ಪುತ್ತೂರು: ಹಿಂದೂ ಸಂಘಟನೆಯ ಮುಖಂಡ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಹಿಂಪ ಕರೆ ನೀಡಿದ್ದ ದ.ಕ ಬಂದ್‌ಗೆ ಗ್ರಾಮಾಂತರ ಪ್ರದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ಲಭಿಸಿದೆ. ಪುತ್ತೂರು ಗ್ರಾಮಾಂತರ ಪ್ರದೇಶವಾದ ಸಂಪ್ಯ, ಸಂಟ್ಯಾರು, ಪರ್ಪುಂಜ, ಕುಂಬ್ರ, ತಿಂಗಳಾಡಿ, ಕೆಯ್ಯೂರು, ಮಾಡಾವು, ಕೌಡಿಚ್ಚಾರು, ಕಾವು ಇತ್ಯಾದಿ ಪ್ರದೇಶಗಳಲ್ಲಿ ಬೆಳಿಗ್ಗೆ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಬೆಳಿಗ್ಗೆ 9 ಗಂಟೆಯ ಬಳಿಕ ಕೆಲವೊಂದು ಭಾಗದಲ್ಲಿ ವ್ಯಾಪಾರಸ್ಥರೇ ಸ್ವಯಂ ಪ್ರೇರಿತವಾಗಿ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಿದರು.

ಕುಂಬ್ರ, ತಿಂಗಳಾಡಿ ಭಾಗದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಂದೂಪರ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸುವಂತೆ ಮನವಿ ಮಾಡಿಕೊಂಡ ಬಗ್ಗೆಯೂ ವರದಿಯಾಗಿದೆ.ಕುಂಬ್ರದಲ್ಲಿ ಬೆಳಿಗ್ಗೆ ಎಂದಿನಂತೆ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಸುಮಾರು 11.30 ರ ವೇಳೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ತೆರಳಿ ಬಂದ್ ಮಾಡುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ ಎಂದು ವರದಿಯಾಗಿದೆ.