- *ಪುತ್ತೂರು ತಾಲೂಕಿನಿಂದ ಎಸ್.ಬಿ.ಜಯರಾಮ ರೈ, ಜಗನ್ನಾಥ್ ಶೆಟ್ಟಿ, ಕೆ.ಚಂದ್ರಶೇಖರ ರಾವ್
*ಸುಳ್ಯ ತಾಲೂಕಿನಿಂದ ಭರತ್ ಎನ್., ಕಡಬ ತಾಲೂಕಿನಿಂದ ರಾಮಕೃಷ್ಣ ಡಿ
*ಬೆಳ್ತಂಗಡಿ ತಾಲೂಕಿನಿಂದ ಹೆಚ್.ಪ್ರಭಾಕರ ಹಾಗೂ ಪಿ.ರಮೇಶ್ ಪೂಜಾರಿ
*ಮಹಿಳಾ ಮೀಸಲು ಸ್ಥಾನದಿಂದ ಕಡಬ ತಾಲೂಕಿನ ಉಷಾ ಅಂಚನ್
ಪುತ್ತೂರು: ದ.ಕ. ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಚುನಾವಣಾ ವೇದಿಕೆ ಸಿದ್ದಗೊಂಡಿದ್ದು ಅಂತಿಮ ಕಣದಲ್ಲಿರುವ 41 ಮಂದಿ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಸಂಬಂಧಿಸಿ ಒಟ್ಟು 16 ಸ್ಥಾನಗಳಿಗೆ ಎ.26ರಂದು ಚುನಾವಣೆ ಘೋಷಣೆಯಾಗಿದೆ. 16 ಸ್ಥಾನಗಳಲ್ಲಿ ಎರಡೂ ಜಿಲ್ಲೆಗಳಿಗೆ ತಲಾ 8 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ತಲಾ 1 ಸ್ಥಾನವನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ದ.ಕ.ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯಿಂದ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆ ನಡೆದು ಒಟ್ಟು 60 ನಾಮಪತ್ರಗಳನ್ನು ಸಿಂಧುವೆಂದು ಪರಿಗಣಿಸಲಾಗಿತ್ತು. ಎ.20ರಂದು 19 ನಾಮಪತ್ರಗಳು ಹಿಂತೆಗೆತಗೊಂಡಿದ್ದು 41 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಪುತ್ತೂರು ಉಪವಿಭಾಗ ದಿಂದ 4 ನಿರ್ದೇಶಕರ ಆಯ್ಕೆ: ಪುತ್ತೂರು, ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕು ಒಳಗೊಂಡ ಪುತ್ತೂರು ಉಪವಿಭಾಗದಿಂದ 4 ನಿರ್ದೇಶಕರ ಆಯ್ಕೆಯಾಗಬೇಕಿದೆ. 4 ನಿರ್ದೇಶಕರ ಸ್ಥಾನಗಳಿಗೆ 7 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಪುತ್ತೂರು ತಾಲೂಕಿನ ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಎಸ್.ಬಿ.ಜಯರಾಮ ರೈ, ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಜಗನ್ನಾಥ್ ಶೆಟ್ಟಿ, ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಕೆ.ಚಂದ್ರಶೇಖರ ರಾವ್, ಸುಳ್ಯ ತಾಲೂಕಿನ ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರ ಸಂಘದ ಭರತ್ ಎನ್., ಕಡಬ ತಾಲೂಕಿನ ಕೆಂಜಾಳ ಹಾಲು ಉತ್ಪಾದಕರ ಸಹಕಾರ ಸಂಘದ ರಾಮಕೃಷ್ಣ ಡಿ., ಬೆಳ್ತಂಗಡಿ ತಾಲೂಕಿನ ಅರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಹೆಚ್.ಪ್ರಭಾಕರ ಹಾಗೂ ಗುಂಡೂರಿ ಹಾಲು ಉತ್ಪಾದಕರ ಸಹಕಾರ ಸಂಘದ ಪಿ.ರಮೇಶ್ ಪೂಜಾರಿ ಅಂತಿಮ ಕಣದಲ್ಲಿದ್ದಾರೆ.
ಮಂಗಳೂರು ಉಪವಿಭಾಗದಿಂದ 3 ನಿರ್ದೇಶಕರ ಆಯ್ಕೆ: ಮಂಗಳೂರು ಉಪವಿಭಾಗ ವ್ಯಾಪ್ತಿಗೆ ಬರುವ ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನಿಂದ 3 ನಿರ್ದೇಶಕರ ಆಯ್ಕೆಯಾಗಬೇಕಾಗಿದ್ದು 6 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಮಂಗಳೂರು ತಾಲೂಕಿನ ಕಡಂದಲೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ದ.ಕ.ಹಾಲು ಉತ್ಪಾದಕರ ಒಕ್ಕೂಟದ ಹಾಲಿ ಅಧ್ಯಕ್ಷ ಸುಚರಿತ ಶೆಟ್ಟಿ, ಎಕ್ಕಾರು ಹಾಲು ಉತ್ಪಾದಕರ ಸಹಕಾರ ಸಂಘದಿಂದ ಸುದೀಪ್ ಆರ್.ಅಮೀನ್, ಪೆರ್ಮಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಿಂದ ಸುಭದ್ರಾ ಎನ್.ರಾವ್, ಬಂಟ್ವಾಳ ತಾಲೂಕಿನ ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಂದರಾಮ್ ರೈ, ಬೋಳಂತೂರು ಹಾಲು ಉತ್ಪಾದಕರ ಸಹಕಾರ ಸಂಘದ ಬಿ.ಸುಧಾಕರ ರೈ ಹಾಗೂ ಆಚಾರಿಪಲ್ಕೆ ಹಾಲು ಉತ್ಪಾದಕರ ಸಹಕಾರ ಸಂಘದ ಸುದರ್ಶನ್ ಜೈನ್ ಅಂತಿಮ ಕಣದ ಅಭ್ಯರ್ಥಿಗಳಾಗಿದ್ದಾರೆ.
ಮಹಿಳಾ ಮೀಸಲು ಸ್ಥಾನದಿಂದ ಎರಡು ಜಿಲ್ಲೆಯಿಂದ 2 ನಿರ್ದೇಶಕರ ಆಯ್ಕೆ: ಮಹಿಳಾ ಮೀಸಲು ಸ್ಥಾನದಿಂದ ದ.ಕ. ಮತ್ತು ಉಡುಪಿ ಜಿಲ್ಲೆಯಿಂದ ತಲಾ ಒಂದು ನಿರ್ದೇಶಕರ ಆಯ್ಕೆಯಾಗಲಿದೆ. ಎರಡು ಜಿಲ್ಲೆಯಿಂದ ಒಟ್ಟು 7 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ದ.ಕ.ಜಿಲ್ಲೆಯಿಂದ ಸುಳ್ಯ ತಾಲೂಕಿನ ಬಾಳುಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಶರ್ಮಿಳಾ ಕೆ., ಕಡಬ ತಾಲೂಕಿನ ಕೊಣಾಲು-ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉಷಾ ಅಂಚನ್, ಮಂಗಳೂರು ತಾಲೂಕಿನ ನೀರುಮಾರ್ಗ ಹಾಲು ಉತ್ಪಾದಕರ ಸಹಕಾರ ಸಂಘದ ಅನುರಾ ವಾಯೋಲಾ ಡಿಸೋಜಾ, ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸವಿತಾ ಎನ್.ಶೆಟ್ಟಿ ಹಾಗೂ ಉಡುಪಿ ಜಿಲ್ಲೆಯಿಂದ 3 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ಉಪವಿಭಾಗದಿಂದ 7 ನಿರ್ದೇಶಕರ ಆಯ್ಕೆಯಾಗಲಿದ್ದು ಒಟ್ಟು 21 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಎ.26ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದ್ದು ಅದೇ ದಿನ ಮತಗಳ ಎಣಿಕೆ ಕಾರ್ಯ ನಡೆದು ಚುನಾವಣಾಧಿಕಾರಿಯವರು ಚುನಾವಣಾ ಫಲಿತಾಂಶ ಘೋಷಣೆ ಮಾಡಲಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಮಂಗಳೂರು ನಗರ ಕುಲಶೇಖರದಲ್ಲಿರುವ ಒಕ್ಕೂಟದ ಕೇಂದ್ರ ಕಚೇರಿಯ ಆವರಣದಲ್ಲಿ ನಡೆಯಲಿದೆ. ಚುನಾವಣಾಧಿಕಾರಿಗಳಾಗಿ ಗೋಪಾಲ್ ಮತ್ತು ಭೂಸ್ವಾಧೀನಾಧಿಕಾರಿ ರಾಜು ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.