ಪುತ್ತೂರು: ಗ್ರಾಮ ಪಂಚಾಯತ್ ಕೋಡಿಂಬಾಡಿ ಹಾಗೂ ಗ್ರಾಮ ಪಂಚಾಯತ್ ಅರಿವು ಕೇಂದ್ರದ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಕೋಡಿಂಬಾಡಿ ಹಿ.ಪ್ರಾ. ಶಾಲಾ ವಠಾರದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಹಾಗೂ ಮಕ್ಕಳು ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿದರು. ಪ್ರಥಮ ದಿನ ಸಂಪನ್ಮೂಲ ವ್ಯಕ್ತಿಯಾಗಿ ಪೇರಲ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಯಶೋದಾ ಪಿ. ಭಾಗವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯ ರಾಮಣ್ಣ ಗೌಡ ಗುಂಡೋಳೆ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಮೇಲ್ವಿಚಾರಕಿ ಕುಸುಮ ವಿ. ರೈ ಸ್ವಾಗತಿಸಿದರು. ಎಂ.ಎಸ್.ಡಬ್ಲ್ಯು ವಿದ್ಯಾರ್ಥಿನಿಯರಾದ ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿ ವೈಷ್ಣವಿ ವಂದಿಸಿದರು.
ಶಿಬಿರದಲ್ಲಿ ಸುಮಾರು 45 ಮಕ್ಕಳು ಭಾಗವಹಿಸಿದ್ದರು. ಯಶೋದ ಅವರು ಮಕ್ಕಳಿಗೆ ಯೋಗ, ಧ್ಯಾನ, ಆಟೋಟ, ಮತ್ತು ಮೆಡಿಸಿನ್ ಪ್ಲಾಂಟ್ ನ ಸುಮಾರು 75 ಬಗೆಯ ಔಷಧೀಯ ಸಸ್ಯಗಳನ್ನು ಗುರುತಿಸಿ ಮಕ್ಕಳಿಗೆ ಅದರ ಪ್ರಯೋಜನದ ಬಗ್ಗೆ ಹೇಳಿದರು. ಮಕ್ಕಳಿಗೆ ಸ್ಮರಣ ಶಕ್ತಿ ಕುರಿತು ನಡೆಸಿದ ಸ್ಪರ್ಧೆಯಲ್ಲಿ ಪ್ರಥಮ , ದ್ವಿತೀಯ ಮತ್ತು ತೃತೀಯ ವಿಜೇತರಾದವರಿಗೆ ಗ್ರಂಥಪಾಲಕಿ ಕುಸುಮ ವಿ. ರೈ ಪುಸ್ತಕ ಬಹುಮಾನವಾಗಿ ನೀಡಿದರು.
ಎರಡನೇ ದಿನದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆರ್ಟಿಸ್ಟ್, ಮೇಕಪ್ ರಂಗಭೂಮಿ ಕಲಾವಿದ ಪ್ರಸಾದ್ ಕುಮಾರ್ ಕೊಯಿಲ ಭಾಗವಹಿಸಿದ್ದರು. ಇವರು ಮಕ್ಕಳಿಗೆ ನೃತ್ಯ, ಭರತನಾಟ್ಯ, ಯಕ್ಷಗಾನ , ಮುಂತಾದ ಕಾರ್ಯಕ್ರಮಗಳಿಗೆ ಮುಖದ ಅಲಂಕಾರ ಹಾಗೂ ಇತರ ಡ್ಯಾನ್ಸ್, ಹಾಡು ಮುಂತಾದ ಚಟುವಟಿಕೆಗಳನ್ನು ಕಲಿಸಿಕೊಟ್ಟರು.
ಮೂರನೇ ದಿನದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಕ ಪ್ರಕಾಶ್ ಕುಮಾರ್ ಅವರು ಮಕ್ಕಳಿಗೆ ಯೋಗ, ಧ್ಯಾನ ಹಾಗೂ ವಿವಿಧ ರೀತಿಯ ಚಿತ್ರಕಲೆಯನ್ನು ಕಲಿಸಿಕೊಟ್ಟರು. ನಾಲ್ಕನೇ ದಿನದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಕಡಬ ತಾಲೂಕಿನ ಪೆರಾಬೆ ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಮೇಲ್ವಿಚಾರಕಿ ಜಯಕುಮಾರಿ ಅವರು ಯೋಗ, ಧ್ಯಾನ ಹಾಗೂ ದೇವರ ಪ್ರಾರ್ಥನೆಯೊಂದಿಗೆ ಶಿಬಿರ ಪ್ರಾರಂಭಿಸಿ ಮಕ್ಕಳಿಗೆ ನಾಯಕತ್ವ ಗುಣ, ಆಡಳಿತ, ವಿವಿಧ ಆಟೋಟಗಳು ಮತ್ತು ಹರ್ಲಿ ಬರ್ಡ್ ನ ಚಟುವಟಿಕೆಗಳು, ಪಕ್ಷಿಗಳ ಆಹಾರ ಕ್ರಮ, ಜೀವನ ಕ್ರಮ, ವಲಸೆ ಮುಂತಾದ ಚಟುವಟಿಕೆಗಳನ್ನು ಮಕ್ಕಳಿಗೆ ಮಾಡಿಸಿದರು.

ಶಿಬಿರದ ಸಮಾರೋಪ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಮತ್ತು ಗ್ರಾ.ಪಂ. ಕಾರ್ಯದರ್ಶಿ ಅಣ್ಣು ಪಿ. ಭಾಗವಹಿಸಿದ್ದರು. ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಭಾಗವಹಿಸುವಿಕೆ ಪ್ರಮಾಣ ಪತ್ರ ನೀಡಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಆರ್ಟಿಸ್ಟ್ ರಂಗ ಕಲಾವಿದ ಪ್ರಸಾದ್ ಕುಮಾರ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಕ ಪ್ರಕಾಶ್ ಕುಮಾರ್, ಕಡಬ ತಾಲೂಕಿನ ಪೆರಾಬೆ ಗ್ರಾಮ ಪಂಚಾಯತ್ ಅರಿವು ಕೇಂದ್ರದ ಮೇಲ್ವಿಚಾರಕಿ ಜಯಕುಮಾರಿ ಹಾಗೂ ಕಾರ್ಯಕ್ರಮದ ಆಯೋಜಕರಾದ ಕೋಡಿಂಬಾಡಿ ಅರಿವು ಕೇಂದ್ರದ ಮೇಲ್ವಿಚಾರಕಿ ಕುಸುಮಾ ವಿ. ರೈ ಅವರನ್ನು ಗ್ರಾಮ ಪಂಚಾಯತ್ ವತಿಯಿಂದ ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಎಂ.ಎಸ್.ಡಬ್ಲ್ಯು. ವಿದ್ಯಾರ್ಥಿನಿ ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ಅರಿವು ಕೇಂದ್ರದ ಮೇಲ್ವಿಚಾರಕಿ ಕುಸುಮ ವಿ. ರೈ ಸ್ವಾಗತಿಸಿ ವಂದಿಸಿದರು. ಗ್ರಾಮ ಪಂಚಾಯತಿ ಸಿಬ್ಬಂದಿ ಲೀಲಾವತಿ ಸಹಕರಿಸಿದರು. ಬೇಸಿಗೆ ಶಿಬಿರದ ಮಕ್ಕಳಿಗೆ ಲಘು ಉಪಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಕೋಡಿಂಬಾಡಿ ಗ್ರಾಮ ಪಂಚಾಯತ್ ವತಿಯಿಂದ ಮಾಡಲಾಗಿತ್ತು. ಕೋಡಿಂಬಾಡಿ ಶಾಲೆಯ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಸ್ಫೂರ್ತಿ ರಾಜಮಣಿ ರೈ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಐಸ್ಕ್ರೀಮ್ ಮತ್ತು ಚಾಕೊಲೇಟ್ ನೀಡಿ ಸಹಕರಿಸಿದರು.