ಪಹಲ್ಗಾಮ್ ದಾಳಿ ಖಂಡಿಸಿ ಪ್ರತಿಭಟನೆ

0

ಜಾತಿ, ಮತ ಬಿಟ್ಟು ರಾಷ್ಟ್ರಕ್ಕಾಗಿ ಸಮರ್ಪಣೆಗೆ ಮುಂದಾಗೋಣ: ಮಠಂದೂರು

ಉಪ್ಪಿನಂಗಡಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಹಿಂದೂ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಸರ್ವ ಪರಿವಾರ ಸಂಘಟನೆಗಳ ಸಹಯೋಗದಲ್ಲಿ ಉಪ್ಪಿನಂಗಡಿಯಲ್ಲಿ ಎ.25ರಂದು ಸಂಜೆ ಪ್ರತಿಭಟನೆ ಹಾಗೂ ಉಗ್ರರ ದಾಳಿಯಲ್ಲಿ ಮಡಿದವರಿಗೆ ಸಂತಾಪ ಸೂಚಕ ಸಭೆ ನಡೆಯಿತು.


ಪ್ರತಿಭಟನಾ ಸಭೆಯಲ್ಲಿ ಮೊದಲಿಗೆ ಹಣತೆ ಬೆಳಗಿ ಉಗ್ರರ ದಾಳಿಯಲ್ಲಿ ಮಡಿದವರಿಗೆ ಸಂತಾಪ ಸೂಚಿಸಲಾಯಿತು. ಬಳಿಕ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, ಮತಾಂಧ ಶಕ್ತಿಗಳು ಈ ದೇಶದ ಏಕತೆ ಮತ್ತು ಅಖಂಡತೆಗೆ ಸವಾಲು ಹಾಕುವ ಕೆಲಸ ಮಾಡುತ್ತಿದ್ದು, ಹಿಂದೂ ಧರ್ಮವನ್ನೇ ಟಾರ್ಗೆಟ್ ಮಾಡಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ 27 ಜನರನ್ನು ಅಮಾನುಷವಾಗಿ ಕೊಲ್ಲುವ ಕೆಲಸ ಮಾಡಿದ್ದಾರೆ. ಇಂಥ ಉಗ್ರವಾದಿಗಳಿಗೆ ಹಾಗೂ ಅವರಿಗೆ ಬೆಂಬಲ ನೀಡುವ ಶಕ್ತಿಗಳಿಗೆ ಹಿಂದೂ ಸಮಾಜದ ಯುವಕರು ಜಾತಿ, ಮತ ಬದಿಗಿಟ್ಟು ರಾಷ್ಟಕ್ಕಾಗಿ ಸಮರ್ಪಣೆಗೆ ಮುಂದಾಗಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು- ಕಾಶ್ಮೀರದಲ್ಲಿದ್ದ 370 ವಿಧಿಯನ್ನು ತೆಗೆಯುವ ಮೂಲಕ ಭಯೋತ್ಪಾದಕರ ಬೆನ್ನು ಮೂಳೆ ಮುರಿಯುವ ಕೆಲಸ ಮಾಡಿದ್ದಾರೆ. ಇದೀಗ ಮತ್ತೆ ಭಯೋತ್ಪಾದಕ ಶಕ್ತಿಗಳು ಹಿಂದೂ ಧರ್ಮದವರ ಮೇಲೆ ಆಕ್ರಮಣಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಇಂಥ ವಿಚಿಧ್ರಕಾರಿ ಶಕ್ತಿಗಳನ್ನು ಹೊಸಕಿ ಹಾಕುವ ಕೆಲಸ ಪ್ರಧಾನಿ ನರೇಂದ್ರ ಮೋದಿಯವರಿಂದ ನಡೆಯಲಿದೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಕೆಲಸವೂ ನಡೆಯಲಿದೆ. ಆದ್ದರಿಂದ ಪ್ರಧಾನಿಯವರಿಗೆ ನಾವೆಲ್ಲಾ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದರು.


ಹಿಂದೂ ಪರ ಸಂಘಟನೆಗಳ ಮುಖಂಡ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಭಯೋತ್ಪಾದಕರು ಪಾಕಿಸ್ತಾನ, ಬಲೂಚಿಸ್ತಾನ, ಬಾಂಗ್ಲಾದೇಶದಲ್ಲೇ ಇರಲಿ ಅವರನ್ನು ಹುಡುಕಿ ಹೊಡೆದು ಹಾಕುವ ಕೆಲಸವಾಗಬೇಕಿದೆ. ಇಸ್ರೇಲ್‌ನವರಂತಹ ದೇಶ ಭಕ್ತಿ ನಮ್ಮ ದೇಶದ ಪ್ರತಿಯೋರ್ವರಲ್ಲಿಯೂ ಮೂಡಬೇಕಿದೆ. ನರೇಂದ್ರ ಮೋದಿಯವರು 370 ವಿಧಿ ಹಿಂಪಡೆದ ಬಳಿಕ ಅಲ್ಲಿನ ಆಂತರಿಕ ಭಯೋತ್ಪಾದನೆ ಮಟ್ಟ ಹಾಕುವ ಕೆಲಸ ಮಾಡಿದ್ದರು. ಪುಲ್ವಾಮ ದಾಳಿಗೆ ಸರ್ಜಿಕಲ್ ಸ್ಟ್ರೈಕ್ ಮೂಲಕ ತಕ್ಕ ಉತ್ತರ ಕೊಡುವ ಕೆಲಸ ಮಾಡಿದ್ದರು. ಇನ್ನು ಕೂಡಾ ಕೇವಲ ಜಮ್ಮು- ಕಾಶ್ಮೀರದಲ್ಲಿ ಮಾತ್ರ ಅಲ್ಲ. ಎಲ್ಲಾ ಹಳ್ಳಿಹಳ್ಳಿಗಳಲ್ಲಿಯೂ ಅಡಗಿ ಕುಳಿತಿರುವ ಭಯೋತ್ಪಾದಕರನ್ನು ಮಟ್ಟ ಹಾಕುವ ಕೆಲಸ ನಡೆಯಬೇಕಿದೆ. ದುಷ್ಟ ಶಕ್ತಿಗಳನ್ನು ಹೊಡೆದುರುಳಿಸುವ ತಾಕತ್ತು ಹಿಂದೂ ಸಮಾಜಕ್ಕಿದ್ದು, ನಾವೆಲ್ಲಾ ಒಗ್ಗಟ್ಟಾಗಿ ಭಯೋತ್ಪಾದಕರನ್ನು ಮಟ್ಟ ಹಾಕುವ ಕೆಲಸ ಮಾಡಬೇಕಿದೆ ಎಂದರು.


ಹಿಂದೂ ಪರ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಕಾಶ್ಮೀರದಲ್ಲಿ ನಡೆದ ಘಟನೆಯೂ ಹಿಂದೂ ಸಮಾಜಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಈ ದೇಶದಲ್ಲಿ ಇದ್ದುಕೊಂಡು ಮತಾಂಧ ಭಯೋತ್ಪಾದನೆಗೆ ಬೆಂಬಲ ನೀಡುವ ಶಕ್ತಿಗಳನ್ನು ಮೊದಲು ಮಟ್ಟ ಹಾಕುವ ಕೆಲಸವಾಗಬೇಕಿದೆ. ಈ ಕೃತ್ಯದ ಪರ ಮಾತನಾಡುವವರನ್ನು, ಇದಕ್ಕೆ ಬೆಂಬಲ ನೀಡುವವರನ್ನು ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಮೆರವಣಿಗೆ ಮಾಡಬೇಕಿದೆ. ಇದಕ್ಕಾಗಿ ಹಿಂದೂ ಸಮಾಜ ಒಟ್ಟಾಗಿ ಮತೀಯ ಭಯೋತ್ಪಾದನೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಮಾಡುವ ಕೆಲಸ ಕಾರ್ಯಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಒಮಾರ್ ಅಬ್ದುಲ್ಲಾನ ಸರಕಾರವನ್ನು ವಜಾಗೊಳಿಸಿ, ಅಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಕೆಲಸ ಆಗಬೇಕು. ಅನ್ಯ ಸಮಾಜದವರೊಂದಿಗೆ ವ್ಯಾಪಾರ- ವ್ಯವಹಾರ ಬಿಟ್ಟು ಬದುಕಲು ಸಾಧ್ಯವೇ ಎಂದು ಹಿಂದೂ ಸಮಾಜ ಯೋಚನೆ ಮಾಡಬೇಕು ಎಂದರು.


ಪ್ರತಿಭಟನೆಯಲ್ಲಿ ಪ್ರಮುಖರಾದ ಎನ್. ಉಮೇಶ್ ಶೆಣೈ, ಸುನೀಲ್ ಕುಮಾರ್ ದಡ್ಡು, ಚಿದಾನಂದ ಪಂಚೇರು, ರಾಜೇಶ್ ಕೊಡಂಗೆ, ಸುಜೀತ್ ಬೊಳ್ಳಾವು, ಸಂದೀಪ್ ಕುಪ್ಪೆಟ್ಟಿ, ರಾಧಾಕೃಷ್ಣ ಭಟ್ ಬೊಳ್ಳಾವು, ಯು. ರಾಮ, ವಿಶ್ವನಾಥ ಶೆಟ್ಟಿ ಕಂಗ್ವೆ, ಧನಂಜಯ ನಟ್ಟಿಬೈಲು, ಚಂದ್ರಶೇಖರ ಮಡಿವಾಳ, ಚಂದ್ರಶೇಖರ ತಾಳ್ತಜೆ, ಜಯಂತ ಪೊರೋಳಿ, ರಾಜಗೋಪಾಲ ಭಟ್ ಕೈಲಾರು, ಪುರುಷೋತ್ತಮ ಮುಂಗ್ಲಿಮನೆ, ಮನೀಷ್, ಹರೀಶ್ ಪಟ್ಲ, ಪ್ರಸಾದ್ ಭಂಡಾರಿ, ರಾಮಚಂದ್ರ ಪೂಜಾರಿ, ಗಂಗಾಧರ ಪಿ.ಎನ್., ಸುದರ್ಶನ್, ಹರಿರಾಮಚಂದ್ರ, ಉದಯ ಅತ್ರೆಮಜಲು, ಮಹೇಶ್ ಬಜತ್ತೂರು, ಸಂತೋಷ್ ಕರ್ಲಾಪು, ಕಿಶೋರ್ ಬಜತ್ತೂರು, ರವಿನಂದನ್ ಹೆಗ್ಡೆ, ಜಯರಾಮ ಆಚಾರ್ಯ, ರವಿ ಇಳಂತಿಲ, ಮೂಲಚಂದ್ರ ಕಾಂಚನ, ಕೈಲಾರ್ ಸತ್ಯನಾರಾಯಣ ಭಟ್, ಡಾ. ಗೋವಿಂದ ಪ್ರಸಾದ್ ಕಜೆ, ಪ್ರಶಾಂತ್ ನೆಕ್ಕಿಲಾಡಿ, ಶರತ್ ಕೋಟೆ, ಶ್ರೀರಾಮ ಭಟ್ ಪಾತಾಳ, ಡಾ. ಶಿವರಾಮ ಭಟ್, ರವೀಂದ್ರ ಆಚಾರ್ಯ, ಹೇರಂಭ ಶಾಸ್ತ್ರಿ, ಗಿರೀಶ್ ಕುಂದರ್, ಗೋಪಾಲಕೃಷ್ಣ ದುರ್ಗಾಗಿರಿ ಮತ್ತಿತರರು ಉಪಸ್ಥಿತರಿದ್ದರು. ಸುರೇಶ್ ಅತ್ರೆಮಜಲು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here