ಬೇಸಿಗೆ ಕಾಲ ಬಂದಾಯ್ತು, ವರ್ಷದಿಂದ ವರ್ಷಕ್ಕೆ ಬಿಸಿಲು ಕೂಡ ಹೆಚ್ಚಾಗುತ್ತಿದೆ. ಹಾಗೆ ಕೆಲವೊಂದು ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತಿವೆ. ನಿರ್ಜಲೀಕರಣ, ಕಿಡ್ನಿಯಲ್ಲಿ ಕಲ್ಲು, ಚರ್ಮದ ಸಮಸ್ಯೆ ಇತ್ಯಾದಿಗಳು. ಅವುಗಳಲ್ಲಿ ಮೂತ್ರಕೋಶದ ಸೋಂಕು ಕೂಡ ಒಂದು. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಮಹಿಳೆಯರು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಈ ಸಮಸ್ಯೆಗೆ ಒಳಗಾಗಿರುತ್ತಾರೆ.
ಯುರೇನರಿ ಟ್ರ್ಯಾಕ್ಟ್ ಇನ್ಫೆಕ್ಷನ್ (ಮೂತ್ರಕೋಶದ ಸೋಂಕು) ಎಂದರೇನು?:
ಮೂತ್ರ ಜನನಾಂಗವೂ ಕಿಡ್ನಿ, ಮೂತ್ರನಾಳ, ಮೂತ್ರಪಿಂಡಗಳನ್ನು ಒಳಗೊಂಡಿದೆ. ಮೂತ್ರ, ಕಿಡ್ನಿಯಿಂದ ಫಿಲ್ಟರ್ ಆಗಿ ಬರುವಾಗ ಯಾವುದೇ ಬ್ಯಾಕ್ಟೀರಿಯಾವನ್ನು ಹೊಂದಿರುವುದಿಲ್ಲ. ಅನೇಕ ಕಾರಣಗಳಿಂದಾಗಿ ಬ್ಯಾಕ್ಟೀರಿಯಗಳು ಮೂತ್ರಕೋಶದಲ್ಲಿ ಸೇರಿಕೊಳ್ಳುತ್ತದೆ. ಈ-ಕೊಲೈ ಎಂಬ ಬ್ಯಾಕ್ಟೀರಿಯಾ ಅತಿ ಹೆಚ್ಚಾಗಿ ಕಂಡು ಬರುವಂತದ್ದು. ಜೊತೆಗೆ, ಕ್ಲಬ್ ಶಲ್ಲ, ಸ್ಟಫಲೋಕಾಕಸ್, ಸ್ಟ್ರಪ್ಟಕಾಕಸ್, ಎಂಟಿರೋಕಾಕಸ್ ಕುಟುಂಬಕ್ಕೆ ಸೇರಿದ ರೋಗಾಣುಗಳು ಈ ಸೋಂಕಿಗೆ ಕಾರಣವಾಗುತ್ತದೆ.
ಮೂತ್ರ ಸೋಂಕು ಬರಲು ಕಾರಣಗಳೇನು?
ವೈಯಕ್ತಿಕ ನೈರ್ಮಲ್ಯದ ಕೊರತೆ: ಶೌಚಾಲಯವನ್ನು ಉಪಯೋಗಿಸಿದ ಮೇಲೆ ಚೆನ್ನಾಗಿ ಸ್ವಚ್ಛಗೊಳಿಸದಿರುವುದು.
ಸ್ವಚ್ಛಗೊಳಿಸದ ಸಾರ್ವಜನಿಕ ಶೌಚಾಲಯವನ್ನು ಬಳಸುವುದು.
ಮಧುಮೇಹ: ಸಕ್ಕರೆ ಅಂಶ ಕೀಟಾಣುಗಳು ಬೆಳೆಯಲು ಅವಕಾಶವನ್ನು ಮಾಡಿಕೊಡುತ್ತದೆ. ಹಾಗಾಗಿ, ಡಯಾಬಿಟಿಸ್ ರೋಗಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಮಹಿಳೆಯರು ಹೆಚ್ಚಾಗಿ ಈ ಸೋಂಕಿಗೆ ತುತ್ತಾಗುತ್ತಾರೆ. ಕೆಲವೊಮ್ಮೆ ಮುಟ್ಟಿನ ಸಮಯದಲ್ಲಿ, ಮುಟ್ಟು ನಿಂತ ಮೇಲಿನ ಮಹಿಳೆಯರಲ್ಲಿ, ಗರ್ಭಿಣಿ ಹೆಂಗಸರಲ್ಲಿ ಮೂತ್ರದ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಕಿಡ್ನಿಯಲ್ಲಿ ಕಲ್ಲು ಇರುವುದು ಅಥವಾ ಪುರುಷರಲ್ಲಿ ಪ್ರೋಸ್ಟೇಟ್ ಗ್ರಂಥಿಯ ಊತ ಇರುವವರಲ್ಲಿ ಹೆಚ್ಚಾಗಿ ಈ ಸಮಸ್ಯೆಯನ್ನು ಕಾಣಬಹುದು.
ಲಕ್ಷಣಗಳು:
*ಮೂತ್ರ ವಿಸರ್ಜನೆ ಸಮಯದಲ್ಲಿ ನೋವು, ಉರಿ ಉಂಟಾಗುವುದು
*ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು.
*ಚಳಿ ನಡುಗಿ ಜ್ವರ ಬರುವುದು. ಸುಸ್ತು ಇರುವುದು
*ಕೆಳಹೊಟ್ಟೆ ನೋವು, ಮೈಕೈ ನೋವು ಕಾಣಿಸುವುದು
*ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುವು
ಮೂತ್ರ ಜನನಾಂಗದ ಸೋಂಕಿಗೆ ಪರಿಹಾರ:
ಮೂತ್ರ ಸೋಂಕಿನ ಲಕ್ಷಣಗಳನ್ನು ನೋಡಿ ವೈದ್ಯರು ಮೂತ್ರ ಪರೀಕ್ಷೆಗಳನ್ನು ಮಾಡಲು ಸಲಹೆ ನೀಡುತ್ತಾರೆ. ಅದರಲ್ಲಿ ಪಸ್ಸ್ ಸೆಲ್ಸ್, ಮೊಟೈಲ್ ಬ್ಯಾಕ್ಟೀರಿಯಾ ಇದ್ದರೆ ಸೂಕ್ತವಾದ ಆಂಟಿಬಯೋಟಿಕ್ ಕೊಡುತ್ತಾರೆ. ಜೊತೆಗೆ ಕೆಲವೊಂದು ನಿಯಂತ್ರಿತ ಕ್ರಮಗಳನ್ನು ಪಾಲಿಸಲು ಹೇಳುತ್ತಾರೆ.
ಅತಿ ಹೆಚ್ಚು ನೀರಿನ ಸೇವನೆ ಅಗತ್ಯ: ದಿನಕ್ಕೆ ಕನಿಷ್ಠ ಮೂರು ಲೀಟರ್ ನೀರನ್ನು ಕುಡಿಯಿರಿ ಎಂದು ಸಲಹೆ ನೀಡುತ್ತಾರೆ ಅಥವಾ ಎಳ ನೀರು, ಕೊತ್ತಂಬರಿ ಕಷಾಯವನ್ನು ಕುಡಿಯುವುದು ಒಳ್ಳೆಯದು ಅನ್ನುತ್ತಾರೆ.
ಬಾರ್ಲಿ ಗಂಜಿ, ತೆಳಿ ಗಂಜಿ, ರವ ಗಂಜೀ, ರಾಗಿ ಅಂಬಲಿಯನ್ನು ಸೇವಿಸುವುದು ಒಳ್ಳೆಯದು.
ಪ್ರೊಬ್ಯಾಟಿಕ್ ಸೇವನೆ: ಮಜ್ಜಿಗೆ ಅಥವಾ ಮೊಸರನ್ನು ನೀರು ಮಾಡಿ ಕುಡಿಯುವುದು ಒಳ್ಳೆಯದು. ಇದು ದೇಹಕ್ಕೆ ಒಳ್ಳೆಯ ಬ್ಯಾಕ್ಟೀರಿಯವನ್ನು ನೀಡುತ್ತದೆ.
ಕಲ್ಲಂಗಡಿ, ಕರ್ಬುಜ, ಮೂಸಂಬಿ, ಕಿತ್ತಳೆಗಳಂತಹ ಹಣ್ಣಿನ ಜ್ಯೂಸ್ಗಳು ದೇಹದಕ್ಕೆ ಒಳ್ಳೆಯದು.
ಕಿವಿಮಾತು:
ತನ್ನ ದೇಹದ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಯಾರಿಗೆ ಈ ಸೋಂಕಿನ ಅಪಾಯವಿದೆಯೋ ಅದರಲ್ಲೂ ಮುಖ್ಯವಾಗಿ ಮಹಿಳೆಯರಲ್ಲಿ ಮೂತ್ರ ಮಾಡಿದ ನಂತರ ಸೋಪು ಅಥವಾ ಸೊಲ್ಯೂಷನ್ ಬಳಸಿ ಚೆನ್ನಾಗಿ ಸ್ವಚ್ಛಗೊಳಿಸಬೇಕು.
ಮೂತ್ರವನ್ನು ತುಂಬಾ ಸಮಯದವರೆಗೆ ಕಟ್ಟಿಕೊಳ್ಳಬಾರದು. ಮೂತ್ರ ಬಂದಾಗ ಮೂತ್ರ ವಿಸರ್ಜನೆ ಮಾಡಬೇಕು.
ಸಾರ್ವಜನಿಕ ಶೌಚಾಲಯವನ್ನು ಬಳಸುವಾಗ ಜಾಗರೂಕತೆ ವಹಿಸಿ. ಆದಷ್ಟು ಭಾರತೀಯ ಮಾದರಿಯ ಶೌಚಾಲಯವನ್ನು ಉಪಯೋಗಿಸಿ. ಜಂಕ್ ಆಹಾರ ಪದಾರ್ಥಗಳು, ಖಾರ, ಉಪ್ಪು ಇರುವ ಆಹಾರವನ್ನು ಸೇವಿಸಬೇಡಿ.
ಕೆಲವರಿಗೆ ಪದೇ ಪದೇ ಮೂತ್ರದ ಸೋಂಕು ಇರುತ್ತದೆ. ಇಂತವರಿಗೆ ಯೂರಿನ್ ಕಲ್ಚರ್ ಮಾಡಿಸಬೇಕಾಗುತ್ತದೆ ಮತ್ತು ಸೂಕ್ತವಾದ ಆಂಟಿಬಯೋಟಿಕ್ನ್ನು ನಿರ್ದಿಷ್ಟ ಸಮಯದವರೆಗೆ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ. ಮೂತ್ರದ ಸೋಂಕು ಒಂದು ಸಣ್ಣ ಸಮಸ್ಯೆ ಅಂತ ಕಂಡರೂ ಅದು ಸಣ್ಣ ಸಮಸ್ಯೆಯಲ್ಲ. ಇದು ಸಿಸ್ಟಮಿಕ್ ಇನ್ಫೆಕ್ಷನ್, ಕಿಡ್ನಿ ಫೇಲ್ಯೂರ್ ನಂತರ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರ ಮುಂಚಿತವಾಗಿ ವೈದ್ಯರ ಬಳಿ ಹೋಗಿ ಸೂಕ್ತ ಚಿಕಿತ್ಸೆ ಪಡೆಯಿರಿ.

-ಡಾ ಗ್ರೀಷ್ಮಾ ಗೌಡ ಆರ್ನೋಜಿ
BNYS,Msc(Clinical Nutrition & dietetics),FAM(Fellowship in Aesthetic Medicine)ವೈದ್ಯರು, ‘ಸಂಪೂರ್ಣ’ ಪಾಲಿ ಕ್ಲಿನಿಕ್ ಕಡಬ