ಬಣ್ಣದ ಮಹಾಲಿಂಗ ಯಕ್ಷಸ್ಮೃತಿ ಪುರಸ್ಕಾರಕ್ಕೆ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಆಯ್ಕೆ – ಎ.27ರಂದು ಪುತ್ತೂರಿನ ನಟರಾಜ ವೇದಿಕೆಯಲ್ಲಿ ಪುರಸ್ಕಾರ ಪ್ರದಾನ

0

ಪುತ್ತೂರು: ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಬಣ್ಣದ ವೇಷಗಳಲ್ಲಿ ಕ್ರಾಂತಿ ಮೂಡಿಸಿದ ʻಬಣ್ಣದ ಮಹಾಲಿಂಗʼ ರ ನೆನಪಿನಲ್ಲಿ ನಡೆಯುವ ಯಕ್ಷಪಯಣ “ಬಣ್ಣದಜ್ಜನ ಸ್ಮೃತಿಯಾನ” ದ ಅಂಗವಾಗಿ ನೀಡುವ “ಯಕ್ಷಸ್ಮೃತಿ ಪುರಸ್ಕಾರ” ಕ್ಕೆ ಹವ್ಯಾಸಿ ಯಕ್ಷಗಾನ ಕಲಾವಿದ, ಯಕ್ಷಗುರು ಬಾಲಕೃಷ್ಣ ಪೂಜಾರಿ ಉಡ್ಡಂಗಳ ಅವರನ್ನು ಆಯ್ಕೆ ಮಾಡಲಾಗಿದೆ.

ಏ.27ರಂದು ಪುತ್ತೂರಿನ ನಟರಾಜ ವೇದಿಕೆಯಲ್ಲಿ ನಡೆಯಲಿರುವ ಈಶ ವಿದ್ಯಾಲಯದ ಬೆಳ್ಳಿಹಬ್ಬ ಉದ್ಘಾಟನೆ ಮತ್ತು ಬಣ್ಣದ ಮಹಾಲಿಂಗ ಸಂಸ್ಮರಣ ಸರಣಿ ಕಾರ್ಯಕ್ರಮದಲ್ಲಿ ಈ ಸನ್ಮಾನ ಪ್ರದಾನ ನಡೆಯಲಿದೆ.
ಗಡಿನಾಡು ಗ್ರಾಮಗಳಲ್ಲಿ ಮತ್ತು ಪುತ್ತೂರು ತಾಲೂಕಿನಲ್ಲಿ ಬಾಲಕೃಷ್ಣ ಪೂಜಾರಿಯವರು ನಡೆಸಿದ ಯಕ್ಷಕಲಾ ಸೇವೆ ಮತ್ತು ಕೊಡುಗೆ ಪರಿಗಣಿಸಿ ಬಣ್ಣದ ಮಹಾಲಿಂಗರ ಸ್ಮೃತಿ ಪುರಸ್ಕಾರ ನೀಡಲಾಗುತ್ತಿದೆ. 27ವರ್ಷಗಳ ಹಿಂದೆ ಪೆರ್ಲದಲ್ಲಿ ಸಬ್ಬಣಕೋಡಿ ರಾಮ ಭಟ್ ಯಕ್ಷಗಾನ ನಾಟ್ಯ ತರಬೇತಿ ನೀಡಲಾರಂಭಿಸಿದಾಗ ಅಲ್ಲಿಗೆ ಸೇರಿದ ಮೊದಲ ಸಾಲಿನ ಶಿಷ್ಯರಲ್ಲಿ ಬಾಲಕೃಷ್ಣ ಪೂಜಾರಿಯವರೂ ಒಬ್ಬರು. ಸಂಪ್ರದಾಯಬದ್ಧ ಯಕ್ಷ ಶಿಕ್ಷಣದಿಂದ ಆರ್ಲಪದವಿನ ಹವ್ಯಾಸಿ ಯಕ್ಷರಂಗದ ಉಸಿರಾಗಿ ರೂಪುಗೊಂಡ ಇವರು ಕಿರೀಟವನ್ನು ನೆಚ್ಚುವ, ಕಿರೀಟ ವೇಷಗಳಲ್ಲಿ ಶೋಭಾಯಮಾನ ಪ್ರಸ್ತುತಿ ನೀಡುವ ಅಪರೂಪದ ಹವ್ಯಾಸಿ ವೇಷಧಾರಿ. ವೃತ್ತಿ ಮೇಳ ಬಯಸುವ ಅಗ್ರಶ್ರೇಣಿಯ ಕಲಾವಿದರೆನಿಸಿಕೊಂಡಿದ್ದಾರೆ. ರಕ್ತಬೀಜ, ಕರ್ಣ, ದಶರಥ, ಅರ್ಜುನ, ಕೌಂಡ್ಳಿಕ, ಇಂದ್ರಜಿತು ಮುಂತಾದ ವೇಷಗಳನ್ನು ಲೀಲಾಜಾಲವಾಗಿ ಮತ್ತು ಮನೋಜ್ಞವಾಗಿ ರಂಗದಲ್ಲಿ ಮೆರೆಸುವ ಇವರು ಅತ್ಯಂತ ಇಷ್ಟದಿಂದ ಮಾಡುವ ʻದೇವೇಂದ್ರʼ ವೇಷ ಹೆಚ್ಚು ಬಾರಿ ಮಾಡಿರುವುದರಿಂದ ಹವ್ಯಾಸಿ ವಲಯದಲ್ಲಿ ‘ದೇವೇಂದ್ರ ಬಾಳಪ್ಪಣ್ಣ’ ನೆಂದೇ ಕರೆಯಲ್ಪಟ್ಟಿದ್ದಾರೆ.

2005ರಿಂದ ಯಕ್ಷಗಾನ ಗುರುಗಳಾಗಿ ಪ್ರಸ್ತುತ ಗುರುತ್ವದ ವಿಂಶತಿ ವರ್ಷಾಚರಣೆಯಲ್ಲಿರುವ ಇವರು ಆರ್ಲಪದವು ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾಸಂಘದಲ್ಲಿ 20ವರ್ಷಗಳಿಂದ ಉಚಿತ ನಾಟ್ಯ ಶಿಕ್ಷಣ ನೀಡುತ್ತಿದ್ದಾರೆ. ಜತೆಗೆ ಸಂಘದ ಆರ್ಲಪದವಿನಲ್ಲಿ ಯಕ್ಷಗಾನ ಕಲಾವಿದರನ್ನು ರೂಪಿಸುತ್ತಾ, ಸಂಘವನ್ನು ಸದಾ ಜೀವಂತವಾಗಿರಿಸಿದ್ದಾರೆ. ಪುತ್ತೂರು ತೆಂಕಿಲದ ವಿವೇಕಾನಂದ, ಅಂಬಿಕಾ ವಿದ್ಯಾಲಯ ಬಪ್ಪಳಿಗೆ, ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆ, ಮಾಣಿ ಸರಸ್ವತಿ ವಿದ್ಯಾಮಂದಿರ ನರಿಮೊಗರು, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮಶಾಲೆ ಬೆಟ್ಟಂಪಾಡಿ, ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ, ಶ್ರೀಕೃಷ್ಣ ಭಜನಾ ಮಃದಿರ ಕೌಡಿಚ್ಚಾರು, ಈಶ ವಿದ್ಯಾಲಯ ನೆಲ್ಲಿಕಟ್ಟೆ ಪುತ್ತೂರು ಮೊದಲಾದ ಶಾಲಾ ಕಾಲೇಜುಗಳಲ್ಲಿ ಯಕ್ಷ ಶಿಕ್ಷಣ ನೀಡುತ್ತಿರುವ ಇವರ ಬಳಿ ಈಗಾಗಲೇ 3 ಸಾವಿರಕ್ಕೂ ಅಧಿಕ ಮಂದಿ ಯಕ್ಷ ಶಿಕ್ಷಣ ಪಡೆದಿದ್ದಾರೆ. ನೂರಾರು ಮಂದಿ ನುರಿತ ಕಲಾವಿದರಾಗಿ ಪ್ರದರ್ಶನ ನೀಡುತ್ತಾರೆ. ವೇಷಧಾರಿ ಜೊತೆಗೆ ಯಕ್ಷಗಾನ ಪ್ರಸಂಗ ರಚನೆಯನ್ನೂ ಮಾಡಿರುವ ಬಾಲಕೃಷ್ಣ ಪೂಜಾರಿಯವರು ಪತ್ನಿ ಪುಷ್ಪಾವತಿ, ಮಕ್ಕಳಾದ ಧೃತಿ, ಪ್ರಖ್ಯಾತ್ ಇವರೊಂದಿಗೆ ಪಾಣಾಜೆ ಗ್ರಾಮದ ಉಡ್ಡಂಗಳ ಎಂಬಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here