ದ.ಕ.ಜಿಲ್ಲೆಯಲ್ಲಿ ಪೋಡಿ ವಿಶೇಷ ಆಂದೋಲನ – ಹೊರ ಜಿಲ್ಲೆಗಳ ಸರ್ವೇಯರ್‌ಗಳ ಬಳಕೆ

0

ಮಂಗಳೂರು: ದರಖಾಸ್ತು ಪೋಡಿ ಪ್ರಕರಣಗಳ ಪ್ರಗತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಇದಕ್ಕೆ ಇನ್ನಷ್ಟು ವೇಗ ನೀಡುವ ಉದ್ದೇಶದಿಂದ ಹೊರ ಜಿಲ್ಲೆಯ ಸರ್ವೇಯರ್‌ಗಳನ್ನೂ ನಿಯೋಜಿಸಿ ವಿಶೇಷ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ತಿಳಿಸಿದ್ದಾರೆ. ಜಮೀನು ಸರ್ವೆಗೆ ಸರ್ವೆಯರ್‌ಗಳು ಬಂದಾಗ ಅರ್ಜಿದಾರರು ಸಹಕರಿಸಿ ಅಗತ್ಯ ಮಾಹಿತಿ ಒದಗಿಸಬೇಕು ಎಂದು ಅವರು ಹೇಳಿದ್ದಾರೆ.

ಒಂದು ಸರ್ಕಾರಿ ಸರ್ವೆ ನಂಬರ್‌ನಲ್ಲಿರುವ ಮಂಜೂರುದಾರರಿಗೆ ದರಖಾಸ್ತು ಪೋಡಿ ಮಾಡುವ ವೇಳೆ ಅದೇ ಸರ್ವೆ ನಂಬರ್‌ನಲ್ಲಿರುವ ಉಳಿದ ವ್ಯಕ್ತಿಗಳ ಜಮೀನನ್ನು ಏಕಕಾಲಕ್ಕೆ ಅಳತೆ ಮಾಡಿ ಪೋಡಿ ಮಾಡಲು ಸರ್ಕಾರವು 1 ರಿಂದ 5 ಎಂಬ ನಮೂನೆ ರೂಪಿಸಿದೆ. ಕಂದಾಯ ಆಯುಕ್ತಾಲಯವು ಇದಕ್ಕಾಗಿ ಪ್ರತ್ಯೇಕ ತಂತ್ರಾಂಶ ಅಭಿವೃದ್ಧಿಪಡಿಸಿದೆ ಎಂದರು.

ಜಿಲ್ಲೆಯಲ್ಲಿ 1ರಿಂದ 5 ಪ್ರಕರಣಗಳ ಸುಮಾರು 30,685 ಅರ್ಜಿ ನಮೂದು ಮಾಡಲಾಗಿದೆ.ಈ ಪೈಕಿ 11,096 ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಸರ್ಕಾರ ನಿಗದಿಪಡಿಸಿದ ತಂತ್ರಾಂಶದ ಮೂಲಕ ಗ್ರಾಮ ಆಡಳಿತಾಧಿಕಾರಿ ಹಂತದಲ್ಲಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. 8,389 ಅರ್ಜಿಗಳನ್ನು ತಹಶೀಲ್ದಾರರ ಹಂತದಲ್ಲಿ ಇತ್ಯರ್ಥಪಡಿಸುವ ಮೂಲಕ 24,639 ಮಂಜೂರುದಾರರನ್ನು ಗುರುತಿಸಿ ಸರ್ವೆ ಇಲಾಖೆಗೆ ಪೋಡಿ ಕಾರ್ಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಜಿಲ್ಲೆಯಲ್ಲಿ ಸರ್ಕಾರಿ ಸರ್ವೆಯರ್‌ಗಳು 10 ಮಂದಿ ಮಾತ್ರ ಇದ್ದು, ಪರವಾನಗಿ ಹೊಂದಿದ ಜಿಲ್ಲೆಯ ಸರ್ವೆಯರ್‌ಗಳನ್ನು ಪೋಡಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಎರಡು ವಾರಗಳಿಂದ ಸರ್ವೆಯರ್‌ಗಳು ಎಲ್ಲ ತಾಲ್ಲೂಕುಗಳಲ್ಲಿ ಸರ್ವೆ ಆರಂಭಿಸಿದ್ದು, ಈ ಕಾರ್ಯಕ್ಕೆ ವೇಗ ನೀಡಲು ಸರ್ಕಾರದಿಂದ ಅನುಮತಿ ಪಡೆದು ಮೈಸೂರು, ಚಾಮರಾಜನಗರ, ಮಂಡ್ಯ ಮತ್ತಿತರ ಜಿಲ್ಲೆಗಳಿಂದ ಹೆಚ್ಚುವರಿ 50 ಸರ್ವೆಯರ್‌ಗಳನ್ನು ಕರೆಯಿಸಿಕೊಳ್ಳಲಾಗಿದೆ. ಒಟ್ಟು 129 ಸರ್ವೆಯರ್‌ಗಳು ಜಿಲ್ಲೆಯಲ್ಲಿ ಸರ್ವೆ ಮಾಡಿ, ಗಡಿ ಗುರುತು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಮೇ 9ರ ಒಳಗಾಗಿ ಗರಿಷ್ಠ ಪ್ರಗತಿ ಸಾಧಿಸಲು ಯೋಜನೆ ರೂಪಿಸಲಾಗಿದೆ ಎಂದು ಡಿಸಿ ಹೇಳಿದರು.

ಸರ್ವೆಯರ್‌ಗಳ ಜೊತೆ ಗ್ರಾಮ ಸಹಾಯಕರು ಕೂಡ ಇರುತ್ತಾರೆ. ಸರ್ವೆಯರ್‌ಗಳಿಗೆ ಗುರುತಿನ ಚೀಟಿ ನೀಡಲಾಗಿದೆ. ಜಮೀನು ಮಂಜೂರಿದಾರರು ಸ್ಥಳದಲ್ಲಿ ಹಾಜರಿಲ್ಲದಿದ್ದರೆ, ಸ್ಥಳದ ಮಾಹಿತಿ ಆಧರಿಸಿ ಅಳತೆ ಮಾಡಲಾಗುತ್ತದೆ ಅಥವಾ ದರಖಾಸ್ತು ಮಂಜೂರಾತಿಯನ್ನು ರದ್ದುಪಡಿಸಲು ಕ್ರಮಕೊಳ್ಳಲಾಗುತ್ತದೆ ಎಂದರು.

ಮೇ.9ರೊಳಗೆ ಗರಿಷ್ಟ ಪ್ರಗತಿ ಸಾಽಸಲು ಉಪ ವಿಭಾಗ ಹಂತದಲ್ಲಿ ಉಪ ವಿಭಾಗಾಧಿಕಾರಿಗಳು ಹಾಗೂ ತಾಲೂಕು ಮಟ್ಟದಲ್ಲಿ ಎಲ್ಲಾ ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲೆಯ ಸರಕಾರಿ ಸರ್ವೆಯರ್‌ಗಳ ಜತೆಯಲ್ಲಿ ಇದೀಗ ಹೊರ ಜಿಲ್ಲೆಗಳಾದ ಮೈಸೂರು, ಮಂಡ್ಯ ಸೇರಿದಂತೆ ಇತರ ಜಿಲ್ಲೆಗಳ ಲೈಸೆನ್ಸ್ ಹೊಂದಿದ ಸರ್ವೇಯರ್‌ಗಳು ಸೇರಿ 129 ಸರ್ವೇಯರ್‌ಗಳು ಜಿಲ್ಲೆಯಲ್ಲಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವುದೇ ಶುಲ್ಕವಿಲ್ಲದೆ ದರಖಾಸ್ತು ಪ್ರಕರಣಗಳ ಪೋಡಿ ಆಂದೋಲನ ನಡೆಯುತ್ತಿದ್ದು ಜಮೀನು ಮಂಜೂರಿದಾರರು, ಸರ್ವೆಯರ್‌ಗಳು ಸ್ಥಳಕ್ಕೆ ಬಂದಾಗ ಹಾಜರಿದ್ದು ಗಡಿಗುರುತು ತೋರಿಸಬೇಕು

-ಮುಲ್ಲೈ ಮುಹಿಲನ್,
ದ.ಕ.ಜಿಲ್ಲಾಧಿಕಾರಿ

LEAVE A REPLY

Please enter your comment!
Please enter your name here