ನೆಲ್ಯಾಡಿ: ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿ ಇಲ್ಲಿ ’ಮ್ಯೂಚುಯಲ್ ಫಂಡ್’ ಹೂಡಿಕೆಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಯುಟಿಐ ಮ್ಯೂಚುಯಲ್ ಫಂಡ್ ದಕ್ಷಿಣ ಕನ್ನಡ ಜಿಲ್ಲೆಯ ವ್ಯವಹಾರ ಸಂಘಟಕರು ಹಾಗೂ ಫೈನಾನ್ಸ್ ತಜ್ಞರಾದ ಆದಿತ್ಯ ಎಸ್.ರಾವ್ರವರು, ಮ್ಯೂಚುವಲ್ ಫಂಡ್ನ ಅವಶ್ಯಕತೆ, ಹೂಡಿಕೆಯಲ್ಲಿನ ವೈವಿಧ್ಯತೆ, ಲಾಭ ನಷ್ಟದ ಅಂಶಗಳು, ಷೇರು ಮಾರುಕಟ್ಟೆ ಹಾಗೂ ಮ್ಯೂಚುವಲ್ ಫಂಡ್ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು. ಪ್ರಸ್ತುತ ಹೂಡಿಕೆ ಭವಿಷ್ಯದ ಪೀಳಿಗೆಯ ಜೀವನ ಗುಣಮಟ್ಟ ಸುಧಾರಿಸುವಲ್ಲಿ ಹಾಗೂ ಆರ್ಥಿಕ ಸಬಲತೆಯನ್ನು ಸಾಧಿಸುವಲ್ಲಿ ನೆರವಾಗುತ್ತದೆ ಎಂದು ಆದಿತ್ಯ ರಾವ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಸೀತಾರಾಮ ಪಿ., ಮಾತನಾಡಿ, ಮಾರುಕಟ್ಟೆ ಅಪಾಯವಿಲ್ಲದ ಹೂಡಿಕೆಯ ಮೂಲಗಳನ್ನು ತಿಳಿದುಕೊಂಡು ಆರ್ಥಿಕ ಸಾಕ್ಷರತೆಯೊಂದಿಗೆ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು. ವಾಣಿಜ್ಯ ಸಂಘದ ಸಂಚಾಲಕಿ ಪಾವನ ಸ್ವಾಗತಿಸಿದರು. ತೃತೀಯ ಬಿಕಾಂ ವಿದ್ಯಾರ್ಥಿನಿ ನುಸ್ರೀಲ್ ವಂದಿಸಿದರು. ಯಕ್ಷಿತ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೆರೋನಿಕಾ ಪ್ರಭಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.