ರಿಕ್ಕಿ ರೈ ಶೂಟೌಟ್ ಪ್ರಕರಣ : ಬಿಡದಿ ಠಾಣೆಯಲ್ಲಿ ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ವಿಚಾರಣೆ

0

ಬೆಂಗಳೂರು: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ 2ನೇ ಆರೋಪಿಯಾಗಿರುವ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ ಅವರನ್ನು ಬಿಡದಿ ಠಾಣೆ ಪೊಲೀಸರು ಏ.27ರಂದು ವಿಚಾರಣೆ ನಡೆಸಿದರು.


ಬೆಳಿಗ್ಗೆ 11 ಗಂಟೆ ಸುಮಾರಿಗೆ ಠಾಣೆಗೆ ಬಂದ ಅವರನ್ನು ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ಅವರನ್ನು ಒಳಗೊಂಡ ತಂಡವು ಸತತ 5 ತಾಸು ವಿಚಾರಣೆಗೆ ಒಳಪಡಿಸಿತು. ವಿಚಾರಣೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅನುರಾಧ, ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆದರೂ, ಯಾಕೆ ನನ್ನ ಮೇಲೆ ಆರೋಪ ಮಾಡಿ ದೂರು ಕೊಟ್ಟಿದ್ದಾರೊ ಗೊತ್ತಿಲ್ಲ. ವಿಚಾರಣೆ ಸಂದರ್ಭದಲ್ಲಿ ಪೊಲೀಸರಿಗೆ ಎಲ್ಲಾ ಮಾಹಿತಿ ನೀಡಿರುವೆ ಎಂದರು.

ರಿಕ್ಕಿ ಮತ್ತು ನನ್ನ ನಡುವೆ ಕೋರ್ಟ್‌ನಲ್ಲಿದ್ದ ಜಮೀನು ವ್ಯಾಜ್ಯ ಪ್ರಕರಣವು ರಾಜಿಯಾಗಿ ಸುಖಾಂತ್ಯ ಕಂಡಿದೆ. ಕಳೆದ ಅಕ್ಟೋಬರ್‌ನಲ್ಲಿ ಕೋರ್ಟ್‌ಗೆ ಸಹಿ ಹಾಕಲು ಬಂದಾಗಷ್ಟೇ ರಿಕ್ಕಿ ಅವರನ್ನು ನಾನು ನೋಡಿದ್ದೆ. ಉಳಿದಂತೆ ನನಗೂ ಮತ್ತು ಅವರಿಗೂ ಯಾವುದೇ ಸಂಪರ್ಕವಿಲ್ಲ ಎಂದು ತಿಳಿಸಿದರು.


ಮುತ್ತಪ್ಪ ರೈ ಮೊದಲ ಪತ್ನಿ ರೇಖಾ ರೈ 2013ರಲ್ಲಿ ನಿಧನರಾಗಿದ್ದರು. ಬಳಿಕ ರೈ ಬೆಂಗಳೂರಿನಲ್ಲಿ ನೆಲೆಸಿದ್ದ ಸಕಲೇಶಪುರ ಮೂಲದ ಅನುರಾಧ ಅವರನ್ನು 2016ರಲ್ಲಿ ಮದುವೆಯಾಗಿದ್ದರು. 2020ರಲ್ಲಿ ರೈ ತೀರಿಕೊಂಡ ಬಳಿಕ ಆಸ್ತಿ ವಿಚಾರಕ್ಕಾಗಿ ರೈ ಪುತ್ರರು ಹಾಗೂ ಅನುರಾಧ ನಡುವೆ ವ್ಯಾಜ್ಯ ಉಂಟಾಗಿತ್ತು. ಈ ವೇಳೆ ಅನುರಾಧ ಕೋರ್ಟ್ ಮೆಟ್ಟಿಲೇರಿದ್ದರು.

LEAVE A REPLY

Please enter your comment!
Please enter your name here