ನೆಲ್ಯಾಡಿಯಲ್ಲಿ ಬೈಕ್‌ಗಳ ಡಿಕ್ಕಿ ಪ್ರಕರಣ-ಆರ್‌ಸಿ ಮಾಲಕನಿಗೆ 5 ಸಾವಿರ ರೂ.ದಂಡ

0

ಪುತ್ತೂರು:ಅಪಘಾತ ಪ್ರಕರಣವೊಂದರಲ್ಲಿ ಬೈಕ್‌ನ ಆರ್‌ಸಿ ಮಾಲಕನಿಗೆ ನ್ಯಾಯಾಲಯ ದಂಡ ವಿಧಿಸಿ ಆದೇಶಿಸಿದೆ. 2021ರ ನ.10ರಂದು ರಾತ್ರಿ ನೆಲ್ಯಾಡಿಯಲ್ಲಿ ಅಪಘಾತ ಸಂಭವಿಸಿತ್ತು.ನೆಲ್ಯಾಡಿ ಪದ್ದಡ್ಕದ ಪಿ.ಎಂ.ಇಸುಬು ಎಂಬವರು ತಮ್ಮ ಮಕ್ಕಳನ್ನು ನೆಲ್ಯಾಡಿ ಮಸೀದಿಯಿಂದ ಕರೆದುಕೊಂಡು ಬರಲೆಂದು ಮನೆಯಿಂದ ತಮ್ಮ ಮೋಟಾರ್ ಬೈಕ್(ಕೆ.ಎ.21-ಇಎ:9562)ರಲ್ಲಿ ಬರುತ್ತಾ ನೆಲ್ಯಾಡಿ ಪೇಟೆಯ ಮಸೀದಿ ರಸ್ತೆಗೆ ತಿರುಗುವರೇ ಮಸೀದಿ ರಸ್ತೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಅವರ ಹಿಂಬದಿಯಿಂದ ಉಪ್ಪಿನಂಗಡಿ ಕಡೆಯಿಂದ ಪೆರಿಯಶಾಂತಿ ಕಡೆಗೆ ನವಾಲ್ ಎಂಬಾತ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಬೈಕ್,ಇಸುಬುರವರ ಬೈಕಿನ ಹಿಂಬದಿಗೆ ಡಿಕ್ಕಿಯಾಗಿತ್ತು.

ಪರಿಣಾಮ ಬೈಕ್ ಜಖಂಗೊಂಡಿತ್ತಲ್ಲದೆ, ಸವಾರ ಪಿ.ಎಂ.ಇಸುಬುರವರು ಗಾಯಗೊಂಡಿದ್ದರು.ಅವರು ನೆಲ್ಯಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು.ನೋವು ಉಲ್ಬಣಗೊಂಡಿದ್ದರಿಂದ ಅವರು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಹೋಗಿ,ಅಲ್ಲಿನ ವೈದ್ಯರ ಸೂಚನೆಯಂತೆ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಘಟನೆ ಸಂಬಂಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ವಿಚಾರಣೆ ನಡೆಸಿದ ಪುತ್ತೂರಿನ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಶಿವಣ್ಣ ಎಚ್.ಆರ್.ಅವರು ಪ್ರಕರಣದ ಎರಡನೇ ಆರೋಪಿಯಾಗಿರುವ,ಅಪಘಾತವೆಸಗಿದ ಬೈಕಿನ ಆರ್‌ಸಿ ಮಾಲಕ ಸದಾನಂದ ಎಂಬವರಿಗೆ 5 ಸಾವಿರ ರೂ.ದಂಡ ಅಥವಾ 37 ದಿನಗಳ ಕಾರಾಗೃಹ ವಾಸ ಶಿಕ್ಷೆಯನ್ನು ವಿಧಿಸಿ ಆದೇಶಿಸಿದ್ದಾರೆ.

ಹೆಡ್‌ಕಾನ್‌ಸ್ಟೇಬಲ್ ಸಂಗಯ್ಯ ಕಾಳೆ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಸರ್ಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಶ್ರೀಮತಿ ಕವಿತಾ ಅವರು ವಾದಿಸಿದ್ದರು.

LEAVE A REPLY

Please enter your comment!
Please enter your name here