ಉಪ್ಪಿನಂಗಡಿ: ಇಳಂತಿಲ ಗ್ರಾ.ಪಂ. ವ್ಯಾಪ್ತಿಯ ಕನ್ಯಾರಕೋಡಿ ಪ್ರದೇಶಕ್ಕೆ ಆಶಾ ಕಾರ್ಯಕರ್ತೆ ಬರುತ್ತಿಲ್ಲ. ಈ ಬಗ್ಗೆ ಕಳೆದ ಮೂರು ವರ್ಷದ ಹಿಂದೆ ಗ್ರಾ.ಪಂ.ಗೆ ದೂರು ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಈ ಪರಿಸರದ ಗರ್ಭೀಣಿಯೋರ್ವರಿಗೆ ಗರ್ಭ ಧರಿಸಿ ಐದು ತಿಂಗಳಾದರೂ ತಾಯಿ ಕಾರ್ಡ್ ಇನ್ನೂ ಸಿಕ್ಕಿಲ್ಲ ಎಂಬ ಗಂಭೀರ ಆರೋಪ ಇಳಂತಿಲ ಗ್ರಾ.ಪಂ.ನ ಗ್ರಾಮ ಸಭೆಯಲ್ಲಿ ಕೇಳಿ ಬಂತು.

ಗ್ರಾ.ಪಂ. ಅಧ್ಯಕ್ಷ ವಸಂತ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಇಳಂತಿಲ ಗ್ರಾ.ಪಂ.ನ ಗ್ರಾಮ ಸಭೆಯಲ್ಲಿ ಸಿಎಚ್‌ಒ ಮಧುಶ್ರೀ ಪಿ. ಅವರು, ಆರೋಗ್ಯ ಮಾಹಿತಿ ನೀಡುತ್ತಿದ್ದ ಸಂದರ್ಭ ವಿಷಯ ಪ್ರಸ್ತಾಪಿಸಿದ ಅಬ್ದುಲ್ ಅಝೀಝ್ ಕನ್ಯಾರಕೋಡಿ ಅವರು, ಗರ್ಭ ಧರಿಸಿ ಎಷ್ಟು ತಿಂಗಳಾದಾಗ ಸರಕಾರದಿಂದ ತಾಯಿ ಕಾರ್ಡ್ ನೀಡುವುದೆಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಮಧುಶ್ರೀ ಪಿ. ಅವರು, ಮೂರು ತಿಂಗಳು ಆದ ಬಳಿಕ ತಾಯಿ ಕಾರ್ಡ್ ನೀಡಲಾಗುತ್ತದೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಅಬ್ದುಲ್ ಅಝೀಝ್ ಅವರು ಕನ್ಯಾರಕೋಡಿಯ ಮಹಿಳೆಯೋರ್ವರು ಗರ್ಭ ಧರಿಸಿ ಐದು ತಿಂಗಳಾದರೂ ಅವರಿಗೆ ತಾಯಿ ಕಾರ್ಡ್ ಲಭ್ಯವಾಗಿಲ್ಲ. ಅವರ ಮನೆಗೆ ಈವರೆಗೆ ಆಶಾ ಕಾರ್ಯಕರ್ತೆ ಭೇಟಿ ನೀಡಿಲ್ಲ. ತಾಯಿ ಕಾರ್ಡ್ ಸಿಗದಿರುವುರಿಂದ ಸರಕಾರಿ ಆಸ್ಪತ್ರೆಯ ಸೌಲಭ್ಯಗಳು ಅವರಿಗೆ ಸಿಗುತ್ತಿಲ್ಲ ಎಂದರು. ಈ ಸಂದರ್ಭ ಕನ್ಯಾರ ಕೋಡಿ ಪರಿಸರದ ಇತರರೂ ಮಾತನಾಡಿ ನಮ್ಮ ಪರಿಸರದ ಮನೆಗಳಿಗೆ ಆಶಾ ಕಾರ್ಯಕರ್ತೆ ಭೇಟಿ ನೀಡುತ್ತಲೇ ಇಲ್ಲ. ಈ ಬಗ್ಗೆ ಕಳೆದ ಸುಮಾರು ಮೂರು ವರ್ಷಗಳ ಹಿಂದೆಯೇ ನಾವು ಗ್ರಾ.ಪಂ.ಗೆ ದೂರು ಅರ್ಜಿ ನೀಡಿದ್ದೇವೆ. ಆದರೂ ಅವರು ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಸಭೆಗೆ ಆಶಾ ಕಾರ್ಯಕರ್ತೆಯರು ಹಾಜರಿರಬೇಕು. ಆದರೆ ಆ ಏರಿಯಾದ ಆಶಾ ಕಾರ್ಯಕರ್ತೆ ಈ ಗ್ರಾಮ ಸಭೆಗೂ ಗೈರು ಹಾಜರಾಗಿದ್ದಾರೆ ಎಂದರು.
ಇಳಂತಿಲ ಗ್ರಾಮದ ಹಾರೆಕೆರೆ ಎಂಬಲ್ಲಿ ಕಳೆದ ಸುಮಾರು ಎರಡು ತಿಂಗಳ ಹಿಂದೆ ಮುಂಜಾನೆ ಸುಮಾರು 4:30ರ ಸುಮಾರಿಗೆ ಎಚ್.ಟಿ. ವಿದ್ಯುತ್ ಲೈನೊಂದು ತುಂಡಾಗಿ ರಸ್ತೆಗೆ ಬಿದ್ದಿತ್ತು. ಅದರಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದದ್ದರಿಂದ ಲೈನ್ ಆಫ್ ಮಾಡಲು ಆ ಭಾಗದ ಪವರ್ ಮ್ಯಾನ್‌ಗೆ ಎಷ್ಟು ಫೋನ್ ಮಾಡಿದ್ದರೂ ಅವರು ಫೋನ್ ರಿಸೀವ್ ಮಾಡಿಲ್ಲ. ಬಳಿಕ 5:30ರ ಸುಮಾರಿಗೆ ಬೇರೆ ಕಡೆಯ ಪವರ್‌ಮ್ಯಾನ್ ಅವರಿಗೆ ಫೋನ್ ಮಾಡಿದಾಗ ಅವರು ಬಂದು ಲೈನ್ ಆಫ್ ಮಾಡಿಕೊಟ್ಟರು. ಮೆಸ್ಕಾಂ ಇಲಾಖಾಧಿಕಾರಿಗಳು ಹೇಳುತ್ತಾರೆ, ವಿದ್ಯುತ್ ಸಮಸ್ಯೆಯಾದಲ್ಲಿ ಅಲ್ಲಿನ ಪವರ್ ಮ್ಯಾನ್‌ಗಳಿಗೆ ತಿಳಿಸಿ ಎಂದು, ಆದರೆ ಅವರು ಈ ರೀತಿ ಸ್ಪಂದನೆ ನೀಡದಿದ್ದಾಗ ನಾವೇನು ಮಾಡೋಣ. ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರಿಂದ ಅಂದು ಆ ಸ್ಥಳದಲ್ಲಿ ರಸ್ತೆಯಲ್ಲಿ ಹಾದು ಹೋಗುವ ಸ್ಥಿತಿಯಲ್ಲಿರಲಿಲ್ಲ. ನಾವು ಸುಮಾರು 15 ಮಂದಿ ಅಂದು ನಾವು ಅಷ್ಟು ಹೊತ್ತು ಸ್ಥಳದಲ್ಲಿದ್ದೂ ಅನಾಹುತವಾಗದಂತೆ ಕಾದಿದ್ದೇವೆ. ಆದರೆ ಮೆಸ್ಕಾಂನ ಪವರ್‌ಮ್ಯಾನ್ ಅವರು ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಬೆಳಗ್ಗೆ ಸುಮಾರು 7 ಗಂಟೆಗೆ ಫೋನ್ ರಿಸೀವ್ ಮಾಡಿದರೂ, ವಿಷಯ ಕೇಳಿ ಈಗ ಸರಿಯಾಯಿತ್ತಲ್ಲ ಎಂದು ಸುಮ್ಮನಾಗಿದ್ದಾರೆ. ಅಲ್ಲಿ ಅಂದು ಏನಾದರೂ ಅನಾಹುತಗಳು ನಡೆಯುತ್ತಿದ್ದರೆ ಯಾರು ಹೊಣೆ ಎಂದು ಹಾರಕೆರೆ ಭಾಗದ ನಿವಾಸಿಯೋರ್ವರು ಪ್ರಶ್ನಿಸಿದರು. ಕನ್ಯಾರಕೋಡಿ ಒಳಗುಡ್ಡೆ ಬಳಿ ವಿದ್ಯುತ್ ಕಂಬದ ಸ್ಟೇ ವಯರ್ ಕಟ್ಟಿದ ಮರ ಮುರಿದು ಬಿದ್ದಿದೆ. ಈಗ ಸ್ಟೇವಯರ್ ನೇತಾಡುತ್ತಿದ್ದು, ಕಂಬ ಅಪಾಯದಲ್ಲಿದೆ. ಅಲ್ಲದೇ, ಇಲ್ಲಿ ವಿದ್ಯುತ್ ತಂತಿ ಕೂಡಾ ತೀರಾ ಹಳೆಯದಾಗಿದ್ದು, ತುಂಡಾಗಿ ಬೀಳುವ ಸ್ಥಿತಿಯಲ್ಲಿದೆ ಹಾಗೂ ಕನ್ಯಾರಕೋಡಿ ಅಂಗನವಾಡಿಗೆ ತಿರುಗುವಲ್ಲಿ ವಿದ್ಯುತ್ ಕಂಬವೊಂದು ಬಾಗಿದ್ದು ಅಪಾಯದ ಸ್ಥಿತಿಯಲ್ಲಿದೆ ಎಂಬ ದೂರುಗಳು ಈ ಸಂದರ್ಭ ಕೇಳಿ ಬಂತು.
ಇಳಂತಿಲದಲ್ಲಿ ಸಹಕಾರಿ ಪ್ರಾಥಮಿಕ ಕೃಷಿ ಪತ್ತಿನ ಸಂಘ ಸ್ಥಾಪನೆಯಾಗಬೇಕೆಂಬ ಬೇಡಿಕೆ ಗ್ರಾಮಸ್ಥರಿಂದ ಕೇಳಿ ಬಂದಾಗ ಮಾತನಾಡಿದ ಸದಸ್ಯೆ ಚಂದ್ರಿಕಾ ಭಟ್, ಗ್ರಾಮಕ್ಕೊಂದು ಸಹಕಾರಿ ಸಂಘ ಸ್ಥಾಪಿಸಬೇಕೆಂಬುದು ಸರಕಾರದ ಸುತ್ತೋಲೆಯಲ್ಲಿದೆ. ಈ ಬಗ್ಗೆ ನಿರ್ಣಯ ಅಂಗೀಕರಿಸೋಣ ಎಂದರು.
ಕಳೆದ ಬಾರಿಯ ಗ್ರಾಮ ಸಭೆಯಲ್ಲಿ ಇಳಂತಿಲದ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಬೇರೆ ಜಿಲ್ಲೆಗೆ ನಿಯೋಜನೆಗೊಂಡಿರುವ ಬಗ್ಗೆ ಪ್ರಸ್ತಾಪ ಮಾಡಿ ಅವರ ನಿಯೋಜನೆ ರದ್ದುಪಡಿಸುವಂತೆ ಕೋರಿದ್ದೆವು. ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಅಬ್ದುಲ್ ಲತೀಫ್ ಪ್ರಶ್ನಿಸಿದರು. ಆದರೆ ಗ್ರಾಮ ಸಭೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೂ ಕಾರಣವಾಯಿತು. ಈ ಸಂದರ್ಭ ಅಬ್ದುಲ್ ಲತೀಫ್ ಮಾತನಾಡಿ, ಇನ್ನೇನು ಶಾಲೆಗಳು ಪ್ರಾರಂಭವಾಗ ತೊಡಗುತ್ತವೆ. ಸರಕಾರಿ ಶಾಲೆಯಲ್ಲಿ ಪ್ರತಿ ವರ್ಷನೂ ಶಿಕ್ಷಕರ ಕೊರತೆಯಿರುತ್ತದೆ. ಇದರಿಂದ ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸದೇ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಇನ್ನು ಇಲ್ಲಿ ನೇಮಕಾತಿ ಪಡೆಯುವ ಶಿಕ್ಷಕರು ಸ್ವಲ್ಪ ಸಮಯದ ಬಳಿಕ ಬೇರೆ ಕಡೆ ನಿಯೋಜನೆ ಪಡೆದುಕೊಂಡು ಹೋಗುತ್ತಾರೆ. ಇದರಿಂದ ಶಿಕ್ಷಕರ ನೇಮಕಾತಿ ಇಲ್ಲಿದ್ದರೂ ಅವರು ಮಾತ್ರ ಇಲ್ಲಿ ಕರ್ತವ್ಯಕ್ಕೆ ಲಭ್ಯವಾಗುತ್ತಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವರಿಕೆ ಮಾಡೋಣವೆಂದರೆ ಅವರೇ ಗ್ರಾಮ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾ.ಪಂ. ಸದಸ್ಯ ಈಸುಬು ಯು.ಕೆ. ಮಾತನಾಡಿ, ಶಿಕ್ಷಕರ ನಿಯೋಜನೆಯನ್ನು ರದ್ದು ಮಾಡುವಂತೆ ಕೋರಿ ಗ್ರಾ.ಪಂ.ನಿಂದ ಶಿಕ್ಷಣಾಧಿಕಾರಿಯವರಿಗೆ ಪತ್ರ ಬರೆಯಲಾಗಿದೆ ಎಂದರು. ಈ ಬಗ್ಗೆ ಚರ್ಚೆ ನಡೆದು ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳೋಣ. ಈ ಕುರಿತು ಯಾವುದೇ ಹೋರಾಟಕ್ಕೆ ಗ್ರಾ.ಪಂ. ಗ್ರಾಮಸ್ಥರೊಂದಿಗಿದೆ ಎಂದರು.
ಕಾಯರ್ಪಾಡಿ- ಕನ್ಯಾರಕೋಡಿ ರಸ್ತೆಯಲ್ಲಿ ಜೆಜೆಎಂ ಪೈಪ್‌ಲೈನ್‌ನಿಂದಾಗಿ ಮಣ್ಣು ರಸ್ತೆಯ ಮೇಲೆ ಬಿದ್ದಿದೆ. ಕೆಲವು ಕಡೆ ಅವರು ಇದ್ದ ಚರಂಡಿಯನ್ನು ಮುಚ್ಚಿದ್ದಾರೆ ಎಂಬ ಆರೋಪ ಕೇಳಿ ಬಂತು. ಈ ಬಗ್ಗೆ ಗುತ್ತಿಗೆದಾರರಿಗೆ ಅದನ್ನು ಸರಿ ಮಾಡಿ ಕೊಡಲು ತಿಳಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಮಿತ್ತಿಲದಲ್ಲಿ ಹೊಳೆ ಬದಿಗೆ ಹೋಗುವ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಕಳೆದ ಗ್ರಾಮ ಸಭೆಯಲ್ಲಿ ನಾವು ಬೇಡಿಕೆ ಮಂಡಿಸಿದ್ದೇವೆ. ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ರಮೇಶ್ ಅವರು ಪ್ರಸ್ತಾಪಿಸಿದಾಗ, ಗ್ರಾ.ಪಂ. ಸದಸ್ಯ ಈಸುಬು ಯು.ಕೆ. ಅವರು ಅದು ಖಾಸಗಿ ವ್ಯಕ್ತಿಯೋರ್ವರ ವರ್ಗ ಜಾಗವಾಗಿದೆ. ಈ ಹಿಂದೆ ಅಲ್ಲಿ ಮಾನವೀಯತೆಯ ನೆಲೆಯಲ್ಲಿ ಕಾಲು ದಾರಿ ಕೊಟ್ಟಿದ್ದರು. ಆದರೆ ಈಗ ಅದನ್ನು ರಸ್ತೆಯನ್ನಾಗಿ ಮಾಡಲು ಅವರ ಅಕ್ಷೇಪ ಇದೆ. ಆದ್ದರಿಂದ ಆ ದಾರಿಯ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಸವಿತಾ ಎಚ್., ಸದಸ್ಯರಾದ ಸಿದ್ದೀಕ್, ಉಷಾ ಯು., ರಮೇಶ ಎನ್., ಜಾನಕಿ ಉಪಸ್ಥಿತರಿದ್ದರು. ಗ್ರಾಮಸ್ಥರಾದ ಪವಿತ್ರಾ, ನಮಿತಾ, ಹೇಮಲತಾ, ವಿಶ್ವನಾಥ ಪೂಜಾರಿ, ಇಸುಬು ಮೇದರಬೆಟ್ಟು, ಇಬ್ರಾಹೀಂ, ಜನಾರ್ದನ ಪೂಜಾರಿ, ಆದಂ ಕನ್ಯಾರಕೋಡಿ, ರಾಧಿಕಾ, ಸುಲೈಮಾನ್, ಚೆನ್ನಪ್ಪ ಪೂಜಾರಿ, ರವೀಶ್ ಮತ್ತಿತರರು ಮಾತನಾಡಿ ಸಲಹೆ-ಸೂಚನೆ ನೀಡಿದರು. ಗ್ರಾ.ಪಂ. ಕಾರ್ಯದರ್ಶಿ ವಿಜಯ, ಸಿಬ್ಬಂದಿ ಸುಂದರ ವರದಿ ವಾಚಿಸಿದರು. ಗ್ರಾ.ಪಂ. ಪಿಡಿಒ ಸುಮಯ್ಯ ಸ್ವಾಗತಿಸಿ, ವಂದಿಸಿದರು.