ಉಪ್ಪಿನಂಗಡಿ: ಹಾಡಹಗಲೇ ಮದ್ಯ ಹಾಗೂ ಮಾದಕ ದ್ರವ್ಯ ಸೇವಿಸಿ ಬೀದಿಯಲ್ಲೆ ಹೊಡೆದಾಟ ನಡೆಸಿದ ಉತ್ತರ ಭಾರತೀಯ ಕಾರ್ಮಿಕರನ್ನು ಬಲಪ್ರಯೋಗದಿಂದ ನಿಯಂತ್ರಿಸಿದ ಘಟನೆ ಉಪ್ಪಿನಂಗಡಿಯಲ್ಲಿ ಎ.28ರಂದು ನಡೆದಿದೆ.
ಹೆದ್ದಾರಿ ವಿಸ್ತರಣೆಯ ಕಾಮಗಾರಿಯ ನೆಲೆಯಲ್ಲಿ ಆಗಮಿಸಿದ್ದ ಕಾರ್ಮಿಕರ ತಂಡದೊಳಗೆ ಹಣಕಾಸಿನ ವಿಚಾರದಲ್ಲಿ ಮಾತಿನ ಚಕಮಕಿ ನಡೆದು ಬೀದಿ ರಂಪಾಟವಾಯಿತ್ತಲ್ಲದೆ ಅವ್ಯಾಚ ಪದಗಳಿಂದ ನಿಂದಿಸುತ್ತಾ, ವಾಹನ ಸಂಚಾರಕ್ಕೆ ತಡೆಯೊಡ್ಡುವ ರೀತಿಯಲ್ಲಿ ಹೊಡೆದಾಟ ನಡೆಸಿದ್ದರು. ಪರಿಸ್ಥಿತಿ ಅಪಾಯಕಾರಿಯಾಗಿ ಪರಿವರ್ತನೆ ಕಾಣುವ ಹಂತ ತಲುಪಿದಾಗ ಮಧ್ಯ ಪ್ರವೇಶಿಸಿದ ಸ್ಥಳೀಯ ವರ್ತಕರು ಹೊಡೆದಾಟ ನಿರತರಾದವರನ್ನು ಬೆತ್ತದ ಹೊಡೆತ ನೀಡಿ ಚದುರಿಸಿದರು.
ಸ್ಥಳೀಯ ವರ್ತಕರ ಕೈಯಿಂದ ಅನಿರೀಕ್ಷಿತ ಲಭಿಸಿದ ಬೆತ್ತದೇಟಿನಿಂದ ಅಮಲು ಇಳಿದಂತಾಗಿ ಅಲ್ಲೇ ಅಲೆದಾಟ ನಡೆಸಿದ ಗುಂಪಿನ ಒರ್ವ ಕಾರ್ಮಿಕ, ತಾವು ೯೦ ಎಂಎಲ್ ಮದ್ಯ ಸೇವಿಸಿದ ಬಳಿಕ ಒಂದಷ್ಟು ಗಾಂಜಾ ಸೇವನೆ ಮಾಡಿದ ಕಾರಣದಿಂದ ನಿಯಂತ್ರಣ ತಪ್ಪಿ ಸಂಘರ್ಷಕ್ಕೆ ಇಳಿಯುವಂತಾಯಿತು ಎಂದು ತಪ್ಪೊಪ್ಪಿಕೊಂಡ. ಇತ್ತ ಮದ್ಯ ಸೇವನೆ ಸಾಲದೆಂಬಂತೆ ಮಾದಕ ದ್ರವ್ಯಗಳ ಸೇವನೆಯಿಂದಾಗಿ ಸಮಾಜದಲ್ಲಿ ಅಸಹನೀಯ ವಾತಾವರಣ ನಿರ್ಮಾಣವಾಗುತ್ತಿರುವುದನ್ನು ಆಡಳಿತ ವ್ಯವಸ್ಥೆ ಗಮನಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.