ಪುತ್ತೂರು: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಈಶ್ವರಮಂಗಲ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಖಂಡನಾ ಸಭೆ ಮತ್ತು ಮೃತಪಟ್ಟ ಪ್ರವಾಸಿಗರಿಗೆ ಸಂತಾಪ ಸೂಚಿಸುವ ಕಾರ್ಯಕ್ರಮ ಎ.25ರಂದು ಮಸೀದಿ ವಠಾರದಲ್ಲಿ ನಡೆಸಲಾಯಿತು. ಸ್ಥಳೀಯ ಖತೀಬ್ ಸಯ್ಯದ್ ಜಲಾಲುದ್ದೀನ್ ತಂಙಳ್ ನೇತೃತ್ವ ವಹಿಸಿದ್ದರು. ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಮಾತನಾಡಿ ಭಯೋತ್ಪಾದಕರಿಗೆ ಧರ್ಮವಿಲ್ಲ, ಅವರು ಎಲ್ಲ ಧರ್ಮವನ್ನು ಬಿಟ್ಟ ಉಗ್ರವಾದಿಗಳು, ಅವರನ್ನು ಧರ್ಮದ ಜೊತೆ ತುಲನೆ ಮಾಡಬಾರದು ಮತ್ತು ಅವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ಕೊಡುವ ಕಾರ್ಯವಾಗಬೇಕು ಎಂದು ಹೇಳಿದರು. ಜಮಾಅತ್ ಪದಾಧಿಕಾರಿಗಳು, ಸದಸ್ಯರು, ಜಮಾಅತರು ಉಪಸ್ಥಿತರಿದ್ದರು.