ಕಾಶ್ಮೀರ ಭಯೋತ್ಪಾದಕ ದಾಳಿ ಸಂತ್ರಸ್ತರ ಮಕ್ಕಳಿಗೆ ಉಚಿತ ಶಿಕ್ಷಣ ಘೋಷಿಸಿದ ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ

0

ಪುತ್ತೂರು: ದೇಶಪ್ರೇಮ, ಧರ್ಮ ರಕ್ಷಣೆ ಬಗೆಗೆ ತುಡಿಯುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳೂ ಕಾಶ್ಮೀರ ದಾಳಿಯ ಸಂತ್ರಸ್ತರ ಜತೆ ನಿಲ್ಲುವ ಮೂಲಕ ಅವರಿಗೊಂದು ಸಾಂತ್ವನ ನೀಡುವ ಪ್ರಯತ್ನಕ್ಕಿಳಿಯುತ್ತಿದೆ. ಈ ನಿಟ್ಟಿನಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರ ದುಷ್ಕೃತ್ಯಕ್ಕೆ ಬಲಿಯಾದ ವ್ಯಕ್ತಿಗಳ ಮಗ ಅಥವಾ ಮಗಳಿಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ನೀಡುವುದಕ್ಕೆ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ನಿರ್ಧರಿಸಿವೆ.


ನಟ್ಟೋಜ ಫೌಂಡೇಶನ್ ಟ್ರಸ್ಟ್ ತನ್ನ ಆಶ್ರಯದಲ್ಲಿ ಅಂಬಿಕಾ ವಿದ್ಯಾಲಯ (ಸಿಬಿಎಸ್‌ಇ), ವಸತಿಯುಕ್ತ ಹಾಗೂ ದೈನಂದಿನ ಓಡಾಟಕ್ಕನುಗುಣವಾಗಿನ ಎರಡು ಪ್ರತ್ಯೇಕ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳು ಹಾಗೂ ಅಂಬಿಕಾ ಪದವಿ ಮಹಾವಿದ್ಯಾಲಯವನ್ನು ನಡೆಸುತ್ತಿದೆ. ಎಲ್.ಕೆ.ಜಿ ತರಗತಿಯಿಂದ ತೊಡಗಿ ಪದವಿ ಹಂತದವರೆಗೆ ಯಾವುದೇ ತರಗತಿಯಲ್ಲಿ ಓದಲು ಬಯಸುವ ಕಾಶ್ಮೀರದ ಭಯೋತ್ಪಾದಕ ದಾಳಿಯ ಸಂತ್ರಸ್ತರ ಮಕ್ಕಳಿಗೆ ಈ ಉಚಿತ ಶಿಕ್ಷಣದ ಸೌಲಭ್ಯ ದೊರಕಲಿದೆ. ಜತೆಗೆ ಊಟೋಪಚಾರ ವಸತಿಗಳೂ ಶುಲ್ಕರಹಿತವಾಗಿ ಲಭ್ಯವಾಗಲಿದೆ.


ದೇಶದ ಬಗೆಗೆ, ನೊಂದವರ ಬಗೆಗೆ ಅಪಾರ ಭಾವನೆ ಹೊಂದಿರುವ ನಟ್ಟೋಜ ಫೌಂಡೇಶನ್ ಟ್ರಸ್ಟ್ ಈ ಹಿಂದೆ ಕಾಶ್ಮೀರದ ಪಂಡಿತರ ಮೇಲಾದ ದೌರ್ಜನ್ಯದ ಘೋರತೆಯನ್ನು ಮನಗಂಡು ಕಾಶ್ಮೀರಿ ಸಂತ್ರಸ್ತ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಘೋಷಿಸಿತ್ತು. ಅದರನ್ವಯ ಇಬ್ಬರು ವಿದ್ಯಾರ್ಥಿಗಳು ಕಾಶ್ಮೀರದಿಂದ ಪುತ್ತೂರಿನ ಅಂಬಿಕಾ ಪದವಿಪೂರ್ವ ವಿದ್ಯಾಲಯಕ್ಕೆ ಆಗಮಿಸಿ ಪಿಯು ಶಿಕ್ಷಣಕ್ಕಾಗಿ ದಾಖಲಾಗಿದ್ದರು.


ದೇಶದ ರಕ್ಷಣೆಗಾಗಿ ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ಸಂರಕ್ಷಿಸುವ ಸೈನಿಕರ ಮಕ್ಕಳಿಗೆ ಹಲವು ವರ್ಷಗಳಿಂದ ಅಂಬಿಕಾ ರಿಯಾಯಿತಿ ಶುಲ್ಕದೊಂದಿಗೆ ಶಿಕ್ಷಣ ನೀಡುತ್ತಿದೆ. ಪುತ್ತೂರು ಸುತ್ತಮುತ್ತಲಿನ ಪ್ರದೇಶದ ಸೈನಿಕರು ನಿವೃತ್ತರಾಗಿ ಮರಳಿ ಬಂದಾಗ ಅವರನ್ನು ಮೆರವಣಿಗೆ ಮೂಲಕ ಕರೆತಂದು ಆದರಿಸಿ ಸನ್ಮಾನಿಸುವ ಪದ್ಧತಿಯನ್ನೂ ಅಂಬಿಕಾ ನಡೆಸಿಕೊಂಡು ಬರುತ್ತಿದೆ. ಪುತ್ತೂರಿನಲ್ಲಿ ದಿನಪೂರ್ತಿ ಜ್ಯೋತಿ ಉರಿಯುತ್ತಿರುವ ದಕ್ಷಿಣ ಭಾರತದ ಏಕೈಕ ಅಮರ್ ಜವಾನ್ ಜ್ಯೋತಿ ಸ್ಮಾರಕ ರಚಿಸಿದ ಧನ್ಯತೆಯೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಗಿವೆ.

LEAVE A REPLY

Please enter your comment!
Please enter your name here