2016ರಲ್ಲಿ ನಡೆದ ನಿಡ್ಡೋಡಿಯ ಮಹಿಳೆಯ ಕೊಲೆ ಪ್ರಕರಣ : ಆರೋಪಿ ಖುಲಾಸೆ

0

ಪುತ್ತೂರು: ಮಂಗಳೂರು ನಿಡ್ಡೋಡಿಯ ಯಮುಲ ಮನೆ ಎಂಬಲ್ಲಿಯ ನಿವಾಸಿ ರೇವತಿ ಎಂಬ ಮಹಿಳೆಯನ್ನು ಶುಂಠಿಲಪದವಿನ ಶೇಖರ ಶೆಟ್ಟಿ ಎಂಬಾತ ಪಡ್ಲಗುರಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ ಪ್ರಕರಣದಲ್ಲಿ ಶೇಖರ ಶೆಟ್ಟಿ ಎಂಬಾತನನ್ನು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆ ಗೊಳಿಸಿದೆ.

ಏನಿದು ಘಟನೆ?
12.01.2016 ರಂದು ನಿಡ್ಡೋಡಿಯ ಯಮುಲ ಮನೆ ನಿವಾಸಿ ರೇವತಿ ಎಂಬಾಕೆಯು ನಿಡ್ಡೋಡಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟು ಹೋಗಿ ಪುನಃ ಹಿಂತಿರುಗಿ ಬಂದಿರುವುದಿಲ್ಲ. ಈ ಬಗ್ಗೆ ರೇವತಿ ಅಣ್ಣ ತಿಮ್ಮಪ್ಪ ಮಡಿವಾಳರವರು ಮೂಡಬಿದ್ರೆ ಪೋಲಿಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಅಲ್ಲದೆ ಆ ದೂರಿನಲ್ಲಿ ಸ್ಥಳೀಯ ಶುಂಠಿಲ ಪದವಿನ ನಿವಾಸಿಯಾದ ಶೇಖರ ಶೆಟ್ಟಿಯವರ ಮೇಲೆ ಸಂಶಯವಿರುವುದಾಗಿ ತಿಳಿಸಿದ್ದರು.

ಈ ಪ್ರಕರಣದಲ್ಲಿ ಮೂಡಬಿದ್ರೆ ಪೋಲಿಸರು ಸ್ಥಳೀಯರನ್ನು ಹಾಗೂ ಶುಂಠಿಲ ಪದವಿನ ನಿವಾಸಿಗಳನ್ನು ವಿಚಾರಣೆ ಮಾಡಿದ್ದರೂ, ರೇವತಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ನಂತರ ಶೇಖರ ಶೆಟ್ಟಿಯನ್ನು ಈ ಬಗ್ಗೆ ಕೂಲಂಕುಷವಾಗಿ ವಿಚಾರಿಸಿದಾಗಲೂ ಆತ ಯಾವುದೇ ಮಾಹಿತಿ ನೀಡಿರುವುದಿಲ್ಲ. ಈ ಮಧ್ಯೆ ಶೇಖರ ಶೆಟ್ಟಿಗೆ ಮೂಡಬಿದ್ರೆ ಪೋಲಿಸರು ಹಾಗೂ ರೇವತಿ ಮನೆಯವರು ತೀವ್ರ ಒತ್ತಡ ಹಾಕಿದ್ದರಿಂದ ಅವರು ಮನೆಯನ್ನು ಬಿಟ್ಟು ಹೋಗಿದ್ದು ಈ ಬಗ್ಗೆ ಅವರ ಪತ್ನಿ ದಯಾವತಿ ಶೇಖರ ಶೆಟ್ಟಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದರು. ನಂತರ ಶೇಖರ ಶೆಟ್ಟಿ ಹಿಂತಿರುಗಿ ಬಂದು 18.01.2016ರಂದು ಠಾಣೆಗೆ ಹಾಜರಾಗಿದ್ದರು.

23/01/2016 ರಂದು ರೇವತಿಯ ಅಣ್ಣ ತಿಮ್ಮಪ್ಪ ಮಡಿವಾಳರವರು ಠಾಣೆಗೆ ಬಂದು ರೇವತಿ ಕೊಲೆಯಾದ ಬಗ್ಗೆ ಶೇಖರ ಶೆಟ್ಟಿಯವರ ವಿರುದ್ಧ ದೂರು ನೀಡಿದ್ದು, ಆ ದೂರನ್ನು ಸ್ವೀಕರಿಸಿದ ಮೂಡಬಿದ್ರೆ ಪೋಲಿಸರು ಶೇಖರ ಶೆಟ್ಟಿಯನ್ನು ಬಂಧಿಸಿ ವಿಚಾರಿಸಿದಾಗ ಆತನು ತಪ್ಪನ್ನು ಒಪ್ಪಿಕೊಂಡು ರೇವತಿಯು ಬೀಡಿ ಬ್ರಾಂಚಿಗೆಂದು ಶುಂಠಿಲ ಪದವಿಗೆ ಬರುತ್ತಿರುವಾಗ ತನಗೆ ಪರಿಚಯವಾಗಿದ್ದು ನಂತರ ತುಂಬಾ ಅನ್ಯೋನ್ಯವಾಗಿದ್ದಳು. ಶೇಖರ ಶೆಟ್ಟಿಗೆ ಹಣದ ಸಮಸ್ಯೆಯಾದಾಗ ರೇವತಿಯ ಬಂಗಾರವನ್ನು ಪಡೆದು ಅಡವಿಟ್ಟು ಸಾಲ ಪಡೆಯುತ್ತಿದ್ದು, ೨೦೧೫ರ ನವೆಂಬರ ತಿಂಗಳಲ್ಲಿ ರೇವತಿ ತನಗೆ ಚಿನ್ನದ ಸರವನ್ನು ನೀಡಿದ್ದು ಅದನ್ನು ಸಹಕಾರಿ ಸಂಘದಲ್ಲಿ ಅಡವಿಟ್ಟು ಸಾಲ ಪಡೆದಿದ್ದನು. ಆ ಚಿನ್ನದ ಸರವನ್ನು ಬಿಡಿಸಿಕೊಡುವಂತೆ ಆಗಾಗ್ಗೆ ಒತ್ತಡ ಹೇರಿದ್ದರಿಂದ ರೇವತಿಯನ್ನು ದಿನಾಂಕ: 12/01/2016ರಂದು ಪಡ್ಲಗುರಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಪೋಲಿಸರನ್ನು ಪಡ್ಲಗುರಿಗೆ ಕರೆದುಕೊಂಡು ಹೋಗಿ ರೇವತಿಯ ಶವವನ್ನು ತೋರಿಸಿದ ಮೇರೆಗೆ ಪೋಲಿಸರು ಶವವನ್ನು ಗುರುತಿಸಿ ರೇವತಿಯ ಮನೆಯವರಿಗೆ ಹಸ್ತಾಂತರಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಮೂಡಬಿದ್ರೆ ಪೋಲಿಸರು ಶೇಖರ ಶೆಟ್ಟಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಪ್ರಕರಣದ ಸಾಕ್ಷಿದಾರರನ್ನು ಸಾಕ್ಷಿ ವಿಚಾರಣೆಗೆ ಒಳಪಡಿಸಿದ್ದು ಅದರಲ್ಲಿ ಮೃತ ರೇವತಿಯ ಅಣ್ಣ, ರೇವತಿಯ ಮಗ, ಸ್ಥಳೀಯರಾದ ಲೀಲಾ ಹಾಗೂ ಲೋಕನಾಥ ಸಾಲ್ಯಾನರವರು ಪ್ರಮುಖ ಸಾಕ್ಷಿ ನುಡಿದಿದ್ದರು.

ಈ ಪ್ರಕರಣದಲ್ಲಿ ಆರೋಪಿ ಪರ ವಕೀಲರು ಸ್ಥಳದಲ್ಲಿ ದೊರೆತ ಶವ ರೇವತಿಯ ಶವ ಅಲ್ಲ ಎಂಬುದಾಗಿ ಪ್ರಬಲ ವಾದ ಮಂಡಿಸಿದ್ದನ್ನು ಗಮನಿಸಿದ ನ್ಯಾಯಾಲಯ ಈ ಪ್ರಕರಣವನ್ನು ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದ ಡಾ|| ಜಗದೀಶ ರಾವ್‌ರವರನ್ನು ವಿಚಾರಣೆಗೆ ಒಳಪಡಿಸಿದ್ದು, ಅವರು ತಮ್ಮ ಸಾಕ್ಷಿ ವಿಚಾರಣೆ ವೇಳೆ ಡಿ.ಎನ್.ಎ ವರದಿಯನ್ನು ಪರಿಶೀಲಿಸಿದ್ದು, ರೇವತಿಯವರ ಮರಣಕ್ಕೆ ಸೂಕ್ತ ಕಾರಣವನ್ನು ಹೇಳಲು ಆಗುವುದಿಲ್ಲ. ಅಲ್ಲದೆ ಶವವು ಸಂಪೂರ್ಣ ಕೊಳೆತು ಹೋಗಿದ್ದರಿಂದ ಅದನ್ನು ಗುರುತು ಹಿಡಿಯಲು ಆಗುವುದಿಲ್ಲ ಎಂಬುದಾಗಿ ಸಾಕ್ಷಿ ನುಡಿದಿದ್ದರು. ಅಲ್ಲದೆ ಮೂಡಬಿದ್ರೆ ಪೋಲಿಸರು ರೇವತಿಯ ಶವವೆಂದು ಬೇರೆ ಯಾರದ್ದೋ ಶವವನ್ನು ತೋರಿಸಿದ್ದಾರೆ ಎಂಬ ಆರೋಪಿ ಪರ ವಕೀಲರ ವಾದವನ್ನು ನ್ಯಾಯಾಲಯ ಸೂಕ್ಷ್ಮವಾಗಿ ಗಮನಿಸಿತ್ತು. ಹಾಗೂ ಡಿ.ಎನ್.ಎ ವರದಿಯಲ್ಲಿ ತನಿಖಾಧಿಕಾರಿಯವರು ಕಳುಹಿಸಿಕೊಟ್ಡಿದ್ದ ರೇವತಿಯ ಶವದ ಜೈವಿಕ ಅಂಶಗಳು ಪರೀಕ್ಷೆಗೆ ಸಮರ್ಪಕವಾಗಿರಲಿಲ್ಲ ಎಂಬುದಾಗಿ ವರದಿ ನೀಡಿದ್ದವು. ಪ್ರಕರಣವನ್ನು ಸೂಕ್ಷ್ಮವಾಗಿ ಮತ್ತು ಕೂಲಂಕುಷವಾಗಿ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿರವರು ಪ್ರಕರಣವನ್ನು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬುದನ್ನು ಮನಗಂಡು ಆರೋಪಿಯನ್ನು ಖುಲಾಸೆ ಗೊಳಿಸಿದ್ದಾರೆ.

ಆರೋಪಿ ಪರವಾಗಿ ವಕೀಲರಾದ ವೇಣುಕುಮಾರ್ ಮತ್ತು ಯುವರಾಜ್ ಕೆ. ಅಮೀನ್ ವಾದಿಸಿದ್ದರು.

LEAVE A REPLY

Please enter your comment!
Please enter your name here