ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದ ಪುತ್ತೂರು ಘಟಕದಲ್ಲಿ ಕಳೆದ 33 ವರ್ಷಗಳಿಂದ ನಿರ್ವಾಹಕರಾಗಿ, ಸಂಚಾರ ನಿಯಂತ್ರಕರಾಗಿ ಹಾಗೂ ಬಸ್ಸು ನಿಲ್ದಾಣದ ಮೇಲುಸ್ತುವಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಅಬ್ಬಾಸ್ ಕೆ.ಕುಂತೂರು ಏ.30ರಂದು ಸೇವಾ ನಿವೃತ್ತಿಯಾಗಲಿದ್ದಾರೆ.
ಅಬ್ಬಾಸ್ ಅವರು 1992ರಲ್ಲಿ ಪುತ್ತೂರು ಘಟಕದಲ್ಲಿ ನಿರ್ವಾಹಕರಾಗಿ ಸೇವೆ ಆರಂಭಿಸಿದ್ದರು. 25 ವರ್ಷ ನಿರ್ವಾಹಕರಾಗಿ ಸೇವೆ ಸಲ್ಲಿಸಿದ ಬಳಿಕ ಸಂಚಾರ ನಿಯಂತ್ರಕ ಹಾಗೂ ಬಸ್ಸು ನಿಲ್ದಾಣದ ಮೇಲುಸ್ತುವಾರಿಯಾಗಿ ಭಡ್ತಿ ಪಡೆದುಕೊಂಡಿದ್ದರು. ನೆಲ್ಯಾಡಿ, ಕಡಬ, ಉಪ್ಪಿನಂಗಡಿ ಬಸ್ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಪುತ್ತೂರು ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಬ್ಬಾಸ್ ಅವರು ಪುತ್ತೂರು ಘಟಕವೊಂದರಲ್ಲೇ 33 ವರ್ಷ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರನ್ನು ಇಲಾಖೆಯಲ್ಲಿ ಸಲ್ಲಿಸಿದ ಉತ್ತಮ ಸೇವೆಗಾಗಿ ಹಲವು ಇಲಾಖೆ, ವಿವಿಧ ಸಂಘ ಸಂಸ್ಥೆ, ಸಾರಿಗೆ ನಿಗಮದಿಂದ ಸನ್ಮಾನ, ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸುಮಾರು 93 ಅಪಘಾತ ಪ್ರಕರಣದಲ್ಲಿ 85 ಪ್ರಕರಣ ರಾಜಿಯಲ್ಲಿ ಇತ್ಯರ್ಥಪಡಿಸುವ ಮೂಲಕ ಚಾಲಕ, ನಿರ್ವಾಹಕರ ಮತ್ತು ಅಧಿಕಾರಿ ವರ್ಗದವರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಬ್ಬಾಸ್ ಅವರು ಇಲಾಖೆಯ ಅತ್ಯುತ್ತಮ ನೌಕರ ಎಂಬ ಪ್ರಶಸ್ತಿಯೂ ಪಡೆದುಕೊಂಡಿದ್ದರು. ಬಿ.ಕಾಂ.ಪದವೀಧರರೂ ಆಗಿರುವ ಅಬ್ಬಾಸ್ ಅವರು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ.