ಪುತ್ತೂರು: 9 ವರ್ಷಗಳ ಹಿಂದೆ ಕಡಬದ ಐತ್ತೂರು ಸಮೀಪ ನಡೆದಿದ್ದ ಅಪ್ರಾಪ್ತೆಯ ಬಲಾತ್ಕಾರ ಪ್ರಕರಣದ ಅಪರಾಧಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.
2016ರ ಮಾ.29ರಲ್ಲಿ ಐತ್ತೂರು ಗ್ರಾಮದ ಸುಬ್ರಾಯಪಾಲ್ ನಿವಾಸಿ ರಿಕ್ಷಾ ಚಾಲಕ ಉಮೇಶ ಎಸ್. ಎಂಬಾತ ಅಪ್ರಾಪ್ತ ಬಾಲಕಿಯನ್ನು ತನ್ನ ರಿಕ್ಷಾದಲ್ಲಿ ಐತ್ತೂರು ಗ್ರಾಮದ ಅಜನ ಕಾಡಿಗೆ ಕರೆದುಕೊಂಡು ಹೋಗಿ ಬಲಾತ್ಕಾರದ ಸಂಭೋಗ ಮಾಡಿದ್ದಾಗಿ ಆರೋಪಿಸಲಾಗಿತ್ತು. ಈ ಕುರಿತು ನೊಂದ ಬಾಲಕಿಯ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಪುತ್ತೂರು ಗ್ರಾಮಾಂತರ ನಿರೀಕ್ಷಕರಾಗಿದ್ದ ಆನಿಲ್ ಎಸ್.ಕುಲಕರ್ಣಿಯವರು ಪ್ರಕರಣದ ಬಹುತೇಕ ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಭಾರ ವೃತ್ತ ನಿರೀಕ್ಷಕ ಯಸ್.ಎಂ.ಲಿಂಗದಾಳುರವರು ಸ್ಥಳ ಮಹಜರು ತಯಾರಿಸಿ, ಸ್ಥಳದಲ್ಲಿ ದೊರೆತ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಲಯ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಸರಿತಾ ಡಿ ಅವರು ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ,ಅಪರಾಧಿಗೆ ಭಾರತೀಯ ದಂಡ ಸಂಹಿತೆ ಕಲಂ 376(2)(ಐ)ಯಡಿ ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ.25 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 1 ವರ್ಷ ಸಾದಾ ಕಾರಾಗೃಹ ಶಿಕ್ಷೆ, ಪೋಕ್ಸೋ ಕಾಯ್ದೆ ಕಲಂ 4ರಡಿಯ ಅಪರಾಧಕ್ಕೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ.10 ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಸಾದಾ ಕಾರಾಗೃಹ ಶಿಕ್ಷೆ, ಪೋಕ್ಸೋ ಕಾಯ್ದೆಯ ಕಲಂ 8ರಡಿಯ ಅಪರಾಧಕ್ಕೆ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ.5 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ. ದಂಡದ ಮೊತ್ತದಲ್ಲಿ ರೂ.25 ಸಾವಿರವನ್ನು ನೊಂದ ಬಾಲಕಿಗೆ ನೀಡುವಂತೆ ಆದೇಶಿಸಿರುವ ನ್ಯಾಯಾಧೀಶರು, ಪರಿಹಾರ ರೂಪದಲ್ಲಿ ರೂ.4.5 ಲಕ್ಷವನ್ನು ಬಾಲಕಿಗೆ ಪಾವತಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದ ಪ್ರಶಾಂತ್ ಎಂಬವರನ್ನು ನ್ಯಾಯಾಲಯ ಬಿಡುಗಡೆಗೊಳಿಸಿದೆ. ಸರಕಾರದ ಪರ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ ಅಡ್ಯಂತಾಯರವರು ವಾದಿಸಿದ್ದರು.
ಈ ಪ್ರಕರಣದಲ್ಲಿ ಪೊಕ್ಸೋ ವಿಶೇಷ ನ್ಯಾಯಾಲಯವು ಒಟ್ಟು 20 ಸಾಕ್ಷಿಗಳನ್ನು ವಿಚಾರಿಸಿದೆ. ನ್ಯಾಯಾಲಯದಲ್ಲಿ ಬಾಲಕಿ ಮತ್ತು ಬಾಲಕಿಯ ತಾಯಿ ಕೃತ್ಯದ ಬಗ್ಗೆ ಸವಿವರವಾದ ಸಾಕ್ಷ್ಯ ನೀಡಿರುತ್ತಾರೆ. ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜ್ ದೇರಳಕಟ್ಟೆಯಲ್ಲಿ ವೈದ್ಯೆಯಾಗಿದ್ದ ಡಾ.ಶ್ರೇಯಲ್ ಸುವರಿಸ್ರವರು ಬಾಲಕಿಯನ್ನು ವೈದ್ಯಕೀಯವಾಗಿ ಪರೀಕ್ಷೆ ಮಾಡಿ ಬಾಲಕಿಯ ಮೇಲೆ ಲೈಂಗಿಕ ಹಲ್ಲೆ ಆಗಿರುವುದನ್ನು ದೃಢಪಡಿಸಿದ್ದರು. ಡಾ.ಗೀತಾಲಕ್ಷ್ಮೀ ಮತ್ತು ಡಿ.ಎನ್.ಎ ತಜ್ಞ ಡಾ.ಎಲ್.ಪುರುಷೋತ್ತಮರವರು ತನಿಖಾಧಿಕಾರಿ ಕಳುಹಿಸಿಕೊಟ್ಟ ವಸ್ತುಗಳನ್ನು ಪರೀಕ್ಷಿಸಿ ಆರೋಪಿಯ ವೀರ್ಯಾಣು ಮತ್ತು ಬಾಲಕಿಯ ದೇಹದ ಸತ್ತಜೀವಕೋಶಗಳನ್ನು ಪತ್ತೆ ಮಾಡಿ ಆರೋಪಿಯು ಕೃತ್ಯದಲ್ಲಿ ಭಾಗಿಯಾಗಿದ್ದನ್ನು ತಮ್ಮ ವರದಿಗಳ ಮೂಲಕ ದೃಢೀಕರಿಸಿದ್ದರು.