ಪುತ್ತೂರು: ಜಾತ್ರೋತ್ಸವದ ಲೆಕ್ಕಪತ್ರ ಮಂಡನೆ ಸಭೆಯಲ್ಲಿ ಅನುಚಿತವಾಗಿ ವರ್ತಿಸಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
2022ರಲ್ಲಿ ಮುಂಡೂರು ಗ್ರಾಮದ ಮೃತ್ಯುಂಜಯೇಶ್ವರ ದೇವಳದ ಹೊರಾಂಗಣದಲ್ಲಿ ಜಾತ್ರೋತ್ಸವದ ಲೆಕ್ಕಪತ್ರ ಮಂಡನೆ ಸಭೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಲೋಕಪ್ಪ ಗೌಡ ಅವರಿಗೆ ಫೈಬರ್ ಚೆಯರ್ನಿಂದ ಹಲ್ಲೆ ಮಾಡಲು ಮುಂದಾಗಿ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದೇವಸ್ಥಾನದ ನಿಯಮಗಳನ್ನು ಗಾಳಿಗೆ ತೂರಿ ಅನುಚಿತವಾಗಿ ವರ್ತಿಸಿದ್ದರೆಂದು ಆರೋಪಿಸಲಾಗಿತ್ತು. ಈ ಕುರಿತು ಲೋಕಪ್ಪ ಗೌಡ ಅವರ ದೂರಿನ ಮೇರೆಗೆ ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. ಆರೋಪಿ ಪರ ವಕೀಲ ಚಿನ್ಮಯ್ ರೈ ಈಶ್ವರಮಂಗಲ ವಾದಿಸಿದ್ದರು.