ಉಪ್ಪಿನಂಗಡಿ: ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯವನ್ನು ರಾಜ್ಯದ ಪ್ರಸಿದ್ಧ ಯಾತ್ರ ಸ್ಥಳವನ್ನಾಗಿ ಅಭಿವೃದ್ಧಿ ಪಡಿಸಲು ರಾಜ್ಯ ಸರಕಾರದಿಂದ 352 ಕೋ.ರೂ.ನ ಯೋಜನೆ ಸಿದ್ಧವಾಗಿದ್ದು, ಇಲ್ಲಿ ಕಿಂಡಿ ಅಣೆಕಟ್ಟು, ನದಿ ನೀರಿನಲ್ಲಿ ಮುಳುಗಿರುವ ಉದ್ಭವ ಲಿಂಗದ ದರ್ಶನಕ್ಕೆ ಕೂಡಲ ಸಂಗಮದಲ್ಲಿರುವಂತೆ ವ್ಯವಸ್ಥೆ ಸೇರಿದಂತೆ ಈ ಪ್ರದೇಶವನ್ನು ಧಾರ್ಮಿಕ ಟೂರಿಸಂಗೆ ಪೂರಕವಾಗಿ ಅಭಿವೃದ್ದಿ ಪಡಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಈ ಯೋಜನೆಗೆ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಲು ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಯ ಎಂಜಿನಿಯರ್‌ಗಳು ಹಾಗೂ ಸರಕಾರದ ಅಧಿಕಾರಿಗಳೊಂದಿಗೆ ಎ.26ರಂದು ದೇವಾಲಯದ ಬಳಿ ಸಮಾಲೋಚನೆ ಹಾಗೂ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ನನ್ನ ನಿರಂತರ ಒತ್ತಡದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಜೆಟ್‌ನಲ್ಲಿ ಈ ದೇವಾಲಯದ ಸಮಗ್ರ ಅಭಿವೃದ್ಧಿಗೆ 352 ಕೋ.ರೂ. ಅನುದಾನ ನೀಡಲು ಅನುಮೋದನೆ ನೀಡಿದ್ದು, ಇದರಲ್ಲಿ ನದಿಯ ಎರಡು ದಡಗಳಿಗೆ ಸಂಪರ್ಕ ರಸ್ತೆಯಿರುವ ಕಿಂಡಿ ಅಣೆಕಟ್ಟು, ನದಿ ನೀರಿನಲ್ಲಿ ಮುಳುಗಿರುವ ಉದ್ಭವ ಲಿಂಗದ ದರ್ಶನಕ್ಕೆ ಕೂಡಲ ಸಂಗಮದಲ್ಲಿರುವಂತೆ ಗೋಳಾಕಾರದ ಮಂದಿರ ನಿರ್ಮಿಸಿ ಉದ್ಭವ ಲಿಂಗದ ಬಳಿ ತೆರಳಿ ಪೂಜೆ ಮಾಡಲು ಅವಕಾಶ ಕಲ್ಪಿಸುವುದು. ನದಿ ತಟದಲ್ಲಿ ಪಿಂಡ ಪ್ರಧಾನಕ್ಕೆ ಸಭಾಂಗಣ ನಿರ್ಮಾಣ, ವಸತಿ ವ್ಯವಸ್ಥೆಗೆ 60 ಕೊಠಡಿಗಳ ಕಟ್ಟಡ ನಿರ್ಮಾಣ, ಪಿಂಡ ಪ್ರಧಾನಕ್ಕೆ ಬಂದವರಿಗೆ ಸ್ನಾನ ಮಾಡಲು ರ‍್ಯಾಂಪ್ ನಿರ್ಮಾಣ ಮಾಡಲಾಗುವುದು ಹಾಗೂ ದೇವಾಲಯದಿಂದ ಬಸ್ ನಿಲ್ದಾಣದವರೆಗೆ ನದಿ ಬದಿಯಲ್ಲಿ ತಡೆಗೋಡೆ ನಿರ್ಮಿಸಿ ನದಿ ಬದಿಯಲ್ಲಿ 20 ಫೀಟ್‌ನ ರಸ್ತೆ ನಿರ್ಮಾಣ, ನದಿಯ ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ, ವಿಶೇಷ ವಿದ್ಯುತ್ ದೀಪಾಲಂಕಾರ, ಮ್ಯೂಸಿಕ್ ಕಾರಂಜಿ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಮಾಡಲಾಗುವುದು. ಒಟ್ಟಿನಲ್ಲಿ ಉಪ್ಪಿನಂಗಡಿಯನ್ನು ಧಾರ್ಮಿಕ ಟೂರಿಸಂಗೆ ಪೂರಕವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಎಂಜಿನಿಯರ್‌ಗಳು ಸಮಗ್ರ ಯೋಜನಾ ವರದಿ ತಯಾರಿಸಿ ಒಂದು ವಾರದಲ್ಲಿ ನಮ್ಮ ಕೈಗೆ ನೀಡಲಿದ್ದು, ಬಳಿಕ ಅದು ಮಂಜೂರಾತಿಗೊಂಡು 3-4 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಮಳೆಗಾಲದಲ್ಲಿ ನದಿಯಲ್ಲಿ ನೀರಿರುವ ಸಂದರ್ಭದಲ್ಲಿ ಈ ಕಾಮಗಾರಿ ನಡೆಸಲು ಕಷ್ಟಸಾಧ್ಯವಾದ್ದರಿಂದ ನೀರು ಕಡಿಮೆಯಾದ ಕೂಡಲೇ ಕಾಮಗಾರಿ ಆರಂಭಿಸಿ ಮುಂದಿನ ಮಳೆಗಾಲಕ್ಕೆ ಮೊದಲು ಕಾಮಗಾರಿ ಮುಗಿಸುವ ಯೋಜನೆಯಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕರು, ಇನ್ನು ಖಾಸಗಿಯವರಲ್ಲಿರುವ ದೇವಾಲಯದ 4 ಸೆಂಟ್ಸ್ ಜಾಗ ವಶಪಡಿಸಿಕೊಳ್ಳಲು ಬಾಕಿಯಿದ್ದು, ಅವರಿಗೂ ನೊಟೀಸ್ ನೀಡಲಾಗಿದೆ. ಅಲ್ಲಿ ಮನೆಯಿರುವ ಕಾರಣ ಅವರು ಕಾಲಾವಕಾಶ ಕೇಳಿದ್ದಾರೆ. ಅವರು ಕಾನೂನು ಹೋರಾಟ ಮಾಡುತ್ತಾರೋ ಗೊತ್ತಿಲ್ಲ. ಮಾಡಿದರೂ ನಮ್ಮದೇನು ಅಭ್ಯಂತರವಿಲ್ಲ. ನಮ್ಮ ನಿರ್ಧಾರ ಮಾತ್ರ ಒಂದೇ ಆಗಿದೆ ಎಂದರು.
ಈ ಸಂದರ್ಭ ಬೃಹತ್ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಪ್ರಮೋದ್ ಶೆಟ್ಟಿ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಇದರ ಕನ್ಸಲ್ಟೆಂಟ್ ಮುಖ್ಯಸ್ಥ ಸಂದೀಪ್ ನಾಡಿಗೇರ್ ಮತ್ತು ತಂಡದ ಸದಸ್ಯರಾದ ಕಿರಣ್, ದರ್ಶನ್, ಸೆಬಾಸ್ಟಿನ್, ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ನಾೖಕ್, ಸದಸ್ಯರಾದ ಎ. ಕೃಷ್ಣ ರಾವ್ ಆರ್ತಿಲ, ದೇವದಾಸ್ ರೈ, ವೆಂಕಪ್ಪ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಮುರಳೀಧರ ರೈ ಮಠಂತಬೆಟ್ಟು, ಯು.ಟಿ. ತೌಸೀಫ್, ಆದಂ ಕೊಪ್ಪಳ, ದೇವಾಲಯದ ಸಿಬ್ಬಂದಿ ಕೃಷ್ಣಪ್ರಸಾದ್ ಬಡಿಲ, ದಿವಾಕರ ಗೌಡ, ಕೃಷ್ಣಪ್ರಸಾದ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.