ಸಮಾಜದ ದಾರಿ ತಪ್ಪಿಸುವವರು ಬೋಧನೆ ಮಾಡಲು ಅರ್ಹರಲ್ಲ- ಕುಂಟಾರು ರವೀಶ ತಂತ್ರಿ
ಅರಿಯಡ್ಕ: ಕನ್ನಯ ತರವಾಡು ನೂತನ ತರವಾಡು ಮನೆಯ ಗೃಹಪ್ರವೇಶೋತ್ಸವ ಎ. 20 ರಂದು ಶ್ರೀ ನಾಗ ಸಾನಿಧ್ಯ, ಪಟ್ಟದ ದೈವಗಳು ಮತ್ತು ಧರ್ಮ ದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬ್ರಹ್ಮ ಶ್ರೀ ವೇದ ಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಅನುಗ್ರಹದೊಂದಿಗೆ, ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮ
ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ಶ್ರೀ ರವೀಶ ತಂತ್ರಿಗಳು ಧಾರ್ಮಿಕ ಉಪನ್ಯಾಸ ನೀಡಿ, ಧಾರ್ಮಿಕ ಕ್ಷೇತ್ರಗಳು ತನ್ನದೇ ಆದ ಮಹತ್ವದಿಂದ ಪ್ರಸಿದ್ಧಿ ಪಡೆಯುತ್ತವೆ ಇಲ್ಲಿ ಸಂಪ್ರದಾಯ ಅನುಷ್ಠಾನ ಆಚರಣೆ ಈಗಲೂ ಕೂಡ ಅತಿ ಪ್ರಮುಖವಾಗಿದ್ದು ಇವುಗಳನ್ನು ನಾವು ಆಚರಣೆಗೆ ತರುವುದು ಮತ್ತು ರೂಢಿಯಲ್ಲಿರಿಸಿಕೊಳ್ಳುವುದು ಅಗತ್ಯ ವಸುದೈವ ಕುಟುಂಬಕಂ ಪದ್ಧತಿ ಇತ್ತೀಚಿಗೆ ಕಾರ್ಯರೂಪಕ್ಕೆ ಬರುತ್ತಿದೆ. ಜಗತ್ತು ಒಂದು ಕುಟುಂಬ ಈ ಪರಿಕಲ್ಪನೆಯು ಇಡೀ ಜಗತ್ತು ಮತ್ತು ಅದರ ಎಲ್ಲಾ ನಿವಾಸಿಗಳು ಪರಸ್ಪರ ಸಂಬಂಧ ಹೊಂದಿದ್ದಾರೆ ಹಾಗೆ ನಮ್ಮ ತರವಾಡು ಮನೆಗಳು ಬೆಳಕಿಗೆ ಬರುತ್ತೀರುವುದು, ಸಂತೋಷದ ವಿಚಾರ. ಹಿಂದೂ ಧರ್ಮಕ್ಕೆ ಆಧಾರ ಇದೆ .ನಾವು ಹೇಗಿರಬೇಕು ಎಂಬುದನ್ನು ಧರ್ಮ ಗ್ರಂಥಗಳು ಸೂಚಿಸುತ್ತವೆ ಹಿಂದೂ ಎನ್ನಲು ಹಿಂಜರಿಕೆ ಬೇಡ. ಸಂತೋಷ ಪಡಬೇಕು. ಸನಾತನ ಧರ್ಮ ಯಾವುದನ್ನು ಟೀಕಿಸಿಲ್ಲ ಎಲ್ಲರನ್ನು ಗೌರವಿಸಿದೆ. ಜೀವನದಲ್ಲಿ ಸುಖಿಗಳಾಗಿ ಜಾಗ್ರತರಾಗಿರೋಣ. ಅಜ್ಞಾನದಿಂದ ಮುಕ್ತರಾಗೋಣ. ಒಂದೆಡೆ ನಾವು ಸೇರಬೇಕು ಎಲ್ಲರನ್ನೂ ಸೇರಿಸಬೇಕು ಆಗ ನಮ್ಮ ಸಂಸ್ಕೃತಿ ಮುಂದುವರಿಯುತ್ತದೆ .ನಾವೆಲ್ಲ ಸಂಸ್ಕಾರವನ್ನು ಅನುಷ್ಠಾನಗೊಳಿಸಲು ಪ್ರಯತ್ನ ಮಾಡಬೇಕು. ಸಮಾಜದ ದಾರಿ ತಪ್ಪಿಸುವವರು ಬೋಧನೆ ಮಾಡಲು ಅರ್ಹರಲ್ಲ. ಕನ್ನಯ ತರವಾಡು ಮನೆ ಅಚ್ಚುಕಟ್ಟಾಗಿ ನಡೆದಿದ್ದು ಇಲ್ಲಿ ಧಾರ್ಮಿಕ ಆಚರಣೆಗಳು ಮುಂದುವರಿದು ,ಮಾದರಿ ತರವಾಡು ಮನೆಯಾಗಲಿ ಎಂದು ಶುಭ ಹಾರೈಸಿದರು.
ಪ್ರತಿ ತರವಾಡು ಮನೆಗಳಿಂದ ಸಂಸ್ಕಾರ ಶಿಕ್ಷಣ ನೀಡಬೇಕು:ಭವ್ಯ ಪಿ .ಆರ್ ನಿಡ್ಪಳ್ಳಿ
ಗೌಡ ಸಂಸ್ಕೃತಿ ಮತ್ತು ತರವಾಡು ಮನೆ ಬಗ್ಗೆ ಉಪನ್ಯಾಸ ನೀಡಿದ ವಿವೇಕಾನಂದ ಕಾಲೇಜು ಪುತ್ತೂರು ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ.ಆರ್ ನಿಡ್ಪಳ್ಳಿ ಮಾತನಾಡಿ, ಗೌಡ ಸಮುದಾಯ ಗಂಗವಂಶದವರಾಗಿದ್ದು ಹೋರಾಟದ ಮನೋವೃತ್ತಿಯನ್ನು ಹೊಂದಿದವರು. ಐಗೂರು ಸೀಮೆಯಿಂದ ವಲಸೆ ಬಂದು ತುಳುನಾಡಿನಲ್ಲಿ ನೆಲೆಸಿ ಕೃಷಿಯನ್ನು ಪ್ರಧಾನವಾಗಿರಿಸಿಕೊಂಡು ಜೀವನ ನಡೆಸಿದವರು ಗೌಡರು. ತರವಾಡು ಮನೆ ಎಂಬುದು ಒಗ್ಗಟ್ಟಿನ ಪ್ರತೀಕ. ಸಮಾಜ ಆಧುನಿಕತೆಯತ್ತ ಸಾಗಿದರೂ ನಮ್ಮ ಮಣ್ಣಿನ ಮೂಲವನ್ನು ಸಮುದಾಯದ ಮೂಲವನ್ನು, ಮರೆಯದೆ ಕುಟುಂಬದ ಆಚರಣೆ ಪದ್ಧತಿಯನ್ನು ತಪ್ಪದೇ ಪಾಲಿಸಬೇಕು. ಪ್ರತೀ ತರವಾಡು ಮನೆಗಳಿಂದ ಸಂಸ್ಕಾರ ಶಿಕ್ಷಣವನ್ನು ನೀಡಬೇಕು ಹಾಗೂ ಯುವ ಪೀಳಿಗೆ ಇದನ್ನು ಶ್ರದ್ಧೆಯಿಂದ ಮುಂದುವರಿಸಬೇಕು .ನಂಬಿಕೆ ಆಚರಣೆಗಳೊಂದಿಗೆ ಪ್ರಕೃತಿಯನ್ನು ಪೂಜಿಸುವವರಾಗಬೇಕು. ಎಲ್ಲಾ ಸಮುದಾಯಗಳು ಅಭಿವೃದ್ಧಿ ಹೊಂದುವುದರ ಮುಖೇನ ಸಮಾಜದ ಏಳಿಗೆಯಾಗಬೇಕಿದೆ. ಹಿರಿಯರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗುವವರಂತಾಗಬೇಕು ಎಂದರು.
ಕನ್ನಯ ತರವಾಡು ಮನೆಯ ಕೋಶಾಧಿಕಾರಿ ಶ್ರೀನಿವಾಸ ಗೌಡ ಕನ್ನಯ ಮತ್ತು ಜಯಶೀಲ ಎಸ್ ಕನ್ನಯ ದಂಪತಿಗಳನ್ನು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಬಡಗನ್ನೂರು ಊರ ಗೌಡರಾದ ಕೃಷ್ಣಪ್ಪ ಗೌಡ ಸಾರೆಪ್ಪಾಡಿ, ಉಪಸ್ಥಿತರಿದ್ದರು.ಕನ್ನಯ ಕುಟುಂಬದ ಯಜಮಾನ ಪದ್ಮಯ್ಯ ಗೌಡ ಕನ್ನಯ ಆರ್ವಾರ, ಸಭಾಧ್ಯಕ್ಷತೆ ವಹಿಸಿದ್ದರು.
ಹರಿ ಸೇವೆ, ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಅಯ್ಯಪ್ಪ ಭಜನಾ ಮಂಡಳಿ ಪೆರಿಗೇರಿ ಇವರಿಂದ ಭಜನಾ ಸಂಕೀರ್ತನೆ ನಡೆದು, ನಂತರ ಪ್ರಸಾದ ವಿತರಣೆ ನಡೆದು, ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ನಾರಾಯಣ ಗೌಡ ಕನ್ನಯ ಆರ್ವಾರ, ಜಯಶೀಲ ಶ್ರೀನಿವಾಸ ಗೌಡ ಕನ್ನಯ, ರಾಧಾಕೃಷ್ಣ ಗೌಡ ಕನ್ನಯ -ಸುಬ್ರಹ್ಮಣ್ಯ, ಲೋಹಿತ್ ಗೌಡ ಕನ್ನಯ ಪೆರಿಯಾಣ,ಯಶ್ವಿತ್ ಗೌಡ ಕನ್ನಯ ಅತಿಥಿಗಳನ್ನು ಶಾಲು ಹಾಕಿ ಗೌರವಿಸಿದರು.
ಯತೀಶ್ ಕನ್ನಯ ಆರ್ವಾರ ಪ್ರಾಸ್ತಾವಿಕವಾಗಿ ಮಾತನಾಡಿ, ಕುಟುಂಬ ಬೆಳೆದು ಬಂದ ಹಾದಿಯನ್ನು ಸವಿವರವಾಗಿ ಸಭೆಯ ಮುಂದಿಟ್ಟು ಸ್ವಾಗತಿಸಿದರು.
ಅದಿತಿ ಮತ್ತು ದೀಕ್ಷಾ ಕನ್ನಯ ಪ್ರಾರ್ಥಿಸಿ, ಪ್ರಸಾದ್ ಗೌಡ ಆಲಂತ್ತಡ್ಕ ವಂದಿಸಿ, ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಬಂಧು ಮಿತ್ರರು ,ಕುಟುಂಬಸ್ಥರು ಉಪಸ್ಥಿತರಿದ್ದರು.
ಕನ್ನಯ ತರವಾಡು ಮನೆಯ ಗೃಹಪ್ರವೇಶ, ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದಿರುವುದು ಕನ್ನಯ ಕುಟುಂಬಕ್ಕೆ ಹೆಮ್ಮೆಯ ವಿಚಾರ.ಅದನ್ನು ನಾವು ಮನೆಯವರೆಲ್ಲರೂ ಸೇರಿ ಒಗ್ಗಟ್ಟಿನಿಂದ ಮಾಡಿರುತ್ತೇವೆ . ಈ ಯಶಸ್ವಿಗೆ ಕುಂಟಾರು ತಂತ್ರಿಗಳ ಆಶೀರ್ವಾದ, ದೈವ ದೇವರುಗಳ, ಗುರು ಹಿರಿಯರ ಸಂಪೂರ್ಣ ಅನುಗ್ರಹ ಸಿಕ್ಕಿರುತ್ತದೆ.
ಶ್ರೀನಿವಾಸ ಗೌಡ ಕನ್ನಯ,ಕೋಶಾಧಿಕಾರಿ ಕನ್ನಯ ತರವಾಡು