಕದಲ್ಲಿ ೧೫ ನೇ ಶಾಖೆ ಆರಂಭಗೊಳ್ಳುತ್ತಿದೆ. ಮುಂದೆ ಮಂಗಳೂರಿನ ಪಡೀಲಿನಲ್ಲಿ ಶಾಖೆಯನ್ನು ತೆರೆಯಲಿದ್ದೇವೆ ಎಂದು ಸೀತಾರಾಮ ರೈ ತಿಳಿಸಿದರು.
ಕಲ್ಲಡ್ಕ ಶಾಖೆಯನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾೖಕ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಮಾಜಿ ಸಚಿವ ಬಿ.ರಮಾನಾಥ ರೈ, ಕಂಪ್ಯೂಟರ್ ವ್ಯವಸ್ಥೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಉದ್ಘಾಟಿಸಲಿದ್ದಾರೆ. ಉದ್ಯಮಿ ಹಾಜಿ ಸುಲೈಮಾನ್ ಅವರು ಪ್ರಥಮ ಠೇವಣಿ ಪತ್ರ ಬಿಡುಗಡೆಗೊಳಿಸಲಿದ್ದು, ಕೃಷಿಕ ಬಿ.ಮಹಾಬಲ ರೈ ಬೋಳಂತೂರು ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸಂಘವು ಆರಂಭದಿಂದಲ್ಲೂ ತನ್ನ ಸಂಘದ ಶಾಖಾ ವ್ಯಾಪ್ತಿಯಲ್ಲಿ ಬರುತ್ತಿರುವ ಸರಕಾರಿ ಶಾಲೆಯಲ್ಲಿ 7 ರಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ ಬಡ ಕುಟುಂಬದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ವಿದ್ಯಾನಿಧಿ ಸಹಾಯಧನವನ್ನು ನೀಡುತ್ತಿದ್ದು, ಈವರೆಗೆ ಒಟ್ಟು 1,295 ಮಕ್ಕಳಿಗೆ 26,29,000ರೂಗಳಷ್ಟು ಮೊತ್ತ ನೀಡಲಾಗಿದೆ ಎಂದು ಸೀತಾರಾಮ ರೈ ತಿಳಿಸಿದರು. ಸಂಘದ ನಿರ್ದೇಶಕರಾದ ಅಶ್ವಿನ್ ಎಲ್ ಶೆಟ್ಟಿ ಸವಣೂರು, ಬಿ.ಮಹಾಬಲ ರೈ ಬೋಳಂತೂರು, ಸಂಘದ ಮಹಾಪ್ರಬಂಧಕ ವಸಂತ್ ಜಾಲಾಡಿ, ಎಜಿಎಂ ಸುನಾದರಾಜ್ ಶೆಟ್ಟಿ, ಕಲ್ಲಡ್ಕ ಶಾಖಾ ವ್ಯವಸ್ಥಾಪಕ ಭರತ್ರಾಜ್ ಕೆ. ಉಪಸ್ಥಿತರಿದ್ದರು.
828.79 ಕೋ.ರೂ, ವ್ಯವಹಾರ, 2.01 ಕೋ.ರೂ, ಲಾಭ
ಸಂಘವು 2024-25ನೇ ಸಾಲಿನಲ್ಲಿ 828.79 ಕೋ.ರೂ, ವ್ಯವಹಾರವನ್ನು ನಡೆಸಿ,2.01 ಕೋ.ರೂ, ಲಾಭ ಗಳಿಸಿರುತ್ತದೆ. ಪ್ರಸ್ತುತ 8,917 ಸದಸ್ಯರನ್ನು ಹೊಂದಿ. 3.39 ಕೋ.ರೂ, ಪಾಲು ಬಂಡವಾಳ, 150 ಕೋ.ರೂ,ಠೇವಣಾತಿ ಸಂಗ್ರಹಿಸಿ, 133 ಕೋ, ರೂ.ಗಳಷ್ಟು ವಿವಿಧ ರೀತಿಯ ಸಾಲಗಳನ್ನು ವಿತರಿಸಲಾಗಿದೆ. ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘವೆಂದು ಪ್ರಶಸ್ತಿ ಹಾಗೂ ೫ ಬಾರಿ ಸಾಧನಾ ಪ್ರಶಸ್ತಿ ಪಡೆದುಕೊಂಡು ಸಹಕಾರಿ ಕ್ಷೇತ್ರದಲ್ಲಿ ತನ್ನ ಗರಿಮೆಯನ್ನು ಹೆಚ್ಚಿಸಿಕೊಂಡಿದೆ ಎಂದು ಸೀತಾರಾಮ ರೈ ತಿಳಿಸಿದರು.
ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡ

ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡ, ಶಾಖೆ ಮತ್ತು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಉದ್ದೇಶದಿಂದ ಸವಣೂರಿನಲ್ಲಿ 0.75ಸೆಂಟ್ಸ್ ಪರಿವರ್ತಿತ ಭೂಮಿಯನ್ನು ಖರೀದಿಸಿ, ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲಾಗಿದ್ದು, 25ನೇ ವರ್ಷಕ್ಕೆ ಮೊದಲು ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಗುವುದು
–ಸಹಕಾರರತ್ನ ಸವಣೂರು ಕೆ.ಸೀತಾರಾಮ ರೈ, ಅಧ್ಯಕ್ಷರು- ಆದರ್ಶ ವಿವಿಧೋದ್ದೇಶ ಸಹಕಾರ ಸಂಘ