ಹಾಲಿನ ಉತ್ಪಾದನೆ ಹೆಚ್ಚಳ ಮಾಹಿತಿ ಕಾರ್ಯಾಗಾರ-ಮನೆ ಮನೆ ಭೇಟಿ
ಪುತ್ತೂರು: ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಹಾಲಿನ ಉತ್ಪಾದನೆ ಹೆಚ್ಚಳ ಹಾಗೂ ಲಾಭದಾಯಕ ಹೈನುಗಾರಿಕೆ ಬಗ್ಗೆ ಮಾಹಿತಿ ಕಾರ್ಯಾಗಾರ ಮತ್ತು ಸದಸ್ಯರ ಮನೆ ಮನೆ ಭೇಟಿ ಕಾರ್ಯಕ್ರಮ ನಡೆಯಿತು.

ದ.ಕ.ಹಾಲು ಉತ್ಪಾದಕರ ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ ಹೆಚ್ಚು ಹಾಲು ನೀಡುವ ದನಗಳನ್ನು ಸಾಕಿ ದೊಡ್ಡಮಟ್ಟದಲ್ಲಿ ಹೈನುಗಾರಿಕೆ ಮಾಡಿ. ದನಗಳಿಗೆ ಹಸಿರು ಹುಲ್ಲನ್ನು ಹೆಚ್ಚು ನೀಡಿದರೆ ಹಾಲು ಹೆಚ್ಚು ಸಿಗುತ್ತದೆ. ಆರೋಗ್ಯವೂ ಇರುತ್ತದೆ. ಅಡಿಕೆ ತೋಟ ಅಥವಾ ಖಾಲಿ ಜಾಗದಲ್ಲಿ ಜೋಳ, ಹಸಿರು ಹುಲ್ಲು, ಸಣ್ಣ ಜಾತಿಯ ಗಿಣಿ ಹುಲ್ಲು ಹಾಗೂ ಅಲಸಂಡೆ ನೆಟ್ಟು ಬೆಳೆಸಿ. ಇದರಿಂದ ಹಾಲಿನ ಉತ್ಪಾದನಾ ವೆಚ್ಚ ಕಡಿಮೆಯಾಗಿ ಹೈನುಗಾರಿಕೆ ಲಾಭದಾಯಕ ಮಾಡಬಹುದು ಎಂದರು. ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ ಸಂಘದ ಸದಸ್ಯ ರೈತರಿಗೆ ಒಕ್ಕೂಟದಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಸ್ಲರಿ ಪಂಪ್, ಹುಲ್ಲು ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರ, ಹಟ್ಟಿ ಮ್ಯಾಟ್ ಮುಂತಾದವುಗಳಿಗೆ ಸಿಗುವ ಸಬ್ಸಿಡಿ ಯೋಜನೆಗಳನ್ನು ತಿಳಿಸಿದರು. ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ ಅಧ್ಯಕ್ಷತೆ ವಹಿಸಿ ಮಾತನಾಡಿ ಸದಸ್ಯ ಭಾಂಧವರು ಹಾಲಿನ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಸಂಘಕ್ಕೆ ಹಾಲಿನ ಪೂರೈಕೆ ಹೆಚ್ಚಳವಾದರೆ ಸಂಘವೂ ಲಾಭದಾಯಕವಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಪಡೋಣ ಎಂದರು. ವಿಸ್ತರಣಾಧಿಕಾರಿ ಶ್ರೀದೇವಿ ವಂದಿಸಿದರು. ಸಂಘದ ಕಾರ್ಯದರ್ಶಿ ಸತೀಶ್ ರೈ, ಸಹಾಯಕರಾದ ಉಚಿತ್ ಕುಮಾರ್, ಕುಂಞಿಕೃಷ್ಣ ಮಣಿಯಾಣಿ ಸಹಕರಿಸಿದರು. ಸಂಘದ ನಿರ್ದೇಶಕರು, ಸದಸ್ಯರು ಭಾಗಹಿಸಿದ್ದರು.
ಮಾಹಿತಿ ಕಾರ್ಯಾಗಾರ ಬಳಿಕ ಸಂಘದ ಸದಸ್ಯರ ಮನೆಗಳಿಗೆ ಭೇಟಿ ನೀಡಿ ಹಾಲಿನ ಉತ್ಪಾದನೆ ಹೆಚ್ಚಿಸುವ ಬಗ್ಗೆ ಮಾಹಿತಿ ನೀಡಲಾಯಿತು. ಸುಮಾರು 7-8 ಮನೆಗಳಿಗೆ ಭೇಟಿ ನೀಡಿ ಹಾಲಿನ ಉತ್ಪಾದನೆ ಹೆಚ್ಚಿಸುವ ಬಗ್ಗೆ, ಹೆಚ್ಚು ಹಾಲು ನೀಡುವ ಈರೋಡ್ ದನಗಳ ಖರೀದಿ ಮಾಹಿತಿ, ದನದ ಹಿಂಡಿ, ದನಗಳಿಗೆ ವಿಮಾ ಸೌಲಭ್ಯ, ಹುಲ್ಲು ನಾಟಿ ಮಾಡುವ ಬಗ್ಗೆ ಮಾಹಿತಿ ನೀಡಲಾಯಿತು. ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್, ಒಕ್ಕೂಟದ ವೈದ್ಯಾಧಿಕಾರಿ ಡಾ.ಅನುದೀಪ್, ವಿಸ್ತರಣಾಧಿಕಾರಿಗಳಾದ ಮಾಲತಿ ಹಾಗೂ ಶ್ರೀದೇವಿರವರು ಮಾಹಿತಿ ನೀಡಿದರು.
ಗಿಣಿ ಹುಲ್ಲು, ಅಲಸಂಡೆ ನಾಟಿ ಪ್ರಾತ್ಯಕ್ಷಿಕೆ
ಸಂಘದ ಸದಸ್ಯ ಹೈನುಗಾರರಾದ ದೇರಣ್ಣ ರೈರವರ ಕೃಷಿ ತೋಟಕ್ಕೆ ಭೇಟಿ ನೀಡಿ ಲಾಭದಾಯಕ ಹೈನುಗಾರಿಕೆಗೆ ಉಪಯುಕ್ತವಾದ ಗಿಣಿಹುಲ್ಲು ಹಾಗೂ ಅಲಸಂಡೆ ನಾಟಿ ಮಾಡುವ ಪ್ರಾತ್ಯಕ್ಷಿಕೆ ನಡೆಸಲಾಯಿತು. ವಿಸ್ತರಣಾಧಿಕಾರಿ ಶ್ರೀದೇವಿ ಹಾಗೂ ಮಾಲತಿರವರು ಹುಲ್ಲಿನ ಹಾಗೂ ಅಲಸಂಡೆ ಬೀಜ ನಾಡಿ ಮಾಡಿ ಪ್ರಾತ್ಯಕ್ಷಿಕೆ ನಡೆಸಿದರು.
